ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಯಲ್ಲಿ 39 ಹೊಸ ಹುದ್ದೆಗಳ ಸೃಷ್ಟಿ: ನಗರ ಯೋಜನೆ ವಿಭಾಗಕ್ಕೆ ಮತ್ತಷ್ಟು ಬಲ

Last Updated 14 ನವೆಂಬರ್ 2021, 21:11 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ನಗರ ಯೋಜನೆ ವಿಭಾಗವನ್ನು ಬಲವರ್ಧನೆ ಮಾಡುವ ಸಲುವಾಗಿ 39 ಹೊಸ ಹುದ್ದೆಗಳನ್ನು ಸೃಷ್ಟಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಅಧಿಕಾರಿಗಳನ್ನು ನಿಯೋಜನೆ ಮಾಡುವ ಮೂಲಕ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

2020ರ ಬಿಬಿಎಂಪಿ ಕಾಯ್ದೆಯ ಕಲಂ 98 (2)ರ ಅನ್ವಯ, ಮುಖ್ಯ ಆಯುಕ್ತರ ಅಧೀನದಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ದರ್ಜೆಗೆ ಕಡಿಮೆ ಇಲ್ಲದಂತೆ ಮುಖ್ಯ ನಗರ ಯೋಜಕರನ್ನು ಮತ್ತು ವಲಯ ಕಚೇರಿಗಳಲ್ಲಿ ವಲಯ ಆಯುಕ್ತರ ಅಧೀನದಲ್ಲಿ ನಗರ ಮತ್ತು ಗ್ರಾಮಾಂತರ ಯೋಜನೆ ಉಪನಿರ್ದೇಶಕರ ದರ್ಜೆಗೆ ಕಡಿಮೆ ಇಲ್ಲದ ವಲಯ ನಗರ ಯೋಜಕರನ್ನು ನಿಯೋಜಿಸಬೇಕು. ಆದರೆ, ಬಿಬಿಎಂಪಿಯ 2020ರ ಮಾರ್ಚ್‌ 16ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಈ ಹುದ್ದೆಗಳ ಪ್ರಸ್ತಾವ ಇಲ್ಲ. ಹಾಗಾಗಿ ಈ ಹುದ್ದೆಗಳನ್ನು ಹೊಸತಾಗಿ ಸೃಷ್ಟಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು 2021ರ ಮಾರ್ಚ್‌ 19ರಂದು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದರು.

ನಗರ ಯೋಜನೆಗಳಿಗೆ ಸಂಬಂಧಿಸಿ ಹಿಂದೆ ಆಗಿರುವ ಹಾಗೂ ಆಗುತ್ತಿರುವ ಉಲ್ಲಂಘನೆಗಳಿಗೆ ಶುಲ್ಕ, ದಂಡ ಸಂಗ್ರಹ ಹೆಚ್ಚಿಸಿ ಪಾಲಿಕೆಯ ಆದಾಯ ಹೆಚ್ಚಿಸಬೇಕು. ಈ ಹುದ್ದೆಗಳ ಭರ್ತಿಯಿಂದ ಉಂಟಾಗುವ ವೆಚ್ಚವನ್ನು ಬಿಬಿಎಂಪಿಯೇ ಭರಿಸಬೇಕು ಎಂಬ ಷರತ್ತುಗಳಿಗೆ ಒಳಪಟ್ಟು ಈ ಹುದ್ದೆಗಳನ್ನು ಸೃಷ್ಟಿಸಲಾಗಿದೆ.

ಬಿಬಿಎಂಪಿಯ ನಗರ ಯೋಜನೆ ವಿಭಾಗದಲ್ಲಿ ಪ್ರಸ್ತುತ ಒಬ್ಬರು ಹೆಚ್ಚುವರಿ ನಿರ್ದೇಶಕರು, ಇಬ್ಬರು ಜಂಟಿ ನಿರ್ದೇಶಕರು, ಇಬ್ಬರು ಉಪ ನಿರ್ದೇಶಕರು, 7 ಮಂದಿ ಸಹಾಯಕ ನಿರ್ದೇಶಕರು, 42 ಮಂದಿ ನಗರ ಯೋಜಕರ ಹುದ್ದೆಗಳಿವೆ. ಹೆಚ್ಚುವರಿ ಹುದ್ದೆಗಳ ಭರ್ತಿಯಿಂದಾಗಿ ಹುದ್ದೆಗಳ ಸಂಖ್ಯೆ 94ಕ್ಕೆ ಏರಲಿದೆ. ಹೊಸ ಹುದ್ದೆಗಳನ್ನು ಬಿಬಿಎಂಪಿ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಲು ಪ್ರತ್ಯೇಕವಾಗಿ ಕ್ರಮ ವಹಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆಯು ಶುಕ್ರವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT