ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ರಕ್ಷಿಸಿ; ಜೀವಿಸಲು ಬಿಡಿ- ಸಿಪಿಐ (ಎಂ) ರಾಜ್ಯ ಸಮಿತಿ ಒತ್ತಾಯ

Last Updated 25 ಜನವರಿ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ನಿಂದಾಗಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಿ ಅವರ ಬದುಕಿಗೆ ಆಸರೆಯಾಗಬೇಕು’ ಎಂದುಸಿಪಿಐ (ಎಂ) ರಾಜ್ಯ ಸಮಿತಿಯು ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

‘ಜೀವ ರಕ್ಷಿಸಿ, ಜೀವನ ಉಳಿಸಿ, ಜೀವಿಸಲು ಬಿಡಿ’ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯ ಸಮಿತಿಯ ಸದಸ್ಯರುಇ.ಎಂ.ಎಸ್. ಭವನದ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯ ಸಮಿತಿಯ ಸದಸ್ಯ ಎಸ್.ವೈ. ಗುರುಶಾಂತ್, ‘ಕೋವಿಡ್‌ ಬಿಕ್ಕಟ್ಟಿನಿಂದಾಗಿ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಯದಲ್ಲಿ ಜನರಿಗೆ ಆಸರೆಯಾಗಬೇಕಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಲಾಭಕ್ಕಾಗಿ ಜನವಿರೋಧಿ ನೀತಿಗಳನ್ನು ಅನುಷ್ಠಾನಗೊಳಿಸುತ್ತಿವೆ. ಕೋಮುವಾದ ಹಾಗೂ ಮತೀಯ ತಂತ್ರ ಅನುಸರಿಸಿ ಜನರ ಒಗ್ಗಟ್ಟು ಮುರಿಯುತ್ತಿದ್ದು ಆ ಮೂಲಕ ಹೋರಾಟಗಳನ್ನು ಹತ್ತಿಕ್ಕುತ್ತಿವೆ. ಹೀಗಾಗಿ ಐಕ್ಯತೆಯತ್ತ ಚಿತ್ತ ಹರಿಸಿ ಮತೀಯ ವಿಭಜಕ ಪ್ರಯತ್ನಗಳನ್ನು ಹಿಮ್ಮೆಟ್ಟಿಸಬೇಕು’ ಎಂದರು.

ಸಿಪಿಐ(ಎಂ) ರಾಜ್ಯ ಮುಖಂಡ ಜಿ.ಎನ್ ನಾಗರಾಜ್, ‘ನೆರೆಯ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಂತಹ ಬಡ ಹಾಗೂ ಸಣ್ಣ ರಾಷ್ಟ್ರಗಳು ಕೋವಿಡ್‌ ಸಮಯದಲ್ಲಿ ಬಿಡುಗಡೆ ಮಾಡಿದಷ್ಟು ಹಣವನ್ನೂ ಕೇಂದ್ರ ಸರ್ಕಾರ ಕೊಡಲಿಲ್ಲ. ಜನತೆಗೆ ಪರಿಹಾರ ನೀಡದೆ ಅವರನ್ನು ದಮನಿಸಲು ಮುಂದಾಗಿರುವುದು ಖಂಡನಾರ್ಹ. ಇಂತಹ ನೀತಿ ಬಿಟ್ಟು ಜನರ ನೆರವಿಗೆ ಧಾವಿಸಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರವು ಪ್ರತಿ ಕುಟುಂಬಕ್ಕೆ ತಲಾ ₹10 ಸಾವಿರ ಪರಿಹಾರ ಒದಗಿಸಬೇಕು. ತಲಾ 10 ಕೆ.ಜಿ.ಪಡಿತರವನ್ನು ಉಚಿತವಾಗಿ ನೀಡಬೇಕು. 200 ದಿನಗಳಿಗೆ ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸಬೇಕು. ಅದನ್ನು ನಗರಕ್ಕೂ ವಿಸ್ತರಿಸಬೇಕು. ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಶಿಕ್ಷಣದಿಂದ ವಿಮುಖರಾಗದಂತೆ ಕ್ರಮ ಕೈಗೊಳ್ಳಬೇಕು. ಅವರ ದಾಖಲಾತಿ ಶುಲ್ಕಗಳನ್ನು ಮನ್ನಾ ಮಾಡಬೇಕು. ಕಾರ್ಮಿಕ ಸಂಹಿತೆ ಜಾರಿಗೆ ತಡೆ ನೀಡಬೇಕು. ಭೂ ಸುಧಾರಣಾ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ, ಮತಾಂತರ ನಿಷೇಧ, ಜಾನುವಾರು ಹತ್ಯೆ ಮಸೂದೆಗಳನ್ನು ಹಿಂಪಡೆಯಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT