ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ್ಲಿ ಕ್ರಷರ್‌ಗಳಿಂದ ₹500 ಕೋಟಿ ಬಾಕಿ

Last Updated 18 ಜೂನ್ 2019, 17:44 IST
ಅಕ್ಷರ ಗಾತ್ರ

ಬೆಂಗಳೂರು: ಜಲ್ಲಿ ಕ್ರಷರ್‌ ಮಾಲೀಕರು ರಾಜ್ಯ ಸರ್ಕಾರಕ್ಕೆ ಕಟ್ಟಬೇಕಿದ್ದ ₹500 ಕೋಟಿ ರಾಯಧನವನ್ನು ಕಳೆದ ಮೂರು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದಾರೆ. ಹಣ ವಸೂಲಿಗೆ ಅಧಿಕಾರಿಗಳು ಇದುವರೆಗೂ ಕ್ರಮಕೈಗೊಂಡಿಲ್ಲ. ವಸೂಲಾಗುವ ಲಕ್ಷಣಗಳೂ ಕಾಣುತ್ತಿಲ್ಲ.

ರಾಯಧನ ಪಾವತಿಸದ ಹಿನ್ನೆಲೆಯಲ್ಲಿ ನೂರಾರು ಜಲ್ಲಿ ಕ್ರಷರ್‌ ಘಟಕಗಳನ್ನು ಮೂರು ವರ್ಷಗಳ ಹಿಂದೆ ಮುಚ್ಚಿಸಿದ್ದರೂ ಈವರೆಗೂ ಅದರ ಮಾಲೀಕರು ಬಾಕಿ ಪಾವತಿಗೆ ಮುಂದಾಗಿಲ್ಲ. ವಸೂಲಿ ಮಾಡುವ ಪ್ರಯತ್ನವೂ ಸರ್ಕಾರದ ಕಡೆಯಿಂದ ಆಗಿಲ್ಲ. ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸಭೆಯಲ್ಲಿ ಈ ಬಗ್ಗೆ ಸುಧೀರ್ಘ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಜಲ್ಲಿ ಕ್ರಷರ್‌ಗಳನ್ನು ಮಚ್ಚಿಸಿದ ನಂತರ ಮೂರು ತಿಂಗಳಲ್ಲಿ ಬಾಕಿ ಪಾವತಿಗೆ ಆದೇಶಿಸಿ, ಉಳಿದಿದ್ದ ಜಲ್ಲಿಕಲ್ಲು ಮತ್ತಿತರ ಖನಿಜ ಸಂಪತ್ತು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ನಂತರದ ದಿನಗಳಲ್ಲಿ ಅದನ್ನು ಮಾರಾಟ ಮಾಡಲುಅಧಿಕಾರಿಗಳು ಅವಕಾಶ ನೀಡಿದ್ದಾರೆ.

ಕೋಟ್ಯಂತರ ರೂಪಾಯಿ ಮೊತ್ತದ ಜಲ್ಲಿಯನ್ನು ಮಾಲೀಕರು ಮಾರಾಟ ಮಾಡಿಕೊಂಡು ಲಾಭ ಮಾಡಿಕೊಂಡಿದ್ದಾರೆ. ಕನಿಷ್ಠ ಪಕ್ಷ ದಾಸ್ತಾನು ಇದ್ದಿದ್ದರೆ, ಅದನ್ನು ಹರಾಜು ಹಾಕಿ ಬಾಕಿತುಂಬಿಕೊಳ್ಳುವ ಅವಕಾಶಗಳಿದ್ದವು. ಅಧಿಕಾರಿಗಳ ನಡೆಯಿಂದಾಗಿ ಅದೂ ಕೈತಪ್ಪಿದ್ದು, ಮುಚ್ಚಿಸಿರುವ ಘಟಕ, ಯಂತ್ರಗಳನ್ನು ಹರಾಜು ಹಾಕಿದರೂ ಬಾಕಿ ಮೊತ್ತವಸೂಲಾಗುವುದಿಲ್ಲ.

ಯಾವ ಸ್ಥಳದಲ್ಲಿ ಎಷ್ಟು ಜಲ್ಲಿ ದಾಸ್ತಾನು ಉಳಿದಿದೆ, ಕ್ರಷರ್ ಘಟಕಗಳ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಡ್ರೋಣ್ ಬಳಸಿ ಸರ್ವೆ ಮಾಡಲು ಸರ್ಕಾರ ಆದೇಶಿಸಿದ್ದು, ಅದೂ ಜಾರಿಯಾಗಿಲ್ಲ. ಡ್ರೋಣ್ ಸರ್ವೆ ನಡೆಸದಂತೆ ತಡೆದವರು ಯಾರು ಎಂಬ ಬಗ್ಗೆ ಅಧಿಕಾರಿಗಳ ಬಳಿ ಉತ್ತರ ಇಲ್ಲವಾಗಿದೆ. ಈ ಬಗ್ಗೆಯೂ ತನಿಖೆ ನಡೆಸಲು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.

ಕ್ರಷರ್‌ ಘಟಕಗಳನ್ನು ಮುಚ್ಚಿಸಿದ ನಂತರ, ಮತ್ತೊಬ್ಬರ ಹೆಸರಿನಲ್ಲಿ ಅನುಮತಿ ಪಡೆದು ಮತ್ತೊಂದು ಜಾಗದಲ್ಲಿ ಮತ್ತೆ ಕಾರ್ಯನಿರತವಾಗಿವೆ. ಇಲ್ಲೂ ರಾಯಧನ ಕಟ್ಟದೆ ವಂಚಿಸಲಾಗುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳು, ನಗರಕ್ಕೆ ಹೊಂದಿಕೊಂಡಂತೆ ಇರುವ ಜಿಲ್ಲೆಗಳಲ್ಲಿ ಇಂತಹ ಹೆಚ್ಚು ಅಕ್ರಮಗಳು ನಡೆದಿವೆ ಎನ್ನಲಾಗಿದೆ.

‘ತೆರಿಗೆ ವಸೂಲಿಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದರಲ್ಲಿ ಯಾರೆಲ್ಲ ಅಧಿಕಾರಿಗಳ ಪಾತ್ರವಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಮತ್ತಿತರ ವಿವರಗಳನ್ನು ಹದಿನೈದು ದಿನಗಳಲ್ಲಿ ತಿಳಿಸಬೇಕು. ಮುಂದಿನ ಸಭೆಗೆ ಎಲ್ಲ ಮಾಹಿತಿ ಒದಗಿಸಬೇಕು’ ಎಂದು ಅಶೋಕ್ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT