ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಅಕ್ರಮಗಳಿಗೆ ಬೇಕು ಕಡಿವಾಣ

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ಕರ್ನಾಟಕ ವಿಧಾನಸಭಾ ಚುನಾವಣೆಗೆ ತೆರೆಬಿದ್ದಿದೆ. ಫಲಿತಾಂಶಕ್ಕಾಗಿ ಇನ್ನೂ ಒಂದು ದಿನ, ಅಂದರೆ ಮಂಗಳವಾರದವರೆಗೂ ಕಾಯಬೇಕು. ಈ ಚುನಾವಣೆ ಬೇರೆ ಬೇರೆ ಕಾರಣಗಳಿಗಾಗಿ ಕುತೂಹಲ ಕೆರಳಿಸಿದೆ. ಕಾಂಗ್ರೆಸ್‌ ತೆಕ್ಕೆಯಲ್ಲಿ ಉಳಿದ ಏಕೈಕ ದೊಡ್ಡ ರಾಜ್ಯ ಕರ್ನಾಟಕ. ಇದೂ ಕೈಜಾರದಂತೆ ನೋಡಿಕೊಳ್ಳುವುದು ಆ ಪಕ್ಷಕ್ಕೆ ಗಂಭೀರ ಸವಾಲು. ದೇಶದ ದಕ್ಷಿಣ ಭಾಗದಲ್ಲಿ ಅಧಿಕಾರ ಹಿಡಿಯಲು ಕರ್ನಾಟಕವನ್ನು ಹೆಬ್ಬಾಗಿಲು ಎಂದು ಪರಿಗಣಿಸಿರುವುದರಿಂದ ಬಿಜೆಪಿಗೂ ಈ ಚುನಾವಣೆ ಮಹತ್ವದ್ದು. ಇನ್ನು, ಜೆಡಿಎಸ್‌ಗೆ ಅಸ್ತಿತ್ವದ ಪ್ರಶ್ನೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ತನ್ನ ಪ್ರಸ್ತುತತೆ ಉಳಿಸಿಕೊಳ್ಳಲು ಜೆಡಿಎಸ್‌ ಕೂಡ ಪ್ರತಿಷ್ಠೆಯನ್ನು ಪಣಕ್ಕೆ ಒಡ್ಡಿ ಸೆಣಸಿದೆ. ಇವೆಲ್ಲದರ ಜತೆಗೆ ಲೋಕಸಭಾ ಚುನಾವಣೆಗೆ ಒಂದು ವರ್ಷ ಅಷ್ಟೇ ಉಳಿದಿದೆ. ಈ ಹಂತದಲ್ಲಿ ಪ್ರಮುಖ ರಾಜ್ಯವೊಂದರ ಮತದಾರರ ನಾಡಿಮಿಡಿತ ಅರಿಯುವುದರ ಭಾಗವಾಗಿಯೂ ಈ ಚುನಾವಣೆಗೆ ಮಹತ್ವ ಇದೆ. ಮತದಾನದಲ್ಲಿ ಶೇ 72.36ರಷ್ಟು ಮಂದಿ ಪಾಲ್ಗೊಂಡು ಮತ ಹಕ್ಕು ಚಲಾಯಿಸಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಶೇ 71.45 ರಷ್ಟು ಮತದಾನ ಆಗಿತ್ತು. ಈ ಸಲ ತುಸು ಏರಿಕೆ ಆಗಿದೆ ಅಷ್ಟೆ. ಆದರೂ ಇದು ಸಾಲದು. ಮತ ಹಕ್ಕು ಹೊಂದಿರುವ ಶೇ 27.64ರಷ್ಟು ಮಂದಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ ಎಂಬುದು ಪ್ರಜಾಪ್ರಭುತ್ವದ ಭವಿಷ್ಯದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಮತದಾನ ಪ್ರಮಾಣ ಹೆಚ್ಚಿಸುವುದಕ್ಕಾಗಿ ಚುನಾವಣಾ ಆಯೋಗ ಏನೆಲ್ಲ ಕಸರತ್ತು ನಡೆಸಿದೆ. ಮಹಿಳೆಯರನ್ನು ಮತಗಟ್ಟೆಗೆ ಸೆಳೆಯಲು ಅವರಿಗಾಗಿಯೇ ಪ್ರತ್ಯೇಕವಾಗಿ ‘ಪಿಂಕ್‌’ ಮತದಾನ ಕೇಂದ್ರಗಳನ್ನು, ಬುಡಕಟ್ಟು ಸಮುದಾಯದ ಜನ ಗಣನೀಯ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಅವರ ಸಂಪ್ರದಾಯ ಬಿಂಬಿಸುವ ‘ಎಥ್ನಿಕ್‌’ ಮತ ಕೇಂದ್ರಗಳನ್ನು ಸ್ಥಾಪಿಸಿತ್ತು. ಇಂಥ ಪ್ರಯತ್ನಗಳ ಹೊರತಾಗಿಯೂ ಇಷ್ಟೊಂದು ಜನ ಚುನಾವಣಾ ಹಬ್ಬದಿಂದ ದೂರ ಉಳಿದದ್ದು ದುರದೃಷ್ಟಕರ.

ನಗರ ಪ್ರದೇಶಗಳ ಅದರಲ್ಲೂ ರಾಜಧಾನಿ ಬೆಂಗಳೂರಿನ ಜನರಿಗೆ ಮತ ಹಾಕುವುದೆಂದರೆ ಏಕೋ ಅಪಥ್ಯ. ಮತದಾನ ಕುರಿತು ಉಪೇಕ್ಷೆ ಪ್ರತೀ ಚುನಾವಣೆಯಲ್ಲೂ ಕಣ್ಣಿಗೆ ರಾಚುವಂತೆ ಕಾಣುತ್ತದೆ. ಈ ಚುನಾವಣೆಯೂ ಅದಕ್ಕೆ ಹೊರತಲ್ಲ. ಬೆಂಗಳೂರಿನಲ್ಲಿ ಬರೀ ಶೇ 54.29ರಷ್ಟು ಮತದಾನ ದಾಖಲಾಗಿದೆ. ಚುನಾವಣೆಗೆ ನೀಡುವ ರಜೆಯನ್ನು ನಗರನಿವಾಸಿಗಳು ಮೋಜು–ಮಸ್ತಿಗೆ ಬಳಸಿಕೊಳ್ಳುತ್ತಾರೆ ಎಂಬ ಆರೋಪವನ್ನು ಪುಷ್ಟೀಕರಿಸುವಂತೆ ಕಡಿಮೆ ಮತದಾನ ದಾಖಲಾಗಿದೆ. ಮತಗಟ್ಟೆಗೆ ಬಂದು ವೋಟು ಹಾಕುವುದನ್ನು ತ್ರಾಸದಾಯಕ ಎಂದು ಪರಿಗಣಿಸುವ ಮನೋಭಾವ ಸರಿಯಲ್ಲ. ಮತದ ಹಕ್ಕು ಬಿಟ್ಟುಕೊಟ್ಟು ಆ ಬಳಿಕ ಜನಪ್ರತಿನಿಧಿಗಳ ಕಾರ್ಯವೈಖರಿ ಬಗ್ಗೆ ನಾಲಗೆ ಹರಿಬಿಡುವುದರಲ್ಲಿ ಅರ್ಥವೇ ಇಲ್ಲ. ಸ್ಪರ್ಧಾಳುಗಳು ತಮ್ಮ ಮತಕ್ಕೆ ಅರ್ಹರಲ್ಲ ಎನ್ನುವುದಾದರೆ ‘ನೋಟಾ’ ಆಯ್ಕೆಯೂ ಇದೆ. ಈ ತಟಸ್ಥ ನೆಲೆಯನ್ನಾದರೂ ಆರಿಸಿಕೊಳ್ಳಬಹುದಿತ್ತು.

ಈ ಚುನಾವಣೆಯ ಪ್ರಚಾರ ಅಬ್ಬರದಿಂದ ಕೂಡಿತ್ತಾದರೂ ಅಭಿವೃದ್ಧಿ ಹಾಗೂ ನೀತಿ–ನಿಲುವುಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳು ಮುನ್ನೆಲೆಗೆ ಬರಲೇ ಇಲ್ಲ. ವೈಯಕ್ತಿಕ ಟೀಕೆಗಳೇ ಚುನಾವಣಾ ವಿಷಯವಾಗಿದ್ದು ವಿಷಾದಕರ. ಮತಗಟ್ಟೆ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಸೃಷ್ಟಿಯಾಗಬಹುದು ಎಂದು ಭವಿಷ್ಯ ನುಡಿದಿವೆ. ಕೆಲವು ಸಮೀಕ್ಷೆಗಳು ಬಿಜೆಪಿಗೆ ಹೆಚ್ಚು ಸ್ಥಾನ ದೊರೆಯಲಿದೆ ಎಂದು ಹೇಳಿವೆ. ಇನ್ನು ಕೆಲವು ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿವೆ. ಇದರಿಂದಾಗಿ ಜನರ ಮನಸ್ಸಿನಲ್ಲಿ ಗೊಂದಲ ಮೂಡಿದೆ. ಇದು ನಿಜವೇ ಆದರೆ ಜೆಡಿಎಸ್‌ ಪಾತ್ರ ನಿರ್ಣಾಯಕ ಆಗಲಿದೆ. ಮತದಾನ ಪ್ರಕ್ರಿಯೆ ಬಹುಮಟ್ಟಿಗೆ ಶಾಂತಿಯುತವಾಗಿ ಪೂರ್ಣಗೊಂಡಿದೆ ಎಂಬುದು ಸಂತಸದ ಸಂಗತಿ. ಆದರೆ ಆಮಿಷ, ಹಣದ ಪಾತ್ರ ದಿನೇ ದಿನೇ ಹೆಚ್ಚುತ್ತಿದೆ ಎಂದು ಜನಸಾಮಾನ್ಯರೇ ಆಡಿಕೊಳ್ಳುವಂತಾಗಿರುವುದು ಜನತಂತ್ರದ ಆಶಯವನ್ನೇ ಬುಡಮೇಲಾಗಿಸುತ್ತದೆ. ಮತದಾರರ ಗುರುತಿನ ಚೀಟಿ ಅಕ್ರಮ ಸಂಗ್ರಹ ಪತ್ತೆಯಾದ ಕಾರಣಕ್ಕೆ ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯನ್ನೇ ಮುಂದೂಡಬೇಕಾಯಿತು. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲೇಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT