ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

47 ಬೈಕ್, 440 ಗ್ರಾಂ ಚಿನ್ನ ಜಪ್ತಿ

ಆಗ್ನೇಯ ವಿಭಾಗ ಪೊಲೀಸರ ಕಾರ್ಯಾಚರಣೆ; 21 ಮಂದಿ ಬಂಧನ
Last Updated 16 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕಳವು ಪ್ರಕರಣಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದ ಆಗ್ನೇಯ ವಿಭಾಗದ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದ 21 ಮಂದಿಯನ್ನು ಬಂಧಿಸಿದ್ದಾರೆ.

‘ಕೋರಮಂಗಲ, ಆಡುಗೋಡಿ, ಪರಪ್ಪನ ಅಗ್ರಹಾರ ಹಾಗೂ ಎಚ್‌ಎಸ್‌ಆರ್ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಹಲವು ಪ್ರಕರಣಗಳನ್ನು ಭೇದಿಸಲಾಗಿದೆ. ಆರೋಪಿಗಳಿಂದ 440 ಗ್ರಾಂ ಚಿನ್ನಾಭರಣ, 450 ಗ್ರಾಂ ಬೆಳ್ಳಿ ಸಾಮಗ್ರಿ, 47 ದ್ವಿಚಕ್ರ ವಾಹನಗಳು, 2 ಟಾಟಾ ಏಸ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಮುರುಗನ್ ತಿಳಿಸಿದರು.

‘ಬಂಧಿತ ಆರೋಪಿಗಳು, ರಾಜ್ಯ ಹಾಗೂ ಅಂತರರಾಜ್ಯಗಳಲ್ಲಿ ಕಳ್ಳತನ ಎಸಗುತ್ತಿದ್ದರು. ಕೆಲವರು, ಈ ಹಿಂದೆಯೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಜಾಮೀನು ಮೇಲೆ ಜೈಲಿನಿಂದ ಹೊರಬಂದು ಕೃತ್ಯ ಮುಂದುವರಿಸಿದ್ದರು. ಆಯಾ ಠಾಣೆಯ ವಿಶೇಷ ತಂಡಗಳು ಆರೋಪಿಗಳನ್ನು ಪತ್ತೆ ಮಾಡಿವೆ’ ಎಂದು ಹೇಳಿದರು.

ಜಾಲಿ ರೈಡ್‌ಗಾಗಿ ವಾಹನ ಕದ್ದಿದ್ದರು: ‘ಕೋರಮಂಗಲ ಹಾಗೂ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ 40 ದ್ವಿಚಕ್ರ ವಾಹನಗಳನ್ನು ಕದ್ದಿದ್ದ ಆರೋಪಿಗಳು, ಅವುಗಳನ್ನು ಜಾಲಿ ರೈಡ್‌ಗಾಗಿ ಬಳಸುತ್ತಿದ್ದರು. ನಂತರ, ವಾಹನಗಳ ನಂಬರ್ ಪ್ಲೇಟ್‌ ಬದಲಾಯಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳಾದ ಗುಣಶೇಖರ್, ಹೆನ್ರಿ ಮೈಕಲ್, ದಂಡು ಅಜಿತ್ ಕುಮಾರ್, ಪೆಂಚಾಲಯ್ಯ, ಪೂಲುಕುಂಟ, ನರೇಶ್ ಬೈಕ್‌ ಕಳವು ಮಾಡುತ್ತಿದ್ದರು. ವಾಹನಗಳ ಮಾರಾಟದಿಂದ ಬಂದ ಹಣದಲ್ಲೇ ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದರು.

ಟಾಟಾ ಏಸ್‌ ಕದ್ದಿದ್ದರು: ‘ಹಲವು ಪ್ರಕರಣಗಳ ಆರೋಪಿ ವಾಸಿಂ ಪಾಷ ಎಂಬಾತ ಸ್ನೇಹಿತ ಸೈಫ್‌ ಜೊತೆ ಸೇರಿಕೊಂಡು ಆಡುಗೋಡಿಯಲ್ಲಿ ಎರಡು ಟಾಟಾ ಏಸ್‌ ವಾಹನಗಳನ್ನು ಕದ್ದಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳ ಪ್ರತ್ಯೇಕ ಗ್ಯಾಂಗ್‌ಗಳು, ಎಚ್‌ಎಸ್‌ಆರ್ ಲೇಔಟ್ ಠಾಣೆ ವ್ಯಾಪ್ತಿಯ ಮನೆಗಳಲ್ಲಿ ಕಳ್ಳತನ ಎಸಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಬೀಗ ಹಾಕಿರುತ್ತಿದ್ದ, ಮನೆ ಮುಂದೆ ಕಸ ಬಿದ್ದಿರುತ್ತಿದ್ದ, ರಂಗೊಲಿ ಇರದ ಮನೆಗಳನ್ನು ಗುರಿಯಾಗಿಸಿಕೊಂಡು ಆರೋಪಿಗಳು ಕೃತ್ಯ ಎಸಗುತ್ತಿದ್ದರು. ರಾತ್ರಿ ಹಾಗೂ ನಸುಕಿನಲ್ಲಿ ಮನೆಗಳಿಗೆ ನುಗ್ಗಿ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಕದ್ದು ಪರಾರಿಯಾಗುತ್ತಿದ್ದರು’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT