ಚಿನ್ನಕ್ಕಾಗಿ ಕೆನ್ನೆ ಕಚ್ಚಿ, ಕಿವಿ‌ ಹರಿದಿದ್ದ!

7
ಎಂ.ಜಿ.ರಸ್ತೆಯಲ್ಲಿ ಪೊಲೀಸರು ಸೇರಿದಂತೆ ಆರು ಮಂದಿ ಮೇಲೆ ಹಲ್ಲೆ ನಡೆಸಿದ್ದ ಸರಗಳ್ಳ

ಚಿನ್ನಕ್ಕಾಗಿ ಕೆನ್ನೆ ಕಚ್ಚಿ, ಕಿವಿ‌ ಹರಿದಿದ್ದ!

Published:
Updated:

ಬೆಂಗಳೂರು: ಒಂಟಿ ಮಹಿಳೆಯರ ಕೆನ್ನೆ ಕಚ್ಚಿ ಸರ ದೋಚುವ ಈ ಪಾತಕಿ, ಮನೆ–ಅಂಗಡಿಗಳಿಗೂ ನುಗ್ಗಿ ಸುಲಿಗೆ ಮಾಡುತ್ತಾನೆ. ಓಲೆ ಬಿಚ್ಚಲಾಗದೆ ಮಹಿಳೆಯೊಬ್ಬರ ಕಿವಿಯನ್ನೇ ಹರಿದು 2013ರಲ್ಲಿ ಪೊಲೀಸರಿಂದ ಗುಂಡೇಟು ತಿಂದಿದ್ದ. ಕುಮಾರಸ್ವಾಮಿ ಲೇಔಟ್ ಠಾಣೆಯ ರೌಡಿಶೀಟರ್ ಆಗಿರುವ ಈತನ ವಿರುದ್ಧ ದಾಖಲಾಗಿರುವುದು 20ಕ್ಕೂ ಹೆಚ್ಚು ಗಂಭೀರ ಅಪರಾಧ ಪ್ರಕರಣಗಳು!

ಇದು, ಭಾನುವಾರ ರಾತ್ರಿ ಎಂ.ಜಿ.ರಸ್ತೆಯಲ್ಲಿ ಮೂವರು ಪೊಲೀಸರು ಸೇರಿದಂತೆ ಆರು ಮಂದಿಗೆ ಚಾಕುವಿನಿಂದ ಹಲ್ಲೆ ನಡೆಸಿರುವ ಮೊಹಮದ್ ದಸ್ತಗಿರ್‌ನ (29) ಅಪರಾಧ ಚರಿತ್ರೆ.

ಐದು ವರ್ಷಗಳಿಂದ ಜೈಲಿನಲ್ಲಿದ್ದ ಮೊಹಮದ್, ಎರಡು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ. ಜೂನ್ 27ರ ರಾತ್ರಿ ಕನಕನಗರದ ಟಿಪ್ಪು ವೃತ್ತದಲ್ಲಿ ಸೈಯದ್ ಸಲ್ಮಾನ್ ಎಂಬ ವ್ಯಾಪಾರಿಗೆ ಚೂರಿ ಇರಿದಿದ್ದ ಈತನ ಬಂಧನಕ್ಕೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಲೆ ಬೀಸಿದ್ದರು. ಆದರೆ, ಭಾನುವಾರ ರಾತ್ರಿ ಸರದೋಚುವ ಯತ್ನದಲ್ಲಿ ಕಬ್ಬನ್‌ಪಾರ್ಕ್‌ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಸಿಕ್ಕಸಿಕ್ಕವರಿಗೆ ಇರಿದ: ರಾತ್ರಿ 7.15ರ ಸುಮಾರಿಗೆ ರಂಗೋಲಿ ಮೆಟ್ರೊ ಕಲಾ ಕೇಂದ್ರದ ಬಳಿ ಬಂದಿದ್ದ ಅರೋಪಿ, ಜೋಗುಪಾಳ್ಯ ನಿವಾಸಿ ಶೀತಲ್ ಜೈನ್ ಎಂಬುವರ ಕುತ್ತಿಗೆಯಿಂದ ಚಿನ್ನದ ಸರ ಕಿತ್ತಿದ್ದ. ಅವರು ಆತನನ್ನು ಹಿಡಿಕೊಳ್ಳಲು ಮುಂದಾದಾಗ ಕೈಗೆ ಚಾಕುವಿನಿಂದ ಹಲ್ಲೆ ನಡೆಸಿ ಓಡಿದ್ದ.

ಈ ಸಂದರ್ಭದಲ್ಲಿ ಅಲ್ಲೇ ಇದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್ ಎಂ.ಎಸ್.ನಾಗೇಶ್, ಕಬ್ಬನ್‌ಪಾರ್ಕ್‌ ಠಾಣೆ ಕಾನ್‌ಸ್ಟೆಬಲ್‌ಗಳಾದ ಮಹೇಶ್ ಹಾಗೂ ಪ್ರತಾಪ್ ಅವರು ಆರೋಪಿಯನ್ನು ಬೆನ್ನಟ್ಟಿದ್ದರು.

ಚರ್ಚ್‌ಸ್ಟ್ರೀಟ್‌ನ ಎಂಪೈರ್ ಹೋಟೆಲ್ ಬಳಿ ನಾಗೇಶ್ ಆರೋಪಿಯ ಕೊರಳಪಟ್ಟಿಗೆ ಕೈ ಹಾಕುತ್ತಿದ್ದಂತೆಯೇ, ಆತ ಚಾಕುವಿನಿಂದ ಅಂಗೈಗೆ ಹೊಡೆದಿದ್ದ. ಅವರ ರಕ್ಷಣೆಗೆ ಬಂದ ಮಂಜುನಾಥ್ ಹಾಗೂ ಮುಖೇಶ್ ಎಂಬುವರಿಗೂ ಹಲ್ಲೆ ನಡೆಸಿದ್ದ. ಕೊನೆಗೆ ಕಬ್ಬನ್‌ಪಾರ್ಕ್‌ ಠಾಣೆ ಕಾನ್‌ಸ್ಟೆಬಲ್‌ಗಳೂ ಆತನಿಂದ ಹಲ್ಲೆಗೆ ಒಳಗಾದರು. ಅಂತಿಮವಾಗಿ 20ಕ್ಕೂ ಹೆಚ್ಚು ಸಾರ್ವಜನಿಕರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಕೊಟ್ಟರು.

‘ಶೀತಲ್ ಜೈನ್ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಹಾಗೂ ಮಂಜುನಾಥ್ ಹಾಸ್ಮ್ಯಾಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ಗಾಯಾಳುಗಳು ಚಿಕಿತ್ಸೆ ಪಡೆದು ಮರಳಿದ್ದಾರೆ. ಗಾಂಜಾ ನಶೆಯಲ್ಲಿ ಕೃತ್ಯ ಎಸಗಿದ್ದಾಗಿ ಆರೋಪಿ ಹೇಳಿಕೆ ಕೊಟ್ಟಿದ್ದಾನೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬೆಚ್ಚಿಬಿದ್ದ ಜನ: ರಜೆ ದಿನವಾದ ಕಾರಣ ಭಾನುವಾರ ಸಂಜೆ ಹೆಚ್ಚಿನ ಮಹಿಳೆಯರು ‌ಮಕ್ಕಳೊಂದಿಗೆ ರಂಗೋಲಿ ಮೆಟ್ರೊ ಕಲಾ ಕೇಂದ್ರಕ್ಕೆ ಬಂದಿದ್ದರು. ಈ ಘಟನೆಯಿಂದ ಬೆಚ್ಚಿಬಿದ್ದ ಅವರು, ತಕ್ಷಣವೇ ಅಲ್ಲಿಂದ ಹೊರಟು ಹೋದರು.

‘ನಾನು ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರ ಕಾರು ಚಾಲಕ. ನಾಗೇಶ್ ಆಯುಕ್ತರ ಗನ್‌ಮ್ಯಾನ್. ಭಾನುವಾರ ರಾತ್ರಿ ಕೆಲಸದ ನಿಮಿತ್ತ ಎಂ.ಜಿ.ರಸ್ತೆಗೆ ಬಂದಿದ್ದೆವು. ಯುವಕನೊಬ್ಬ ರಸ್ತೆ ಮಧ್ಯೆ ಓಡುತ್ತಿದ್ದ. ಆತನ ಕೈಲಿ 1 ಅಡಿ ಉದ್ದದ ಚಾಕು ಇತ್ತು. ನಾಗೇಶ್ ತಕ್ಷಣ ಆತನನ್ನು ಅಟ್ಟಿಸಿಕೊಂಡು ಹೋದರು’ ಎಂದು ಘಟನೆಯ ಪ್ರತ್ಯಕ್ಷದರ್ಶಿ ರವಿ ವಿವರಿಸಿದರು.

