ಪೊಲೀಸ್ ವಶದಿಂದ ಆರೋಪಿ ಪರಾರಿ

7

ಪೊಲೀಸ್ ವಶದಿಂದ ಆರೋಪಿ ಪರಾರಿ

Published:
Updated:

ಬೆಂಗಳೂರು: ಯುವತಿಯನ್ನು ಅಪಹರಿಸಿದ ಆರೋಪದಡಿ ದೆಹಲಿ ಪೊಲೀಸರು ನಗರದಲ್ಲಿ ಬಂಧಿಸಿದ್ದ ಆತಿಫ್ ಜಮೀಲ್‌ (23) ಎಂಬಾತ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ನಗರ ರೈಲು ನಿಲ್ದಾಣದಿಂದ ತಪ್ಪಿಸಿಕೊಂಡಿದ್ದಾನೆ.

ಈ ಸಂಬಂಧ ದೆಹಲಿ ಮಾನವ ಸಾಗಣೆ ತಡೆ ಘಟಕದ ಇನ್‌ಸ್ಪೆಕ್ಟರ್ ಬಿನೋದ್ ಕುಮಾರ್ ಅವರು ಬೆಂಗಳೂರು ರೈಲ್ವೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಅಲ್ಲದೆ, ಆತನ ಪತ್ತೆಗಾಗಿ ದೆಹಲಿ ಪೊಲೀಸರ ತಂಡವೊಂದು ನಗರದಲ್ಲೇ ಬೀಡುಬಿಟ್ಟಿದೆ.

ವಾರಾಣಸಿಯ ಜಮೀಲ್, ದೆಹಲಿಯ ವಸಂತ್‌ಕುಂಜ್‌ ಪ್ರದೇಶದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದ ಆತ, ಕೆ.ಜಿ.ಹಳ್ಳಿ ಸಮೀಪದ ಎಪಿಜೆ ಅಬ್ದುಲ್ ಕಲಾಂ ರಸ್ತೆಯ ಮನೆಯೊಂದರಲ್ಲಿ ಉಳಿದುಕೊಂಡಿದ್ದ. ‘ಜಮೀಲ್ ನಮ್ಮ ಮಗಳನ್ನು ಅಪಹರಿಸಿದ್ದಾನೆ’ ಎಂದು ಯುವತಿಯ ಪೋಷಕರು ಸ್ಥಳೀಯ ಪೊಲೀಸರಿಗೆ ದೂರು ಕೊಟ್ಟಿದ್ದರು.

ಸಿಡಿಆರ್ (ಕರೆ ವಿವರ) ಸುಳಿವು ಆಧರಿಸಿ ಆ.10ರಂದು ಇಬ್ಬರನ್ನೂ ಪತ್ತೆ ಹಚ್ಚಿದ ಬಿನೋದ್ ಕುಮಾರ್ ನೇತೃತ್ವದ ತಂಡ, ಆರೋಪಿಯನ್ನು 11ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ರಾಜ್ಯಕ್ಕೆ ಕರೆದೊಯ್ಯಲು ಟ್ರಾನ್ಸಿಟ್ ವಾರಂಟ್ ಪಡೆದುಕೊಂಡು, ನಂತರ ಇಬ್ಬರನ್ನೂ ರೈಲು ನಿಲ್ದಾಣಕ್ಕೆ ಕರೆದೊಯ್ದಿತ್ತು.

‘ದೆಹಲಿ ಕಾನ್‌ಸ್ಟೆಬಲ್ ಅಮಿತ್ ಅವರು ಜಮೀಲ್‌ನನ್ನು ನಿಲ್ದಾಣದ ವಿಶ್ರಾಂತಿ ಗೃಹದಲ್ಲಿ ಕೂರಿಸಿಕೊಂಡಿದ್ದರು. ಅವರ ಗಮನ ಬೇರೆಡೆ ಹೋಗುತ್ತಿದ್ದಂತೆಯೇ ಆರೋಪಿ ಎದ್ದು ಓಡಿದ್ದಾನೆ. ಕೂಡಲೇ ಅವರು ಇನ್‌ಸ್ಪೆಕ್ಟರ್ ಗಮನಕ್ಕೆ ತಂದಿದ್ದಾರೆ. ಸುತ್ತಮುತ್ತ ಹುಡುಕಾಡಿದರೂ ಜಮೀಲ್ ಪತ್ತೆಯಾಗಿಲ್ಲ. ಮಹಿಳಾ ಸಿಬ್ಬಂದಿಯೊಬ್ಬರು ಯುವತಿಯನ್ನು ದೆಹಲಿಗೆ ಕರೆದೊಯ್ದು ಪೋಷಕರ ಸುಪರ್ದಿಗೆ ಒಪ್ಪಿಸಿದ್ದಾರೆ’ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !