ಬ್ಯಾಗ್‌ನಲ್ಲಿ ಹುಲಿ, ಚಿರತೆ ಉಗುರುಗಳು

ಬೆಂಗಳೂರು: ವನ್ಯಜೀವಿಗಳ ಉಗುರು ಹಾಗೂ ಚರ್ಮ ಮಾರಾಟ ಮಾಡುತ್ತಿದ್ದ ಆರೋಪದಡಿ ಮಹಿಳೆ ಸೇರಿ ನಾಲ್ವರನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಪ್ರಮೀಳಾ (40), ಸಾಯಿ ಕುಮಾರ್ (22), ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿ. ಕಾರ್ತಿಕ್ ಕುಮಾರ್ (40) ಹಾಗೂ ವಿ. ಪ್ರಶಾಂತ್ (28) ಬಂಧಿತರು. ಹುಲಿಯ 6 ಉಗುರು, ಚಿಪ್ಪು ಹಂದಿಯ 7, ಕರಡಿಯ 3, ಚಿರತೆಯ 400 ಉಗುರುಗಳು, ನರಿಯ ಚರ್ಮ ಹಾಗೂ ತಲೆಬುರುಡೆ, ಕೃಷ್ಣಮೃಗ ಚರ್ಮ, ಕಾಡು ಬೆಕ್ಕಿನ ಎರಡು ಪಂಜಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಶನಿವಾರ ಬೆಳಿಗ್ಗೆ ಬನಶಂಕರಿ 3ನೇ ಹಂತದ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿರುವ ಬಸ್ ತಂಗುದಾಣದ ಬಳಿ ಆರೋಪಿಗಳು ನಿಂತಿದ್ದರು. ಅವರ ಬಳಿ ಶಾಲಾ ಬ್ಯಾಗ್‌ಗಳು ಇದ್ದವು. ಬಾತ್ಮಿದಾರರು ನೀಡಿದ್ದ ಮಾಹಿತಿ ಆಧರಿಸಿ ದಾಳಿ ಮಾಡಿದಾಗ, ಅವರಲ್ಲಿದ್ದ ಬ್ಯಾಗ್‌ಗಳಲ್ಲಿ ವನ್ಯಜೀವಿಗಳ ಉಗುರು ಹಾಗೂ ಚರ್ಮ ಪತ್ತೆಯಾಯಿತು’ ಎಂದೂ ತಿಳಿಸಿದರು.
‘ಆರೋಪಿಗಳು ಆಂಧ್ರಪ್ರದೇಶದಿಂದ ಉಗುರು ಹಾಗೂ ಚರ್ಮಗಳನ್ನು ತಂದಿದ್ದರು. ಚಿನ್ನಾಭರಣಗಳಲ್ಲಿ ವನ್ಯಜೀವಿಗಳ ಉಗುರು ಅಳವಡಿಸಿ ಮಾರಾಟ ಮಾಡುವ ವ್ಯಾಪಾರಿಯೊಬ್ಬರು, ಆರೋಪಿಗಳನ್ನು ಸಂಪರ್ಕಿಸಿದ್ದರೆಂದು ಗೊತ್ತಾಗಿದೆ. ಆದರೆ, ಆ ವ್ಯಾಪಾರಿ ಯಾರು ಎಂಬುದು ಗೊತ್ತಾಗಿಲ್ಲ’ ಎಂದೂ ಹೇಳಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.