ಮಹಿಳೆಯರ ಸುರಕ್ಷತೆ ಪ್ರಶ್ನೆ: ‘ಜನನಿಬಿಡ ಪ್ರದೇಶವಾದ ಎಂ.ಜಿ.ರಸ್ತೆಯಲ್ಲೇ ಇಂಥ ಘಟನೆ ನಡೆದಿರುವುದು, ಇಡೀ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಹೇಗೆ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಸರ ಹೋಯಿತು ಎಂಬ ಚಿಂತೆ ನನಗಿಲ್ಲ. ಇಬ್ಬರು ಮಕ್ಕಳು ನನ್ನೊಟ್ಟಿಗಿದ್ದರು. ಅವರಿಗೆ ಚಾಕುವಿನಿಂದ ಇರಿದಿದ್ದರೆ ನಾನೆಲ್ಲಿ ಹೋಗಬೇಕಿತ್ತು. ಇಂಥ ಕಿಡಿಗೇಡಿಗಳ ವಿರುದ್ಧ ಪೊಲೀಸರು ಗಂಭೀರ ಕ್ರಮ
ಗಳನ್ನು ತೆಗೆದುಕೊಳ್ಳಬೇಕು’ ಎಂದು ಶೀತಲ್ ಜೈನ್ ಮನವಿ ಮಾಡಿದರು.

‘ಸರ ಆರೋಪಿಯ ಜೇಬಿನಲ್ಲಿ ಸಿಕ್ಕಿದೆ. ಚಾಕುವನ್ನೂ ಜಪ್ತಿ ಮಾಡಿದ್ದೇವೆ. ಸರ ಕದ್ದ ಜತೆಗೆ ಹಲ್ಲೆ ನಡೆಸಿದ ಕಾರಣಕ್ಕೆ ಆತನ ವಿರುದ್ಧ ಪ್ರತ್ಯೇಕವಾಗಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದೇವೆ. ಇನ್ನೂ ಎಂಟು ಕಡೆ ಸರಗಳ್ಳತನ ಮಾಡಿರುವುದಾಗಿ ಹೇಳಿಕೆ ಕೊಟ್ಟಿದ್ದಾನೆ. ಆ ಪ್ರಕರಣಗಳ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿರುವ ಕಾರಣ, 14 ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರಿಗೆ ಮನವಿ ಸಲ್ಲಿಸುತ್ತೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ದಸ್ತಗಿರ್ ಯಾರು?
ಕುಮಾರಸ್ವಾಮಿ ಲೇಔಟ್‌ನ ಸಾರಾಬಂಡೆಪಾಳ್ಯ ನಿವಾಸಿಯಾದ ಮೊಹಮದ್, ತನ್ನ 19ನೇ ವಯಸ್ಸಿನಿಂದಲೇ ಅಪರಾಧ ಚಟುವಟಿಕೆ ಪ್ರಾರಂಭಿಸಿದ. ಜಯನಗರ, ಸುಬ್ರಹ್ಮಣ್ಯಪುರ, ವಿಲ್ಸನ್‌ಗಾರ್ಡನ್ ಹಾಗೂ ಕುಮಾರಸ್ವಾಮಿ ಲೇಔಟ್ ಠಾಣೆಗಳಲ್ಲಿ ಈತನ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಾದಕ ವ್ಯಸನಿಯಾದ ಮೊಹಮದ್, ಖರ್ಚಿಗೆ ಹಣ ಬೇಕಾದಾಗಲೆಲ್ಲ ಸರ ದೋಚುತ್ತಾನೆ. ಇಲ್ಲವೆ, ವ್ಯಾಪಾರಿಗಳಿಗೆ ಬೆದರಿಸಿ ಸುಲಿಗೆ ಮಾಡುತ್ತಾನೆ ಎಂದು ಪೊಲೀಸರು ಹೇಳಿದರು.

2013ರ ಜನವರಿಯಲ್ಲಿ ಸಾರಾಬಂಡೆಪಾಳ್ಯದಲ್ಲಿ ದಂಪತಿಯ ಮನೆಗೆ ನುಗ್ಗಿದ್ದ ಈತ, ಮಚ್ಚಿನಿಂದ ಬೆದರಿಸಿ ಪತಿಯನ್ನು ಕೋಣೆಗೆ ಕಳುಹಿಸಿದ್ದ. ನಂತರ ಮಹಿಳೆಯ ಕಿವಿ ಓಲೆಗಳನ್ನು ಬಿಚ್ಚಿಕೊಳ್ಳಲು ಯತ್ನಿಸಿದ್ದ. ಅವರು ಪ್ರತಿರೋಧ ತೋರಿದಾಗ ಕಿವಿಯನ್ನೇ ಹರಿದು ಓಲೆಗಳನ್ನು ತೆಗೆದುಕೊಂಡು ಹೋಗಿದ್ದ. ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಅದಾದ ನಾಲ್ಕೈದು ದಿನಗಳಲ್ಲೇ ಮಹಿಳೆಯೊಬ್ಬರ ಕೆನ್ನೆ ಕಚ್ಚಿ ಸರ ದೋಚಿದ್ದ. ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಅಶೋಕ್‌ಕುಮಾರ್ (ಈಗ ಕುಣಿಗಲ್ ಸಿಪಿಐ) ಅವರು ಆರೋಪಿಯ ಎಡಗಾಲಿಗೆ ಗುಂಡು ಹೊಡೆದಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !