₹13 ಕೋಟಿ ವಂಚಿಸಿದ ಕಾನ್‌ಸ್ಟೆಬಲ್‌ಗಳು!

7
ಉದ್ಯೋಗದ ಆಮಿಷವೊಡ್ಡಿ ಹಣ ಸಂಗ್ರಹ * ಆರೋಪಿಯನ್ನು ಬಂಧಿಸಿದ ಸಿಸಿಬಿ

₹13 ಕೋಟಿ ವಂಚಿಸಿದ ಕಾನ್‌ಸ್ಟೆಬಲ್‌ಗಳು!

Published:
Updated:

ಬೆಂಗಳೂರು: ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಸಾರ್ವಜನಿಕರಿಗೆ ₹ 13 ಕೋಟಿ ವಂಚಿಸಿದ ಆರೋಪದಡಿ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಕಾನ್‌ಸ್ಟೆಬಲ್ ಲಕ್ಷ್ಮಿಕಾಂತ್ ಎಂಬುವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ತಲೆಮರೆಸಿಕೊಂಡಿರುವ ಮತ್ತೊಬ್ಬ ಕಾನ್‌ಸ್ಟೆಬಲ್ ಲೋಕೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸಿಬ್ಬಂದಿ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದರಿಂದ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಇಲಾಖಾ ತನಿಖೆಗೆ ಆದೇಶಿಸಿದ್ದರು. ವಿಚಾರಣೆ ನಡೆಸಿದ ಸಿಸಿಬಿ ವಂಚನೆ ಹಾಗೂ ದುರುಪಯೋಗ ದಳದ ಎಸಿಪಿ ಮಂಜುನಾಥ್ ಚೌಧರಿ, ‘ಕಾನ್‌ಸ್ಟೆಬಲ್‌ಗಳು ಅಕ್ರಮ ಎಸಗಿರುವುದು ದೃಢಪಟ್ಟಿದೆ’ ಎಂದು ಕಮಿಷನರ್‌ಗೆ ವರದಿ ಕೊಟ್ಟಿದ್ದರು. ಬಳಿಕ ಅವರ ಸೂಚನೆಯಂತೆ ಸಿಬ್ಬಂದಿ ವಿರುದ್ಧ ಎಸಿಪಿಯೇ ಕಾಟನ್‌ಪೇಟೆ ಠಾಣೆಗೆ ದೂರು ಕೊಟ್ಟಿದ್ದರು.

13 ಕೋಟಿ ವಂಚನೆ: ಲಕ್ಷ್ಮಿಕಾಂತ್ ಮೈಸೂರು ರಸ್ತೆಯಲ್ಲಿರುವ ಸಿಎಆರ್ (ಕೇಂದ್ರ ವಿಭಾಗ) ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ದಕ್ಷಿಣ ವಿಭಾಗದ ಸಿಎಆರ್ ಪಡೆಯಲ್ಲಿ ಲೋಕೇಶ್ ಕಾನ್‌ಸ್ಟೆಬಲ್ ಆಗಿದ್ದಾರೆ. 2014ರಲ್ಲಿ ಪೊಲೀಸ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದಾಗ ಇವರಿಬ್ಬರೂ ಪರಿಚಿತರಾಗಿದ್ದರು.

ಕೆಲ ದಿನಗಳ ಬಳಿಕ ಲಕ್ಷ್ಮಿಕಾಂತ್, ‘ನೇಮಕಾತಿ ವಿಭಾಗದ ಎಲ್ಲ ಅಧಿಕಾರಿಗಳ ಪರಿಚಯವೂ ನನಗಿದೆ. ನಿನಗೆ ಗೊತ್ತಿರುವವರು ಇದ್ದರೆ ಹೇಳು. ಅಧಿಕಾರಿಗಳ ಜತೆ ಮಾತನಾಡಿ ಕೆಲಸ ಕೊಡಿಸುತ್ತೇನೆ’ ಎಂದು ಲೋಕೇಶ್‌ಗೆ ಹೇಳಿದ್ದರು. ಅದಕ್ಕೆ ಅವರೂ ಒಪ್ಪಿದ್ದರು. ಕ್ರಮೇಣ ಇಬ್ಬರೂ ಸೇರಿ ಸಾರ್ವಜನಿಕರನ್ನು ವಂಚಿಸಲು ಪ್ರಾರಂಭಿಸಿದ್ದರು ಎಂದು ತಿಳಿದು ಬಂದಿದೆ.

‘2014 ರಿಂದ 2017ರ ಅವಧಿಯಲ್ಲಿ ಆರೋಪಿಗಳು ಪಿಎಸ್‌ಐ, ಇನ್‌ಸ್ಪೆಕ್ಟರ್, ಅಬಕಾರಿ ಇನ್‌ಸ್ಪೆಕ್ಟರ್, ಎಫ್‌ಡಿಸಿ, ಎಸ್‌ಡಿಸಿ.. ಹೀಗೆ, ಸರ್ಕಾರಿ ಹುದ್ದೆಗಳನ್ನು ಕೊಡಿಸುವುದಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದಾರೆ.

₹ 13 ಕೋಟಿ ವಂಚನೆ ನಡೆದಿರುವುದು ಈವರೆಗಿನ ತನಿಖೆಯಿಂದ ಗೊತ್ತಾಗಿದೆ. ಲೋಕೇಶ್ ಸಿಕ್ಕರೆ ಸಂಪೂರ್ಣ ಚಿತ್ರಣ ಸಿಗಲಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ದೂರುದಾರನೇ ಆರೋಪಿ!
ಹಣ ಹಂಚಿಕೆ ವಿಚಾರವಾಗಿ ಲೋಕೇಶ್ ಹಾಗೂ ಲಕ್ಷ್ಮಿಕಾಂತ್ ನಡುವೆ ಇತ್ತೀಚೆಗೆ ಮನಸ್ತಾಪ ಉಂಟಾಗಿತ್ತು. ಇದರ ಬೆನ್ನಲ್ಲೇ ವಂಚನೆಗೆ ಒಳಗಾದವರು ಹಣ ಮರಳಿಸುವಂತೆ ಲೋಕೇಶ್ ಬೆನ್ನುಬಿದ್ದಿದ್ದರು. ಇದರಿಂದ ಭೀತಿಗೆ ಒಳಗಾದ ಅವರು, ‘ಲಕ್ಷ್ಮಿಕಾಂತ್ ಕೆಲಸ ಕೊಡಿಸುವುದಾಗಿ ಜನರಿಗೆ ಮೋಸ ಮಾಡಿದ್ದಾನೆ’ ಎಂದು ಕಮಿಷನರ್‌ಗೆ ದೂರು ಕೊಟ್ಟಿದ್ದರು. ಇಲಾಖಾ ತನಿಖೆ ನಡೆಸಿದಾಗ ಫಿರ್ಯಾದಿಯೂ ಆರೋಪಿ ಎಂಬುದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !