ಮೀಟರ್ ಬಡ್ಡಿ ದಂಧೆ ಇಬ್ಬರ ಬಂಧನ

7

ಮೀಟರ್ ಬಡ್ಡಿ ದಂಧೆ ಇಬ್ಬರ ಬಂಧನ

Published:
Updated:

ಬೆಂಗಳೂರು: ಮೀಟರ್ ಬಡ್ಡಿ ದಂಧೆ ಮೂಲಕ ಸಾಲಗಾರರಿಗೆ ಕಿರುಕುಳ ನೀಡುತ್ತಿದ್ದ ಆರೋಪದಡಿ ಅಗ್ರಹಾರ ದಾಸರಹಳ್ಳಿಯ ಟಿ. ಹೇಮಾವತಿ ಹಾಗೂ ಮಂಜುನಾಥ್ ಎಂಬುವರನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.

ಇವರ ವಿರುದ್ಧ ಯಶೋದಾ ಎಂಬುವರು ಆ.30ರಂದು ದೂರು ಕೊಟ್ಟಿದ್ದರು. ‘ಟ್ರಾವೆಲ್ ಏಜೆನ್ಸಿ ಪ್ರಾರಂಭಿಸಲು ಗೆಳತಿ ಹೇಮಾವತಿಯಿಂದ ಶೇ 20ರ ಬಡ್ಡಿ ದರದಲ್ಲಿ ₹ 6 ಲಕ್ಷ ಸಾಲ ಪಡೆದಿದ್ದೆ. ಅದಕ್ಕೆ ಈವರೆಗೆ ₹ 3 ಲಕ್ಷ ಬಡ್ಡಿ ಕಟ್ಟಿರುವ ನಾನು, ₹ 3 ಲಕ್ಷ ಅಸಲನ್ನೂ ಮರಳಿಸಿದ್ದೇನೆ.’ ಎಂದು ಯಶೋದಾ ದೂರಿನಲ್ಲಿ ವಿವರಿಸಿದ್ದಾರೆ.

‘ಇನ್ನು ₹ 3 ಲಕ್ಷ ಅಸಲು ಕೊಡಬೇಕಿದ್ದ ಕಾರಣ, ಮತ್ತೆ ಹೇಮಾವತಿ ಬಳಿಯೇ ₹ 5 ಲಕ್ಷ ಸಾಲ ಕೇಳಿದ್ದೆ. ಹಳೆ ಬಾಕಿ ಹಾಗೂ ಬಡ್ಡಿ ಎಂದು ₹ 4.55 ಲಕ್ಷ ಮುರಿದುಕೊಂಡ ಆಕೆ, ಕೇವಲ 45 ಸಾವಿರವನ್ನಷ್ಟೇ ಕೊಟ್ಟಳು. ಇದರಿಂದ ಕೋಪಗೊಂಡ ನಾನು, ನೀವು ತುಂಬ ಅನ್ಯಾಯ ಮಾಡುತ್ತಿದ್ದೀರಾ ಎಂದು ಗಲಾಟೆ ಮಾಡಿದ್ದೆ. ಆ ನಂತರ ಆಕೆ ಸಹಚರ ಮಂಜುನಾಥ್ ಜತೆ ಸೇರಿ ನನಗೆ ಬೆದರಿಕೆ ಹಾಕಲಾರಂಭಿಸಿದಳು. ಇತ್ತೀಚೆಗೆ ಮನೆಗೆ ನುಗ್ಗಿ ಬೀರುವಿನಲ್ಲಿದ್ದ ಆಸ್ತಿ ಪತ್ರಗಳನ್ನೂ ತೆಗೆದುಕೊಂಡು ಹೋಗಿದ್ದಳು. ಈಗ ನಾನು ₹40 ಲಕ್ಷ ಸಾಲ ಪಡೆದಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾಳೆ’ ಎಂದು ಆರೋಪಿಸಿದ್ದಾರೆ.

‘ಹೇಮಾವತಿ ಹಾಗೂ ಮಂಜುನಾಥ್ ಮಾತ್ರವಲ್ಲದೆ, ಆ ಭಾಗದಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಮಹಾಲಕ್ಷ್ಮಿ ಅಲಿಯಾಸ್ ಬಡ್ಡಿಲಕ್ಷ್ಮಿ, ಲೋಲಾಕ್ಷಿ, ವನಜಾಕ್ಷಿ, ನಾಗಣ್ಣ ಹಾಗೂ ಸೀನ ಅಲಿಯಾಸ್ ಮಾಮ ಎಂಬುವರ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಇಬ್ಬರನ್ನು ಬಂಧಿಸಿರುವ ವಿಚಾರ ತಿಳಿದು, ಉಳಿದವರು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ’ ಎಂದು ಮಾಗಡಿ ರಸ್ತೆ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !