ಫ್ಲೆಕ್ಸ್‌ ಹಾಕಿದರೆ ಕ್ರಿಮಿನಲ್‌ ಪ್ರಕರಣ

7
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್ ಎಚ್ಚರಿಕೆ

ಫ್ಲೆಕ್ಸ್‌ ಹಾಕಿದರೆ ಕ್ರಿಮಿನಲ್‌ ಪ್ರಕರಣ

Published:
Updated:

ಬೆಂಗಳೂರು: ನಗರದಲ್ಲಿ ಇನ್ನು ಮುಂದೆ ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ಜಾಹೀರಾತು, ಫ್ಲೆಕ್ಸ್‌, ಬ್ಯಾನರ್‌, ಭಿತ್ತಿಪತ್ರ, ಬಾವುಟಗಳನ್ನು ಅಳವಡಿಸಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್ ಎಚ್ಚರಿಸಿದ್ದಾರೆ.

ಈ ಬಗ್ಗೆ ಬುಧವಾರ ಅವರು ಆದೇಶ ಹೊರಡಿಸಿದ್ದಾರೆ.

‘ನಗರದಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ಹಾಕಿ ದೃಶ್ಯ ಮಾಲಿನ್ಯ ಉಂಟುಮಾಡುವುದಕ್ಕೆ ಕಡಿವಾಣ ಹಾಕಲೇ ಬೇಕಾಗಿದೆ. ಅನಧಿಕೃತವಾಗಿ ಫ್ಲೆಕ್ಸ್‌ ಹಾಕುವವರ ವಿರುದ್ಧ ಸಾರ್ವಜನಿಕರು ಬಿಬಿಎಂಪಿಗೆ ದೂರು ನೀಡಬಹುದು. ಅಂತಹವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ’ ಎಂದು ಆಯುಕ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

ಫ್ಲೆಕ್ಸ್‌, ಬ್ಯಾನರ್‌ ಹಾಕುವವರ ವಿರುದ್ಧ ಕರ್ನಾಟಕ ಸಾರ್ವಜನಿಕ ಪ್ರದೇಶ ವಿರೂಪ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶವಿದೆ. ತಪ್ಪಿತಸ್ಥರಿಗೆ ಆರು ತಿಂಗಳು ಜೈಲು, ₹1,000 ದಂಡ ಅಥವಾ ಎರಡನ್ನೂ ವಿಧಿಸುವುದಕ್ಕೆ ಈ ಕಾಯ್ದೆ ಅವಕಾಶ ಕಲ್ಪಿಸುತ್ತದೆ.

ಅಧಿಕಾರಿಗಳೇ ಹೊಣೆ: ‘ನಗರದಲ್ಲಿ ಗುರುವಾರ ಎಲ್ಲೂ ಅನಧಿಕೃತ ಫ್ಲೆಕ್ಸ್‌ ಇರುವುದಿಲ್ಲ ಎಂದು ಹೈಕೋರ್ಟ್‌ಗೆ ತಿಳಿಸಿದ್ದೇನೆ. ಹೈಕೋರ್ಟ್‌ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಆದರೂ ನಗರದಲ್ಲಿ ಇನ್ನೂ ಅನೇಕ ಕಡೆ ಫ್ಲೆಕ್ಸ್‌ಗಳು ಹಾಗೆಯೇ ಉಳಿದಿರುವ ಬಗ್ಗೆ ದೂರುಗಳು ಬರುತ್ತಿವೆ. ಎಲ್ಲಾದರೂ ಫ್ಲೆಕ್ಸ್‌ಗಳು ಉಳಿದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ’ ಎಂದು ಆಯುಕ್ತರು ಹೇಳಿದರು.

ರಾತ್ರಿಯೂ ಕಾರ್ಯಾಚರಣೆ: ‘ರಾತ್ರಿ ಇಡೀ ತೆರವು ಕಾರ್ಯಾಚರಣೆ ಮುಂದುವರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾಳೆ ಬೆಳಿಗ್ಗೆ ಎಂಟೂ ವಲಯಗಳ ಜಂಟಿ ಆಯುಕ್ತರು ಅವರ ವ್ಯಾಪ್ತಿಯಲ್ಲಿದ್ದ ಎಲ್ಲ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿರುವ ಬಗ್ಗೆ ನನಗೆ ಪ್ರಮಾಣಪತ್ರ ಸಲ್ಲಿಸಬೇಕು’ ಎಂದರು. 

‘ಫ್ಲೆಕ್ಸ್‌ ತಯಾರಿಸುವ ಘಟಕಗಳ ಮೇಲೂ ಗುರುವಾರದಿಂದ ದಾಳಿ ನಡೆಸಿ, ಅವುಗಳ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಿದ್ದೇವೆ’ ಎಂದು ತಿಳಿಸಿದರು.

ದಕ್ಷಿಣ ವಲಯದಲ್ಲಿ ಗುರುವಾರ ರಾತ್ರಿ 10.30ರವರೆಗೆ 571 ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಯಿತು.

ಅಧಿಕಾರಿಗಳ ಅಸಡ್ಡೆಯಿಂದ ಬೇಸತ್ತಿದ್ದೆ: ಸಾಯಿದತ್ತ

‘ನಗರದಲ್ಲಿ ಫ್ಲೆಕ್ಸ್‌ ಹಾವಳಿ ವಿರುದ್ಧ ಹತ್ತಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಎಷ್ಟೇ ಸಲ ದೂರು ನೀಡಿದರೂ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿರಲಿಲ್ಲ. ಕಾಟಾಚಾರಕ್ಕೆ ತೆರವು ಕಾರ್ಯಾಚರಣೆ ನಡೆಸಿ ಸುಮ್ಮನಾಗುತ್ತಿದ್ದರು. ಫ್ಲೆಕ್ಸ್‌ಗಳು ಹಾಗೆಯೇ ಉಳಿಯುತ್ತಿದ್ದವು. ಇದರಿಂದ ಬೇಸತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬೇಕಾಯಿತು’ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ಮಹದೇವಪುರ: ತೆರವಾಗದ ಪ್ರಚಾರ ಫಲಕ

ಬೆಂಗಳೂರು: ಮಹದೇವಪುರ ಕ್ಷೇತ್ರದ ವಿವಿಧೆಡೆ ಬೃಹತ್ ರಾಜಕಾರಣಿಗಳ ಬೆಂಬಲಿಗರು ಅಳವಡಿಸಿದ ಪ್ರಚಾರ ಫಲಕಗಳು ಸಂಜೆ ವೇಳೆಯೂ ಹಾಗೆಯೇ ಇದ್ದವು.  

ಕಾಡುಗೋಡಿ, ವರ್ತೂರು, ಮಾರತ್ತಹಳ್ಳಿ, ದೊಡ್ಡನೆಕ್ಕುಂದಿ ಹಾಗೂ ಹೂಡಿ ವಾರ್ಡ್‌ಗಳಲ್ಲಿ ಬಿಜೆಪಿ ಮುಖಂಡರು ಹಾಕಿದ ಫ್ಲೆಕ್ಸ್, ಬ್ಯಾನರ್‌ಗಳು ಕಂಡುಬಂದವು.

ಹೂಡಿಯಲ್ಲಿ ಬಿಬಿಎಂಪಿ ವಾರ್ಡ್‌ ಕಚೇರಿಯ ಬಳಿಯಲ್ಲಿಯೇ ವಿದ್ಯುತ್ ದೀಪದ ಕಂಬಗಳಲ್ಲಿ ಸಾಲಾಗಿ, ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಅಭಿನಂದನೆ ಕೋರಿದ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. 

ಕೆಂಗೇರಿಯಲ್ಲೂ ತೆರವಾಗಿಲ್ಲ: ಕೆಂಗೇರಿ ಮುಖ್ಯ ರಸ್ತೆಯಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮದ ಫ್ಲೆಕ್ಸ್‌ಗಳು ಹಲವು ಕಡೆ ರಾರಾಜಿಸುತ್ತಿವೆ.

‘ಉತ್ತಿಷ್ಠ ಭಾರತ’ ಪ್ರಾಯೋಜಿತ ಕಾರ್ಯಕ್ರಮದ ಪೋಸ್ಟರ್ ಉಪನಗರ ಮುಖ್ಯ ರಸ್ತೆ ಬದಿಯ ಕಾಂಪೌಂಡ್ ಮೇಲೆ ಇದೆ. ಕೆಂಗೇರಿ ಹಳೆ ಬಸ್ ನಿಲ್ದಾಣದ ಬಳಿ ಸ್ಥಳೀಯ ಶಾಸಕರ ಚಿತ್ರವಿರುವ ಪೋಸ್ಟರ್, ರಾಜರಾಜೇಶ್ವರಿ ನಗರದಲ್ಲಿ ಷೋ ರೂಮ್‌ನವರು ಹಾಕಿರುವ ಫ್ಲೆಕ್ಸ್‌, ಮುಖ್ಯ ರಸ್ತೆಗಳ ಹಲವೆಡೆ ಶಾಸಕ ಮುನಿರತ್ನ ಹಾಗೂ ಸ್ಥಳೀಯ ಮುಖಂಡರ ಹುಟ್ಟುಹಬ್ಬದ ಪೋಸ್ಟರ್‌ಗಳು ಇದ್ದವು. ಇನ್ನು ಕೆಲವೆಡೆ ನೂತನ ಶಾಸಕರಿಗೆ ಅಭಿನಂದನೆ ಕೋರುವ ಪೋಸ್ಟರ್‌ಗಳು ಹಾಗೆಯೇ ಉಳಿದಿವೆ.

ಕೆ.ಆರ್.ಪುರ ಪ್ರದೇಶದಲ್ಲಿ ಅತಿಹೆಚ್ಚು ಬ್ಯಾನರ್, ಬಂಟಿಂಗ್‌ಗಳ ಹಾವಳಿ ಇತ್ತು. ವಿದ್ಯುತ್ ಕಂಬಕ್ಕೆ ಆಳವಡಿಸಲಾಗಿದ್ದ ಬ್ಯಾನರ್ ಇತ್ತೀಚೆಗೆ ಮಗುವಿನ ಮೇಲೆ ಬಿದ್ದು ತುಟಿಗೆ ಗಾಯವಾಗಿತ್ತು. ಇಲ್ಲಿನ ಅಯ್ಯಪ್ಪನಗರ ಮುಖ್ಯ ರಸ್ತೆ, ರಾಮಮೂರ್ತಿ ನಗರ, ಕಲ್ಕೆರೆ, ವಿಜಿನಾಪುರ, ಕೆ.ನಾರಾಯಣಪುರ, ಎ.ನಾರಾಯಣಪುರ, ವಿಜ್ಞಾನ ನಗರ, ಹೊರಮಾವು, ಭೋವಿಪಾಳ್ಯಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಕಾರ್ಯಾಚರಣೆ ನಡೆಯಿತು.

ಬಿಬಿಎಂಪಿ ಯಲಹಂಕ ವಲಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಒಟ್ಟು 884 ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್‌ಗಳನ್ನು ತೆಗೆಸಿದರು.

ಏನೇನು ನಡೆಯಿತು?

ಬೆಳಿಗ್ಗೆ 10.30: ಹೈಕೋರ್ಟ್‌ ಕಲಾಪ ಆರಂಭ, ನಗರದ ಎಲ್ಲ ಫ್ಲೆಕ್ಸ್‌ ತೆರವುಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ಸ್ವಯಂಪ್ರೇರಿತ ಸೂಚನೆ

ಬೆಳಿಗ್ಗೆ  10.35: ಬಿಬಿಎಂಪಿ ಆಯುಕ್ತರಿಗೆ ದೂರವಾಣಿ ಮೂಲಕ ಮಾಹಿತಿ ರವಾನಿಸಿದ ವಕೀಲ

ಬೆಳಿಗ್ಗೆ 11: ತೆರವು ಕಾರ್ಯಾಚರಣೆ ಆರಂಭಿಸುವಂತೆ ಆಯುಕ್ತರಿಂದ ಬಿಬಿಎಂಪಿ ಎಲ್ಲ ಅಧಿಕಾರಿಗಳಿಗೆ ಸೂಚನೆ ರವಾನೆ

ಬೆಳಿಗ್ಗೆ 11.15: ತೆರವು ಕಾರ್ಯಾಚರಣೆ ಆರಂಭ

ಮಧ್ಯಾಹ್ನ 2.30: ಬಿಬಿಎಂಪಿ ಆಯುಕ್ತ ಕೋರ್ಟ್‌ಗೆ ಖುದ್ದು ಹಾಜರು

ಮಧ್ಯಾಹ್ನ 3.45: ವಿಚಾರಣೆ ಆರಂಭ, ವರದಿ ಒಪ್ಪಿಸಿದ ಬಿಬಿಎಂಪಿ ಪರ ವಕೀಲ

ಮಧ್ಯಾಹ್ನ 4.10: ವಿಚಾರಣೆ ಮುಕ್ತಾಯ, ಆ.8ಕ್ಕೆ ಮುಂದೂಡಿಕೆ

ಸಂಜೆ 5: ನಗರದಲ್ಲಿ ಫ್ಲೆಕ್ಸ್‌ ಹಾಕಿದರೆ ಪ್ರಕರಣ ದಾಖಲಿಸುವುದಾಗಿ ಆಯಕ್ತರ ಆದೇಶ

ಅಂಗಡಿಗಳಿಗೆ ದಾಳಿ: ಪ್ಲಾಸ್ಟಿಕ್‌ ವಶ

ಪಾಲಿಕೆಯ ಪಶ್ಚಿಮ, ಪೂರ್ವ, ದಕ್ಷಿಣ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯಗಳಲ್ಲಿ ಪ್ಲಾಸ್ಟಿಕ್‌ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ಬುಧವಾರ ದಿಢೀರ್‌ ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಂಡರು.

 ಅಂಗಡಿ ಮಾಲೀಕರಿಗೆ ಒಟ್ಟು ₹ 1.73 ಲಕ್ಷ ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಶಾಶ್ವತ ನೀತಿಗೆ ಹೈಕೋರ್ಟ್‌ ತಾಕೀತು

ನಗರದ ರಸ್ತೆಗಳಲ್ಲಿ ಫ್ಲೆಕ್ಸ್‌ಗಳ ಹಾವಳಿ ತಡೆಯಲು ಭರ್ಜರಿ ಚಾಟಿ ಬೀಸಿರುವ ಹೈಕೋರ್ಟ್‌, ಈ ಸಂಬಂಧ ಶಾಶ್ವತ ನೀತಿಯೊಂದನ್ನು ರೂಪಿಸುವಂತೆ ಬಿಬಿಎಂಪಿಗೆ ತಾಕೀತು ಮಾಡಿದೆ.

ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಎಂದಿನಂತೆ ಬುಧವಾರ ಬೆಳಗ್ಗೆ 10.30ಕ್ಕೆ ಕಲಾಪ ಆರಂಭಿಸಿತು.

ನ್ಯಾಯಪೀಠಕ್ಕೆ ಬಂದು ಆಸೀನರಾಗುತ್ತಿದ್ದಂತೆಯೇ ಆಚೀಚೆ ಕಣ್ಣಾಡಿಸಿದ ದಿನೇಶ್‌ ಮಾಹೇಶ್ವರಿ, ‘ಬಿಬಿಎಂಪಿ ಪರ ವಕೀಲ ಶ್ರೀನಿಧಿ ಅವರು ಎಲ್ಲಿ’ ಎಂದು ಪ್ರಶ್ನಿಸಿದರು. ಕೂಡಲೇ ಅವರನ್ನು ಕೋರ್ಟ್‌ ಹಾಲ್‌ಗೆ ಬರಹೇಳಿ ಎಂದು ನಿರ್ದೇಶಿಸಿದರು.

ಶ್ರೀನಿಧಿ ಬರುತ್ತಿದ್ದಂತೆಯೇ, ‘ಶ್ರೀನಿಧಿ ಏನಾಗುತ್ತಿದೆ ಬೆಂಗಳೂರಿನಲ್ಲಿ, ನಾವು ಇದನ್ನು ಒಪ್ಪಲು ಆಗುವುದಿಲ್ಲ. ಊರ ತುಂಬಾ ಫ್ಲೆಕ್ಸ್‌ಗಳ ಹಾವಳಿ ಮಿತಿಮೀರಿದೆಯಲ್ಲಾ, ನೀವು ಏನು ಮಾಡುತ್ತೀರೋ ಗೊತ್ತಿಲ್ಲ. ಇವತ್ತಿನ ಕಲಾಪದ ಪಟ್ಟಿಯಲ್ಲಿ ನಮೂದಾಗಿರುವ ಫ್ಲೆಕ್ಸ್‌ಗಳ ಹಾವಳಿ ನಿಯಂತ್ರಣಕ್ಕೆ ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬರುವ ವೇಳೆಗೆ ಬೆಂಗಳೂರಿನ ಸೌಂದರ್ಯ ಮರುಕಳಿಸಿರಬೇಕು. ಎಲ್ಲ ಫ್ಲೆಕ್ಸ್‌
ಗಳನ್ನೂ ತೆರವುಗೊಳಿಸಿರಬೇಕು’ ಎಂದು ಮೌಖಿಕ ಆದೇಶ ಮಾಡಿದರು.

ಮಧ್ಯಾಹ್ನ 3.45ರ ವೇಳೆಗೆ ಪ್ರಕರಣ ವಿಚಾರಣೆಗೆ ಬಂದಾಗ ಶ್ರೀನಿಧಿ ‘ನಗರದಾದ್ಯಂತ ಬೆಳಿಗ್ಗೆಯಿಂದ ಈತನಕ 5 ಸಾವಿರ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ’ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಮಾಹೇಶ್ವರಿ, ‘ಹಾಗಾದರೆ ಉಳಿದ ಫ್ಲೆಕ್ಸ್‌ಗಳನ್ನು ರಾತ್ರಿ ವೇಳೆಗೆ ತೆರವುಗೊಳಿಸುತ್ತೀರೋ ಹೇಗೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಶ್ರೀನಿಧಿ, ‘ಸ್ವಾಮಿ, ಅಧಿಕಾರಿಗಳು ಸಂಪೂರ್ಣ ಕಾರ್ಯತತ್ಪರರಾಗಿದ್ದಾರೆ. ಆದಷ್ಟು ಶೀಘ್ರ ಎಲ್ಲ ತೆರವುಗೊಳಿಸಲಾಗುವುದು’ ಎಂದರು.

ಈ ಮಧ್ಯೆ ಜಾಹೀರಾತು ಫಲಕಗಳ ಪರ ವಕೀಲ ವಿ.ಬಿ.ಶಿವಕುಮಾರ್, ‘ಅಧಿಕೃತವಾಗಿ ಪರವಾನಗಿ ಪಡೆದು ನಾವು ಹಾಕಿರುವ ಫ್ಲೆಕ್ಸ್‌ಗಳನ್ನೂ ತೆರವುಗೊಳಿಸಲಾಗುತ್ತಿದೆ’ ಎಂದು ದೂರಿದರು.

ಇದಕ್ಕೆ ತೀವ್ರ ಅಕ್ರೋಶ ವ್ಯಕ್ಯಪಡಿಸಿದ ನ್ಯಾಯಪೀಠ, ‘ನಿಮ್ಮ ಫಲಕಗಳು ಅಧಿಕೃತವೋ ಅನಧಿಕೃತವೋ ಆಮೇಲೆ‌ ನಿರ್ಧರಿಸೋಣ. ಮೊದಲು ಬೆಂಗಳೂರಿನ ವೈಭವ ಮರುಕಳಿಸಲಿ. ನೀವು ಪರವಾನಗಿ ಪಡೆದು ಅಧಿಕೃತವಾಗಿಯೇ 
ಫ್ಲೆಕ್ಸ್‌ಗಳನ್ನು ಹಾಕಿದ್ದರೆ ಅವುಗಳನ್ನು ಪುನಃ ತೂಗುಹಾಕುವ ಬಗ್ಗೆ ನಂತರ ನಿರ್ಧರಿಸೋಣ’ ಎಂದರು.

‘ನಗರದಲ್ಲಿ ಫ್ಲೆಕ್ಸ್, ಬ್ಯಾನರ್‌ಗಳ ಹಾವಳಿ ಹೆಚ್ಚಾಗಿದೆ. ನಿಜಕ್ಕೂ ಇದೊಂದು ತೊಂದರೆದಾಯಕ ವಿಚಾರ. ಈ ಸಮಸ್ಯೆಗೆ ಒಂದು ಇತಿಶ್ರೀ ಹಾಡಲೇಬೇಕು‌. ಇದು ಕೇವಲ ಒಂದು ದಿನದ ವಿಚಾರವಲ್ಲ. ಇದಕ್ಕೆ ಶಾಶ್ವತವಾಗಿ ತೆರೆ ಎಳೆಯಬೇಕು. ಅದಕ್ಕಾಗಿ ಒಂದು ಸ್ಪಷ್ಟ ನೀತಿ ರೂಪಿಸಬೇಕು. ಆ ನೀತಿ ಹೇಗಿರುತ್ತದೆ ಎನ್ನುವುದನ್ನು ಮುಂದಿನ ವಿಚಾರಣೆಯಲ್ಲಿ ತಿಳಿಸಿ’ ಎಂದು ಶ್ರೀನಿಧಿ ಅವರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ8ಕ್ಕೆ ಮುಂದೂಡಿದೆ.

ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್ ಪ್ರಸಾದ್ ವಿಚಾರಣೆ ವೇಳೆ ಹಾಜರಿದ್ದರು.

‘ಕಾರ್ಯಾಚರಣೆ ಪ್ರಕ್ರಿಯೆ ವಿಡಿಯೊ ಮಾಡಿ’

‘ತೆರವು ಮಾಡಿರುವ ಫ್ಲೆಕ್ಸ್‌ಗಳನ್ನು ನಿಮ್ಮ ವಶದಲ್ಲೇ ಇರಿಸಿಕೊಳ್ಳಿ. ಕಾರ್ಯಾಚರಣೆ ಪ್ರಕ್ರಿಯೆಯನ್ನು ವಿಡಿಯೊ ಮಾಡಿ. ಅದನ್ನು ಪೆನ್‌ಡ್ರೈವ್‌ನಲ್ಲಿ ನ್ಯಾಯಪೀಠಕ್ಕೆ ನೀಡಿ. ಇದಕ್ಕಾಗಿ ಅನಗತ್ಯ ವೆಚ್ಚ ಮಾಡಬೇಡಿ’ ಎಂದೂ ನ್ಯಾಯಪೀಠ ಬಿಬಿಎಂಪಿಗೆ ಸೂಚಿಸಿದೆ.

‘ಬಿಬಿಎಂಪಿ ಮುಚ್ಚಿಬಿಡಿ’

ಜಾಹೀರಾತು ನೀತಿಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಬಿಬಿಎಂಪಿಯನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡರು.

‘ಎಲ್ಲವನ್ನೂ ಕೋರ್ಟ್ ಹೇಳಿದ ಮೇಲೆಯೇ ನೀವು ಸರಿಪಡಿಸಬೇಕೇ? ನೀವೇನು ಸಂವಿಧಾನಕ್ಕಿಂತಲೂ ಮಿಗಿಲೇ? ಬಿಬಿಎಂಪಿ 24 ಗಂಟೆ ಕೆಲಸ ಮಾಡಬೇಕು’ ಎಂದು ಕಿಡಿ ಕಾರಿದರು.

‘ಸಾರ್ವಜನಿಕರು ಎಲ್ಲದಕ್ಕೂ ಪಿಐಎಲ್ ಹಾಕಿಕೊಂಡೇ ಕೋರ್ಟ್‌ಗೆ ಬರಬೇಕೇ? ಜಾಹೀರಾತು ನೀತಿಯನ್ನು ಏಕೆ ಜಾರಿಗೆ ತಾರದೆ ಉಳಿಸಿಕೊಂಡಿದ್ದೀರಿ? ಬಿಬಿಎಂಪಿಯನ್ನು ಮುಚ್ಚಿಬಿಡಿ’ ಎಂದು ಬೇಸರ ವ್ಯಕ್ತಪಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !