ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆಗೆ ಬಾರದ ಮಾಲೀಕರು; ಸಿಸಿಬಿ ಡೆಡ್‌ಲೈನ್

ಕೆಪಿಎಲ್‌ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ
Last Updated 24 ನವೆಂಬರ್ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಕ್ರಿಕೆಟ್‌ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದು, ಕೆಲ ತಂಡಗಳ ಮಾಲೀಕರು ಮಾತ್ರ ಪದೇ ಪದೇ ವಿಚಾರಣೆಗೆ ಗೈರಾಗುತ್ತಿದ್ದಾರೆ.

’ಪ್ರಕರಣದಲ್ಲಿ ತಂಡಗಳ ಮಾಲೀಕರ ಪಾತ್ರವಿರುವ ಅನುಮಾನ ಇದೆ. ಹೀಗಾಗಿ, ವಿಚಾರಣೆಗೆ ಬರುವಂತೆ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಅಷ್ಟಾದರೂ ಕೆಲವರು ವಿಚಾರಣೆಗೆ ಬರುತ್ತಿಲ್ಲ. ನ. 28ರಂದು ಕಡ್ಡಾಯವಾಗಿ ವಿಚಾರಣೆಗೆ ಬರುವಂತೆ ಮೂರನೇ ನೋಟಿಸ್‌ ನೀಡಲಾಗಿದೆ’ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಈಗಾಗಲೇ ಕೆಲ ತಂಡಗಳ ಮಾಲೀಕರು, ಆಟಗಾರರು ಹಾಗೂ ಕೋಚ್‌ಗಳನ್ನು ಬಂಧಿಸಲಾಗಿದೆ. ಉಳಿದ ತಂಡಗಳ ಮಾಲೀಕರ ಹೇಳಿಕೆಯನ್ನೂ ಪಡೆಯಬೇಕಿದೆ’ ಎಂದರು.

‘ಈ ಹಿಂದೆ ನೋಟಿಸ್ ನೀಡಿದಾಗ ಮಾಲೀಕರು ಅನಾರೋಗ್ಯದ ನೆಪವೊಡ್ಡಿ ಜಾರಿಗೊಂಡಿದ್ದಾರೆ. ಕೆಲ ಮಾಲೀಕರು ತಮ್ಮ ಸಲಹೆಗಾರರನ್ನು ಕಚೇರಿಗೆ ಕಳುಹಿಸಿದ್ದರು. ಅವರಿಂದ ಯಾವುದೇ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ಮಾಲೀಕರನ್ನೇ ಖುದ್ದು ವಿಚಾರಣೆ ನಡೆಸಬೇಕೆಂದು ಸಲಹೆಗಾರರಿಗೆ ಹೇಳಿ ಕಳುಹಿಸಲಾಗಿದೆ’ ಎಂದು ಅಧಿಕಾರಿ ತಿಳಿಸಿದರು.

‘ಮೂರನೇ ಬಾರಿ ನೀಡಿರುವ ನೋಟಿಸ್‌ ಅನ್ವಯ ಮಾಲೀಕರು ವಿಚಾರಣೆಗೆ ಬರುವುದು ಕಡ್ಡಾಯ. ಬಾರದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಬಂಧನದ ಭಯ: ‘ಮ್ಯಾಚ್ ಫಿಕ್ಸಿಂಗ್ ಸಂಗತಿ ಈ ಹಿಂದೆಯೇ ಕೆಲ ಮಾಲೀಕರ ಗಮನಕ್ಕೂ ಬಂದಿತ್ತು. ಅವರು ಆ ಬಗ್ಗೆ ಚಕಾರ ಎತ್ತಿಲ್ಲ. ಕೆಲ ಮಾಲೀಕರು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವುದಕ್ಕೆ ಪುರಾವೆಗಳೂ ಸಿಕ್ಕಿವೆ’ ಎಂದು ಸಿಸಿಬಿ ಅಧಿಕಾರಿ ಹೇಳಿದರು.

‘ವಿಚಾರಣೆಗೆ ಬಂದರೆ ಬಂಧಿಸಬಹುದೆಂಬ ಭಯ ಮಾಲೀಕರಲ್ಲಿ ಇದೆ. ಪುರಾವೆ ಇಲ್ಲದೇ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT