ಪಾನಿಪೂರಿ ಗಾಡಿಯಲ್ಲಿ ಸಿಗುತ್ತಿತ್ತು ಗಾಂಜಾ ಸೊಪ್ಪು!

7

ಪಾನಿಪೂರಿ ಗಾಡಿಯಲ್ಲಿ ಸಿಗುತ್ತಿತ್ತು ಗಾಂಜಾ ಸೊಪ್ಪು!

Published:
Updated:

ಬೆಂಗಳೂರು: ಪಾನಿಪೂರಿಯ ಜತೆ ಜತೆಗೇ ಗಾಂಜಾ ಸೊಪ್ಪನ್ನೂ ಮಾರಾಟ ಮಾಡುತ್ತಿದ್ದ ಪೂರ್ಣ ಗೂಕು (46) ಎಂಬಾತ ಮಹದೇವಪುರ ಪೊಲೀಸರ ಅತಿಥಿಯಾಗಿದ್ದಾನೆ.

‌ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯವನಾದ ಗೂಕು, ಒಂದೂವರೆ ವರ್ಷದ ಹಿಂದೆ ನಗರಕ್ಕೆ ಬಂದು ತೂಬರಹಳ್ಳಿಯಲ್ಲಿ ನೆಲೆಸಿದ್ದ. ದೊಡ್ಡನೆಕ್ಕುಂದಿಯಲ್ಲಿ ರಸ್ತೆ ಬದಿ ಪಾನಿಪೂರಿ ಗಾಡಿ ಇಟ್ಟುಕೊಂಡಿದ್ದ ಈತ, ಅದರಲ್ಲೇ ಗಾಂಜಾ ಚೀಲವನ್ನೂ ಇಟ್ಟುಕೊಂಡು ಪರಿಚಿತ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹೆಡ್‌ಕಾನ್‌ಸ್ಟೆಬಲ್ ‌ಮೋಹನ್‌ ಕುಮಾರ್ ಹಾಗೂ ಕಾನ್‌ಸ್ಟೆಬಲ್ ವೆಂಕಟೇಶ್ ಅವರು ಆ.3ರ ಬೆಳಿಗ್ಗೆ ಗಸ್ತು ಕರ್ತವ್ಯದಲ್ಲಿದ್ದರು. ಬೈಕ್‌ನಲ್ಲಿ ದೊಡ್ಡನೆಕ್ಕುಂದಿ ರಸ್ತೆಯಲ್ಲಿ ಸಾಗುತ್ತಿದ್ದಾಗ, ತಮಗೆ ಗೊತ್ತಿರುವ ಕೆಲ ಮಾದಕ ವ್ಯಸನಿಗಳು ಪಾನಿಪೂರಿ ಗಾಡಿ ಬಳಿ ನಿಂತಿರುವುದನ್ನು ನೋಡಿದ್ದಾರೆ. ಹತ್ತಿರ ಹೋಗಿ ವಿಚಾರಿಸಿದಾಗ, ‘ಪಾನಿಪೂರಿ ತಿನ್ನಲು ಬಂದಿದ್ದೇವೆ’ ಎಂದಿದ್ದಾರೆ.

ಬೆಳಿಗ್ಗೆ 8 ಗಂಟೆಯಿಂದಲೇ ಪಾನಿಪೂರಿ ವ್ಯಾಪಾರ ಶುರು ಮಾಡಿದ್ದ ವ್ಯಾಪಾರಿಯ ವರ್ತನೆಯಿಂದ ಅನುಮಾನಗೊಂಡ ಪೊಲೀಸರು, ಅಲ್ಲಿಂದ ಹೊರಟವರಂತೆ ನಟಿಸಿ ಪಕ್ಕದ ರಸ್ತೆಗೆ ತೆರಳಿದ್ದಾರೆ. ಮರೆಯಲ್ಲಿ ನಿಂತು ನೋಡಿದಾಗ, ಆ ವ್ಯಸನಿಗಳು ಈತನಿಂದ ಗಾಂಜಾ ಖರೀದಿಸುತ್ತಿರುವುದು ಗೊತ್ತಾಗಿದೆ. ಪೊಲೀಸರು ಗಾಡಿ ಬಳಿ ಓಡಿ ಬರುವಷ್ಟರಲ್ಲಿ ವ್ಯಸನಿಗಳು ಬೈಕ್‌ಗಳಲ್ಲಿ ಹೊರಟು ಹೋಗಿದ್ದಾರೆ. ಗಾಡಿ ಪರಿಶೀಲಿಸಿದಾಗ ಎರಡು ಬ್ಯಾಗ್‌ಗಳಲ್ಲಿ 3 ಕೆ.ಜಿ 750 ಗ್ರಾಂ ಗಾಂಜಾ ಪತ್ತೆಯಾಗಿದೆ.

‘ತಿಂಗಳಿಗೊಮ್ಮೆ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ಗೂಕು, ಮೂಟೆಗಳಲ್ಲಿ ಗಾಂಜಾ ಸೊಪ್ಪನ್ನು ರೈಲಿನಲ್ಲಿ ತರುತ್ತಿದ್ದ. ನಂತರ ನಿತ್ಯವೂ ಒಂದೊಂದೇ ಮೂಟೆಯನ್ನು ಗಾಡಿಯಲ್ಲಿ ತಂದು ಮಾರುತ್ತಿದ್ದ. ಹೆಚ್ಚಾಗಿ ಸಾಫ್ಟ್‌ವೇರ್ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳೇ ಈತನ ಗ್ರಾಹಕರಾಗಿದ್ದರು. ಪಾನಿಪೂರಿ ಮಾರುತ್ತಿದ್ದ ಕಾರಣದಿಂದ ಈತನ ಮೇಲೆ ಅನುಮಾನ ಮೂಡಿರಲಿಲ್ಲ’ ಎಂದು ತನಿಖಾಧಿಕಾರಿಗಳು ಹೇಳಿದರು.

₹ 10 ಸಾವಿರ ವಹಿವಾಟು: ‘ಪಾನಿಪೂರಿ ವ್ಯಾಪಾರದಿಂದ ನಿತ್ಯ ₹ 1.5 ಸಾವಿರದವರೆಗೆ ಸಂಪಾದನೆ ಮಾಡುತ್ತಿದ್ದ ಈತ, ಗಾಂಜಾ ಮಾರಾಟದಿಂದ ಕನಿಷ್ಠ ₹ 10 ಸಾವಿರ ಗಳಿಸುತ್ತಿದ್ದ. ನ್ಯಾಯಾಧೀಶರ ಆದೇಶದಂತೆ ಗೂಕುನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ’ ಎಂದು ಪೊಲೀಸರು ಹೇಳಿದರು.
**

ಫುಟ್‌ಪಾತ್‌ನಲ್ಲೇ ಗಾಂಜಾ ಮಾರಾಟ! 
ಮತ್ತೊಂದು ಪ್ರಕರಣದಲ್ಲಿ ಶುಕ್ರವಾರ ಬೆಳಿಗ್ಗೆ ಹಲಸೂರು ಬಸ್ ನಿಲ್ದಾಣದ ಫುಟ್‌ಪಾತ್‌ನಲ್ಲಿ ಗಾಂಜಾ ಮಾರುತ್ತಿದ್ದ ರಾಜ್‌ಗೋಪಾಲ್ (66) ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ರಾಜಗೋಪಾಲ್ ಅವರಿಂದ ₹ 2 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ. ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ತನಗೆ ಗಾಂಜಾದ ಬ್ಯಾಗ್ ತಂದು ಕೊಟ್ಟಿದ್ದಾಗಿ ಅವರು ಹೇಳಿಕೆ ಕೊಟ್ಟಿದ್ದಾರೆ. ಆ ವ್ಯಕ್ತಿಗಾಗಿ ಶೋಧ ನಡೆಯುತ್ತಿದೆ. ಬಂಧಿತ ವ್ಯಕ್ತಿಯಿಂದ ₹2 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 11

  Happy
 • 5

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !