ಸೋಮವಾರ, ಸೆಪ್ಟೆಂಬರ್ 20, 2021
23 °C

ಟಿಆರ್‌ಪಿ ತಿರುಚಿದ್ದ ಜಾಲ: ಸಲ್ಲಿಕೆಯಾಗದ ಚಾರ್ಜ್‌ಶೀಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

TRP

ಬೆಂಗಳೂರು: ವಾಹಿನಿಗಳ ಜಾಹೀರಾತು ನಿಗದಿಗೆ ಮಾನದಂಡವಾದ ‘ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ)’ ತಿರುಚುತ್ತಿದ್ದ ಜಾಲವನ್ನು ನಗರದ ಸೈಬರ್ ಕ್ರೈಂ ಪೊಲೀಸರು ಭೇದಿಸಿ ಎರಡು ವರ್ಷಗಳಾಗಿದ್ದು, ಈ ಪ್ರಕರಣದಲ್ಲಿ ಇದುವರೆಗೂ ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ.

ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದ ಟಿಆರ್‌ಪಿ ಅಕ್ರಮವನ್ನು ಗುರುವಾರವಷ್ಟೇ ಮುಂಬೈ ಪೊಲೀಸರು ಭೇದಿಸಿದ್ದಾರೆ. ಇಂಥ ಟಿಆರ್‌ಪಿ ತಿರುಚುವ ಕೃತ್ಯವನ್ನು 2018ರಲ್ಲೇ ಪತ್ತೆ ಮಾಡಿದ್ದ ಬೆಂಗಳೂರು ಪೊಲೀಸರು, ‘ಟಿಆರ್‌ಪಿ’ ಎಂದೇ ಗುರುತಿಸಿಕೊಂಡಿದ್ದ ರಾಜು ಹಾಗೂ ಆತನ ನಾಲ್ವರು ಸಹಚರರನ್ನು ಬಂಧಿಸಿದ್ದರು.

ಆರೋಪಿಗಳು ಜಾಮೀನು ಮೇಲೆ ಹೊರಬಂದು ಓಡಾಡುತ್ತಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು, ಬೇರೆ ಕಡೆ ವರ್ಗಾವಣೆ ಆಗಿ ಹೋಗಿದ್ದಾರೆ. ಹೊಸದಾಗಿ ಬಂದ ಅಧಿಕಾರಿಗಳು, ಪ್ರಕರಣದ ಬಗ್ಗೆ ಗಮನಹರಿಸುತ್ತಿಲ್ಲ. ಇದೇ ಕಾರಣಕ್ಕೆ, ದೋಷಾರೋಪ ಪಟ್ಟಿ ಸಲ್ಲಿಕೆ ವಿಳಂಬವಾಗುತ್ತಿರುವುದಾಗಿ ವಿಭಾಗದ ಸಿಬ್ಬಂದಿ ಹೇಳುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು, ‘ಈ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ಸೈಬರ್ ಕ್ರೈಂ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರತಿಕ್ರಿಯಿಸುವೆ’ ಎಂದರು.

ಸೈಬರ್ ಕ್ರೈಂ ಪೊಲೀಸ್ ಅಧಿಕಾರಿಯೊಬ್ಬರನ್ನು ವಿಚಾರಿಸಿದಾಗ, ’ಈ ಪ್ರಕರಣ ತಂತ್ರಜ್ಞಾನದ ಮೇಲೆ ನಿಂತಿದೆ. ನ್ಯಾಯಾಲಯದಲ್ಲಿ ಆರೋಪ ಸಾಬೀತುಪಡಿಸಲು ಅರ್ಹವಾದ ತಾಂತ್ರಿಕ ಪುರಾವೆ ಸಂಗ್ರಹಿಸಬೇಕು. ಆ ಕೆಲಸ ಚಾಲ್ತಿಯಲ್ಲಿದೆ. ಕೆಲ ಸಂಸ್ಥೆಗಳು ಬೇಗನೇ ಪುರಾವೆಗಳನ್ನು ನೀಡುತ್ತಿಲ್ಲ. ಹೀಗಾಗಿ, ದೋಷಾರೋಪ ಪಟ್ಟಿ ಸಲ್ಲಿಸುವುದು ತಡವಾಗಿದೆ’ ಎಂದರು.

ನಿರ್ಮಾಪಕರು, ನಿರ್ದೇಶಕರೂ ಭಾಗಿ

ಟಿಆರ್‌ಪಿ ತಿರುಚುವ ಕೃತ್ಯದಲ್ಲಿ ಕನ್ನಡದ ಕೆಲ ಧಾರಾವಾಹಿಗಳ ನಿರ್ಮಾಪಕರು ಹಾಗೂ ನಿರ್ದೇಶಕರು ಭಾಗಿಯಾದ ಸಂಗತಿಯನ್ನು ಪೊಲೀಸರ ತನಿಖೆಯಿಂದ ಬಯಲಾಗಿತ್ತು. ಕೆಲವರನ್ನು ಪೊಲೀಸರು ವಿಚಾರಣೆ ಸಹ ನಡೆಸಿದ್ದರು. ದಿನ ಕಳೆದಂತೆ ಪ್ರಕರಣದ ತನಿಖೆಯೂ ಅರ್ಧಕ್ಕೆ ನಿಂತಿತು. ಕೃತ್ಯದಲ್ಲಿ ನಿರ್ಮಾಪಕರು ಹಾಗೂ ನಿರ್ದೇಶಕರ ಪಾತ್ರವೇನು ಎಂಬ ಸಂಗತಿಯೂ ಹೊರಬರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು