ಗುರುವಾರ , ಮಾರ್ಚ್ 23, 2023
21 °C
ಮಕ್ಕಳು ಸೇರಿದಂತೆ 50ಕ್ಕೂ ಅಧಿಕ ಮಂದಿಯ ಕಣ್ಣಿಗೆ ಹಾನಿ

ಹಬ್ಬ ಮುಗಿದರೂ ನಿಲ್ಲದ ಪಟಾಕಿ ಅವಘಡ: 50ಕ್ಕೂ ಅಧಿಕ ಮಂದಿಯ ಕಣ್ಣಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೀಪಾವಳಿ ಹಬ್ಬ ಮುಗಿದರೂ ನಗರದಲ್ಲಿ ಪಟಾಕಿ ಅವಘಡಗಳು ನಿಂತಿಲ್ಲ. ಮಕ್ಕಳು ಸೇರಿದಂತೆ ವಿವಿಧ ವಯೋಮಾನದ 50ಕ್ಕೂ ಅಧಿಕ ಮಂದಿಯ ಕಣ್ಣಿಗೆ ಪಟಾಕಿಯಿಂದ ಹಾನಿ ಉಂಟಾಗಿದ್ದು, ಮಿಂಟೊ ಸೇರಿದಂತೆ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಅವರು ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಪಟಾಕಿಯಿಂದ ಸಂಭವಿಸುವ ಅವಘಡದ ಬಗ್ಗೆ ವೈದ್ಯರು ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಹಬ್ಬಕ್ಕೂ ಮುನ್ನ ಜಾಗೃತಿ ಮೂಡಿಸಿದ್ದರು. ಇಷ್ಟಾಗಿಯೂ ಐದು ದಿನಗಳಿಂದ ಪಟಾಕಿ ಅವಘಡಗಳು ನಗರದ ವಿವಿಧೆಡೆ ವರದಿಯಾಗುತ್ತಿವೆ. ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಈವರೆಗೆ 23 ಪ್ರಕರಣಗಳು ವರದಿಯಾಗಿವೆ. ಕಣ್ಣಿಗೆ ಹಾನಿ ಉಂಟಾದವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಪಟಾಕಿ ಸಿಡಿಸುವ ವೇಳೆ ಉಂಟಾದ ಗಾಯಕ್ಕೆ 20 ಮಂದಿ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 

ವಿಕ್ಟೋರಿಯಾದ ಮಹಾಬೋಧಿ ಸುಟ್ಟಗಾಯಗಳ ಕೇಂದ್ರದಲ್ಲಿ 4 ಪ್ರಕರಣಗಳು ವರದಿಯಾಗಿವೆ. ಪಟಾಕಿಯ ಬೆಂಕಿ ಕಿಡಿಗೆ ಮೈ–ಕೈ ಸುಟ್ಟುಕೊಂಡವರು ಹೊರ ರೋಗಿಗಳಾಗಿ ದಾಖಲಾಗಿ, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಗರ್‌ವಾಲ್ ಆಸ್ಪತ್ರೆಯೂ ಸೇರಿದಂತೆ ಕಣ್ಣಿನ ಚಿಕಿತ್ಸೆಯ ವಿವಿಧ ಆಸ್ಪತ್ರೆಗಳಲ್ಲಿ ಕೆಲವರು ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಪಟಾಕಿ ಬಿಡುವ ಸಂದರ್ಭದಲ್ಲಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾದವರಲ್ಲಿ ಶೇ 90 ರಷ್ಟು ಮಂದಿ 18 ವರ್ಷದೊಳಗಿನವರು. ಮಿಂಟೊ ಆಸ್ಪತ್ರೆಯಲ್ಲಿ 5 ವರ್ಷದ ಬಾಲಕನಿಂದ 70 ವರ್ಷದ ವೃದ್ಧೆವರೆಗೂ ‍ಪಟಾಕಿ ಗಾಯಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ.

‘ಗಂಡು ಮಕ್ಕಳು ಹೆಚ್ಚಾಗಿ ಪಟಾಕಿ ಸುಡುವ ವೇಳೆ ಗಾಯಕ್ಕೆ ಒಳಗಾಗುತ್ತಿದ್ದಾರೆ. ಪಟಾಕಿ ಹಚ್ಚುವಾಗ, ವೀಕ್ಷಿಸುವಾಗಲೂ ಕೆಲವರು ಗಾಯಗೊಂಡಿದ್ದಾರೆ. ಪಟಾಕಿಯ ಬೆಂಕಿಯ ಉಷ್ಣದಿಂದ ಮುಖ ಹಾಗೂ ರೆಪ್ಪೆಗಳು ಸುಟ್ಟಿರುವ ಪ್ರಕರಣಗಳೂ ವರದಿಯಾಗಿವೆ. ಕೆಲವರಿಗೆ ಅಧಿಕ ರಕ್ತಸ್ರಾವ ಕಾಣಿಸಿಕೊಂಡಿದೆ’ ಎಂದು ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದರು.

ಕಣ್ಣು ದಾನ: ನೋಂದಣಿ ಶೇ 30 ರಷ್ಟು ಹೆಚ್ಚಳ

‘ನೇತ್ರದಾನಕ್ಕೆ ಸಂಬಂಧಿಸಿದಂತೆ ಹೆಸರು ನೋಂದಣಿ ಮಾಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕೆಲ ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡು, ಮೃತಪಟ್ಟಿದ್ದ ಸಂಚಾರಿ ವಿಜಯ್ ಅವರ ಕಣ್ಣುಗಳನ್ನು ದಾನವಾಗಿ ಪಡೆದು, ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಪುನೀತ್ ರಾಜ್‌ಕುಮಾರ್ ಅವರು ಕೂಡ ಕಣ್ಣುಗಳನ್ನು ದಾನವಾಗಿ ನೀಡಿದ್ದಾರೆ. ಇದರಿಂದಾಗಿ ಜನರಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಮೂಡುತ್ತಿದ್ದು, ದಾನದ ಪ್ರತಿಜ್ಞೆ ಕೈಗೊಳ್ಳುವವರ ಸಂಖ್ಯೆ ಶೇ 30 ರಷ್ಟು ಹೆಚ್ಚಳವಾಗಿದೆ’ ಎಂದು ಡಾ. ಸುಜಾತಾ ರಾಥೋಡ್ ತಿಳಿಸಿದರು.

‘ನಮ್ಮ ಆಸ್ಪತ್ರೆಯಲ್ಲಿ ಪ್ರತಿ ದಿನ ಸರಾಸರಿ 15 ಮಂದಿ ನೇತ್ರ ದಾನಕ್ಕೆ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ಮೊದಲು ನಾವು ಮನವಿ ಮಾಡಿಕೊಂಡಾಗ ಮಾತ್ರ ಕೆಲವರು ದಾನ ಮಾಡುತ್ತಿದ್ದರು’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.