ಮಕ್ಕಳ ಕಳ್ಳನೆಂದು ಥಳಿತ; ಇಬ್ಬರ ಬಂಧನ

7

ಮಕ್ಕಳ ಕಳ್ಳನೆಂದು ಥಳಿತ; ಇಬ್ಬರ ಬಂಧನ

Published:
Updated:
Deccan Herald

ಬೆಂಗಳೂರು: ಕಾಡುಗೋಡಿ ಸಮೀಪದ ಪಟಾಲಮ್ಮಲೇಔಟ್‌ನಲ್ಲಿ ಮಾನಸಿಕ ಅಸ್ವಸ್ಥನನ್ನು ‘ಮಕ್ಕಳ ಕಳ್ಳ’ ಎಂದು ಭಾವಿಸಿದ ಸ್ಥಳೀಯರು, ಆತನನ್ನು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಹಲ್ಲೆ ಸಂಬಂಧ ಪೊಲೀಸರು ರಾಜೇಶ್ ಹಾಗೂ ಮಂಜುಳಾ ಎಂಬುವರನ್ನು ಬಂಧಿಸಿದ್ದಾರೆ. ಒಡಿಶಾದ ಸುಮಾರು 25 ವರ್ಷದ ಯುವಕ, ಬುಧವಾರ ಸಂಜೆ 4.30ರ ಸುಮಾರಿಗೆ ಲೇಔಟ್‌ನ ಮನೆಯೊಂದಕ್ಕೆ ನುಗ್ಗಿದ್ದ. ಆ ಮನೆಯವರ ಚೀರಾಟ ಕೇಳಿ ನೆರವಿಗೆ ಬಂದ ಸ್ಥಳೀಯರು, ಆತನನ್ನು ಹೊರಗೆ ಎಳೆದು ತಂದು ಮರಕ್ಕೆ ಕಟ್ಟಿ ಹಾಕಿದ್ದರು.

ಇದೇ ವೇಳೆ ಒಬ್ಬಾತ, ‘ನಾಲ್ವರು ಮಕ್ಕಳ ಕಳ್ಳರು ನಮ್ಮ ಏರಿಯಾಗೆ ಬಂದಿರುವ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಹರಿದಾಡುತ್ತಿದೆ. ಅವರಲ್ಲಿ ಇವನೂ ಒಬ್ಬ ಇರಬಹುದು’ ಎಂದಿದ್ದಾನೆ. ಅದನ್ನು ನಂಬಿದ ಜನ, ಮನಸೋ ಇಚ್ಛೆ ಥಳಿಸಿದ್ದಾರೆ. ಹೆಸರು, ವಿಳಾಸ ಹೇಳದಿದ್ದಾಗ ಕೋಲಿನಿಂದ ಬಾರಿಸಿದ್ದಾರೆ. ಇದನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸ್ಥಳೀಯರೊಬ್ಬರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ ಕಾಡುಗೋಡಿ ಪೊಲೀಸರು, ಆ ಯುವಕನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಆತ ಮಾನಸಿಕ ಅಸ್ವಸ್ಥ ಎಂಬುದು ಗೊತ್ತಾಗಿದೆ. ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಿಟ್ಟು ಕಳುಹಿಸಿದ್ದಾರೆ.

‘ನಗರಕ್ಕೆ ಯಾವುದೇ ಮಕ್ಕಳು ಕಳ್ಳರು ಬಂದಿಲ್ಲ. ಅಂತಹ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. ಯುವಕನ ಮೇಲೆ ಹಲ್ಲೆ ನಡೆಸಿದ ಎಲ್ಲರ ವಿರುದ್ಧವೂ ಕ್ರಮ ಜರುಗಿಸಲಾಗುವುದು’ ಎಂದು ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !