ಬೆಂಗಳೂರು: ನೈಸರ್ಗಿಕ ವಿಕೋಪಗಳಿಂದ ಉಂಟಾದ ಬೆಳೆಹಾನಿ ಪ್ರಕರಣಗಳಿಗೆ ಜಿಲ್ಲಾಧಿಕಾರಿ ಮಟ್ಟದಲ್ಲಿಯೇ ಪರಿಹಾರವನ್ನು ನೀಡಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ.
ಈ ಸಂಬಂಧ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು, ‘ಅತಿವೃಷ್ಠಿ, ಪ್ರವಾಹ, ಆಲಿಕಲ್ಲು ಮಳೆ, ಬರದಿಂದ ಸ್ಥಳೀಯಮಟ್ಟದಲ್ಲಿ ಉಂಟಾಗುವ ಬೆಳೆಹಾನಿಗಳಿಗೆ ಜಿಲ್ಲಾಧಿಕಾರಿ ಮಟ್ಟದಲ್ಲಿಯೇ ಪರಿಹಾರ ನೀಡಬೇಕು. ಅರ್ಹ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕವೇ ಈ ಪರಿಹಾರ ನೀಡಬೇಕು’ ಎಂದು ಸೂಚಿಸಲಾಗಿದೆ.
‘ಬೆಳೆಹಾನಿ ಸಂಭವಿಸಿದ ಮೂರು ದಿನಗಳ ಒಳಗೆ ಸಮೀಕ್ಷೆ ನಡೆಸಿ, ವರದಿ ಸಿದ್ದಪಡಿಸಬೇಕು. ಜಿಲ್ಲಾಧಿಕಾರಿಯು ವರದಿಯನ್ನು ಪರಿಶೀಲಿಸಿದ ನಂತರ ಅರ್ಹ ಫಲಾನುಭವಿಗಳು, ನಷ್ಟದ ವಿವರವನ್ನು ಪ್ರಕಟಿಸಬೇಕು. ರೈತರ ಆಕ್ಷೇಪಗಳನ್ನು ಪರಿಗಣಿಸಿ, ಅಂತಿಮ ವರದಿಯನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸಬೇಕು’ ಎಂದು ಸೂಚಿಸಲಾಗಿದೆ.
‘ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಅನುಮೋದನೆ ದೊರೆತ ನಂತರ ಅರ್ಹ ರೈತರ ಖಾತೆಗೆ ಪರಿಹಾರದ ಮೊತ್ತವನ್ನು ನೇರ ವರ್ಗಾವಣೆ ಮಾಡಬೇಕು’ ಎಂದು ವಿವರಿಸಲಾಗಿದೆ.