ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೋಟಾ ನೋಟು ಚಲಾವಣೆ: ಮೂವರ ಬಂಧನ

ಆಟೊ ಚಾಲಕನ ಸಮಯಪ್ರಜ್ಞೆಯಿಂದ ಸಿಕ್ಕಿಬಿದ್ದ ಆರೋಪಿಗಳು
Last Updated 26 ಡಿಸೆಂಬರ್ 2020, 18:16 IST
ಅಕ್ಷರ ಗಾತ್ರ

ಬೆಂಗಳೂರು: ಖೋಟಾನೋಟು ಮುದ್ರಿಸಿ ಸಾರ್ವಜನಿಕರಿಗೆ ಚಲಾವಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಶಾಮಣ್ಣ ಗಾರ್ಡ್‌ನ್‌ನ ಮಹಮ್ಮದ್‌ ಇಮ್ರಾನ್ (32), ಗಂಗೊಂಡನಹಳ್ಳಿಯ ಮುಬಾರಕ್‌ (31) ಹಾಗೂ ಬಾಪೂಜಿ ನಗರದ ಜಮಾಲ್‌ ಅಖ್ತರ್‌ (38) ಬಂಧಿತರು.

ಕೆ.ಆರ್‌.ಮಾರುಕಟ್ಟೆಯಿಂದ ಶಾಂತಿನಗರ ಬಸ್‌ ನಿಲ್ದಾಣಕ್ಕೆ ಆಟೊದಲ್ಲಿ ಪ್ರಯಾಣಿಸಿದ ಆರೋಪಿ ಜಮಾಲ್‌ ಅಖ್ತರ್‌, ಚಾಲಕನಿಗೆ ₹50 ಬಾಡಿಗೆ ಬದಲಿಗೆ ₹100ರ ಖೋಟಾನೋಟು ನೀಡಿದ್ದ.

ನೋಟಿನ ಅಸಲಿಯತ್ತಿನ ಬಗ್ಗೆ ಅನುಮಾನಗೊಂಡ ಚಾಲಕ, ಆರೋಪಿಯನ್ನು ನೇರವಾಗಿ ವಿಲ್ಸನ್‌ ಗಾರ್ಡನ್ ಪೊಲೀಸ್‌ ಠಾಣೆಗೆ ಕರೆದೊಯ್ದು, ದೂರು ನೀಡಿದ್ದ. ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ, ಖೋಟಾನೋಟು ತಯಾರಿಸುತ್ತಿರುವುದನ್ನು ಆತ ಒಪ್ಪಿಕೊಂಡಿದ್ದ. ಇನ್ನಿಬ್ಬರು ಆರೋಪಿಗಳ ಬಗ್ಗೆಯೂ ಮಾಹಿತಿ ನೀಡಿದ್ದ.

‘ಪ್ರಿಡ್ಜ್‌ ದುರಸ್ತಿ ಮಾಡುತ್ತಿದ್ದ ಅಖ್ತರ್‌, ಮುಬಾರಕ್‌ನ ಸಹಾಯದಿಂದ ಮನೆಯಲ್ಲೇ ಖೋಟಾನೋಟು ತಯಾರಿಸುತ್ತಿದ್ದ. ಮುಬಾರಕ್‌ ಸ್ಕ್ರೀನ್‌ ಪ್ರಿಂಟಿಂಗ್ ಕೆಲಸ ಮಾಡಿಕೊಂಡಿದ್ದ. ಉತ್ತರಪ್ರದೇಶದ ಮೂಲದ ಇಮ್ರಾನ್‌, ಸೀರೆಗಳಿಗೆ ಕಸೂತಿ ಕೆಲಸ ಮಾಡಿಕೊಂಡಿದ್ದ. ಅವರೆಲ್ಲ ಸೇರಿ ನಕಲಿ ನೋಟುಗಳನ್ನು ಪಡೆದು, ಸಾರ್ವಜನಿಕರಿಗೆ ಚಲಾವಣೆ ಮಾಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳಿಂದ ಎ4 ಶೀಟ್‌ನಲ್ಲಿ ಮುದ್ರಿಸಿದ್ದ ₹100 ಮುಖಬೆಲೆಯ 33 ಶೀಟ್‌ಗಳು, ಸಿಪಿಯು, ಕಂಪ್ಯೂಟರ್, ಗಾಂಧೀಜಿ ಭಾವಚಿತ್ರ ಇರುವ ಪ್ರಿಂಟಿಂಗ್‌ ಸ್ಕ್ರೀನ್, ಬಣ್ಣದ ಇಂಕ್‌ಗಳು, ನೋಟು ಮುದ್ರಣಕ್ಕೆ ಬಳಸುತ್ತಿದ್ದ ಎ4 ಶೀಟ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT