ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಶುಲ್ಕ ಹೇರಿಕೆ ವಿರುದ್ಧ ಸಿಪಿಎಂ ಪ್ರತಿಭಟನೆ

Last Updated 23 ಡಿಸೆಂಬರ್ 2020, 20:37 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ನಗರ ಮತ್ತು ಗ್ರಾಮೀಣ ಯೋಜನಾ ಕಾಯ್ದೆ 2020ರ ತಿದ್ದುಪಡಿ ಕಾಯ್ದೆಯಲ್ಲಿ ಅಭಿವೃದ್ಧಿ ಶುಲ್ಕ ವಿಧಿಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸ್ ವಾದಿ) ಕಾರ್ಯಕರ್ತರು ಬಿಬಿಎಂಪಿ ಕೇಂದ್ರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

’ನೂತನ ಕಾಯ್ದೆಯಲ್ಲಿ ಪ್ರತಿ ಆಸ್ತಿಯ ಮೇಲೆ ಶೇಕಡ 1.5 ಅಭಿವೃದ್ಧಿ ಶುಲ್ಕ ವಿಧಿಸಬಹುದು. ಜೊತೆಗೆ ಕಟ್ಟಡದ ನವೀಕರಣ ಮಾಡುವಾಗಲೂ ಪೂರ್ತಿ ಆಸ್ತಿಗೆ ಶುಲ್ಕ ಪಾವತಿಸಬೇಕಿದೆ. ಇದು ಜನವಿರೋಧಿ ಮತ್ತು ಬಿಬಿಎಂಪಿ ಹಗಲು ದರೋಡೆ‘ ಎಂದು ಪ್ರತಿಭಟನಕಾರರು ಆರೋಪಿಸಿದರು.

ಪ್ರತಿಭಟನಕಾರರಿಂದ ಮನವಿ ಪತ್ರ ಸ್ವೀಕರಿಸಿದ ವಿಶೇಷ ಆಯುಕ್ತ ಡಿ. ರಂದೀಪ್, ‘ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಆಯುಕ್ತರ ಗಮನಕ್ಕೆ ತಂದು, ಸಾರ್ವಜನಿಕರೊಂದಿಗೆ ಸಮಗ್ರವಾಗಿ ಚರ್ಚಿಸಿ ಕಾಯ್ದೆ ಅನುಷ್ಠಾನ ಮಾಡಲಾಗುವುದು’ ಎಂದರು

‘ಕಸ ನಿರ್ವಹಣೆಗಾಗಿ ಪ್ರತಿ ಮನೆಗೆ ಮಾಸಿಕ ₹200 ಸಂಗ್ರಹಿಸುವ ಕ್ರಮದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದೆಯಾದರೂ, ಕಸ ನಿರ್ವಹಣೆಗೆ ಪ್ರತ್ಯೇಕ ಮಂಡಳಿ ರಚಿಸುವ ಮೂಲಕ ನಗರದ ಕಸ ಮಾಫಿಯಾವನ್ನು ಕೊಬ್ಬಿಸುವ ಕ್ರಮ ಇದಾಗಿದೆ’ ಎಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ‍ ಕೆ.ಎನ್.ಉಮೇಶ್ ಆರೋಪಿಸಿದರು.

‘ಅಕ್ರಮ ಕಟ್ಟಡಗಳಿಗೆ ಶೇ. 15 ರಷ್ಟು ದಂಡ ವಿಧಿಸಿ ಸಕ್ರಮಗೊಳಿಸುವ ಕ್ರಮವು ಅಕ್ರಮಗಳಿಗೆ ಮಾನ್ಯತೆ ನೀಡುವುದೇ ಆಗಿದೆ. ಇದರಿಂದಾಗಿ ಇದೀಗ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ದುಪ್ಪಟ್ಟು ಮಾಡುವ ಕ್ರಮ’ ಎಂದು ಸಿಪಿಐ(ಎಂ) ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ‍ ಪ್ರತಾಪ ಸಿಂಹ ಆರೋಪಿಸಿದರು.

ಸಿಪಿಐ (ಎಂ) ಮುಖಂಡರಾದ ಡಾ.ಕೆ.ಪ್ರಕಾಶ್, ಎಚ್.ಎನ್.ಗೋಪಾಲಗೌಡ, ಗೌರಮ್ಮ, ಗೋಪಾಲಕೃಷ್ಣ ಅರಳಹಳ್ಳಿ, ಟಿ.ಸುರೇಂದ್ರರಾವ್, ಕೆ.ಎಸ್.ವಿಮಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT