ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 200 ಕೋಟಿ ಮೌಲ್ಯದ ಆಸ್ತಿ ಕಬಳಿಸಲು ಯತ್ನ?

ಸಿಎಸ್‌ಐಟಿಎಗೆ ಸೇರಿದ್ದ ಆಸ್ತಿ, ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಎಫ್‌ಐಆರ್‌
Last Updated 2 ನವೆಂಬರ್ 2019, 2:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಚರ್ಚ್‌ ಆಫ್‌ ಸೌತ್ ಇಂಡಿಯಾ ಟ್ರಸ್ಟ್ ಅಸೋಸಿಯೇಷನ್‌ಗೆ (ಸಿಎಸ್‌ಐಟಿಎ) ಸೇರಿದ ಸುಮಾರು ₹200 ಕೋಟಿ ಮೌಲ್ಯದ ಆಸ್ತಿ ಕಬಳಿಸಲು ಹುನ್ನಾರ ನಡೆದಿದೆ ಎನ್ನಲಾಗುತ್ತಿದ್ದು, ಈ ಸಂಬಂಧಹಲಸೂರು ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ಸಂಸ್ಥೆಗೆ ಸಂಬಂಧವೇ ಇಲ್ಲದ ಜಾನ್ ದೊರೈ, ತ್ಯಾಗರಾಜ್, ಜೀವನ್ ಪ್ರಕಾಶ್ ಡೇವಿಡ್ ಸ್ಪೀಫನ್ ಹಾಗೂ ಇತರರು ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸಲು ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿ ಸಿಎಸ್‌ಐಟಿಎ ಕಾರ್ಯದರ್ಶಿಜೆ.ಪೌಲ್ ಧನಶೇಖರನ್ ಅಕ್ಟೋಬರ್ 15ರಂದು ದೂರು ನೀಡಿದ್ದಾರೆ.

ಅದರನ್ವಯ ಆರೋಪಿಗಳ ವಿರುದ್ಧ ಅಪರಾಧ ಸಂಚು (ಐಪಿಸಿ 34), ವಂಚನೆ (ಐಪಿಸಿ 420) ಹಾಗೂ ಸಹಿ ನಕಲು ಮಾಡಿದ (ಐಪಿಸಿ 465) ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಸಿಎಸ್‌ಐಟಿಎ ಸಂಸ್ಥೆಗೆ ಹೋಗಿ ಮಹಜರು ಮಾಡಲಾಗಿದೆ. ದೂರಿಗೆ ಸಂಬಂಧಪಟ್ಟ ಸಂಪೂರ್ಣ ದಾಖಲೆಗಳನ್ನು ಒದಗಿಸುವಂತೆ ದೂರುದಾರರಿಗೆ ಹೇಳಲಾಗಿದೆ. ಆರೋಪಿಗಳನ್ನು ಒಂದು ಬಾರಿ ವಿಚಾರಣೆ ಮಾಡಲಾಗಿದ್ದು, ಪುನಃ ವಿಚಾರಣೆಗೆ ಬರುವಂತೆ ಹೇಳಿ ಕಳುಹಿಸಲಾಗಿದೆ’ ಎಂದು ಹಲಸೂರು ಠಾಣೆ ಪೊಲೀಸರು ಹೇಳಿದರು.

ನಕಲಿ ದಾಖಲೆ ಬಳಸಿ ನೋಂದಣಿ: ‘ಧಾರ್ಮಿಕ ಸಂಸ್ಥೆಯಾಗಿರುವ ಸಿಎಸ್‌ಐಟಿಎ ಅಡಿಯಲ್ಲಿ ರಾಜ್ಯದಲ್ಲಿ ಮೂರು ಡಯಾಸಿಸ್‌ಗಳು ಇವೆ. ಇವೆಲ್ಲದರ ಮುಖ್ಯಸ್ಥರಾಗಿ ಬಿಷಪ್‌ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೊಂದು ಆಡಳಿತ ಮಂಡಳಿಯೂ ಇದೆ’ ಎಂದು ದೂರಿನಲ್ಲಿ ಧನಶೇಖರನ್ ತಿಳಿಸಿದ್ದಾರೆ.

‘ಸಂಸ್ಥೆಯ ಕಾರ್ಯನಿರ್ವಾಹಣಾ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿರುವ ಆರೋಪಿ ಜಾನ್ ದೊರೈ, ಸಂಸ್ಥೆಯ ಆಸ್ತಿಯನಕಲಿ ಪವರ್ ಆಫ್ ಅಟಾರ್ನಿ ಅಧಿಕಾರವನ್ನು ತ್ಯಾಗರಾಜ್‌ಗೆ ನೀಡಿದ್ದಾರೆ. ಆಸ್ತಿಯ ನಕಲಿ ದಾಖಲೆಗಳನ್ನು ಬಳಸಿಕೊಂಡು ಇಂದಿರಾನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಸಹ ಮಾಡಿಸಿಕೊಟ್ಟಿದ್ದಾನೆ’ ಎಂದು ಧನಶೇಖರನ್ ದೂರಿದ್ದಾರೆ.

ಪೊಲೀಸ್ ಅಧಿಕಾರಿಯೊಬ್ಬರು, ‘ಚರ್ಚ್‌ ಆವರಣದಲ್ಲಿರುವ 55,517 ಚದರ ಅಡಿ ಜಾಗವನ್ನು ಕೆ.ಅಬ್ದುಲ್ ನಸ್ಸಾರ್ ಎಂಬುವರಿಗೆ ಲೀಸ್ ನೀಡಲಾಗಿತ್ತು. ಆ ಜಾಗ ವಾಪಸು ಪಡೆಯಲು ಪ್ರಯತ್ನಿಸುತ್ತಿದ್ದ ಈಗಿನ ಆಡಳಿತ ಮಂಡಳಿ, ದಾಖಲೆಗಳ ಪರಿಶೀಲನೆ ನಡೆಸಿತ್ತು. ಈ ಸಮಯದಲ್ಲಿ ನಕಲಿ ಪವರ್‌ ಆಫ್‌ ಅಟಾರ್ನಿ ಮಾಡಿರುವ ಸಂಗತಿ ಗಮನಕ್ಕೆ ಬಂದಿರುವುದಾಗಿ ಧನಶೇಖರನ್‌ ತಿಳಿಸಿದ್ದಾರೆ’ ಎಂದರು.

’ಈ ಹಿಂದೆ ಸಂಸ್ಥೆಯ ನಿರ್ದೇಶಕರಾಗಿ ತಾವು ಕೆಲಸ ಮಾಡಿರುವುದಾಗಿ ಆರೋಪಿ ಜಾನ್ ದೊರೈ ಹೇಳುತ್ತಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಈ ಆಸ್ತಿಯ ವಿವಾದ ಶುರುವಾಗಿರುವ ಅನುಮಾನವಿದೆ. ಆಸ್ತಿ ಕಬಳಿಸುವ ಹುನ್ನಾರ ಮಾಡುತ್ತಿರುವುದು ಯಾರು ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಹೇಳಿದರು.

ದೂರುದಾರರ ವಿರುದ್ಧವೂ ಎಫ್‌ಐಆರ್‌: ‘ಪ್ರಕರಣದ ಆರೋಪಿ ಆಗಿರುವ ಜಾನ್ ದೊರೈ, ದೂರುದಾರ ಧನಶೇಖರನ್‌ ವಿರುದ್ಧ ಎಸ್‌.ಜೆ.ಪಾರ್ಕ್ ಹಾಗೂ ತಮಿಳುನಾಡಿನ ಪೊಲೀಸರಿಗೆ ಪ್ರತ್ಯೇಕ ದೂರು ನೀಡಿದ್ದಾರೆ. ಆ ಬಗ್ಗೆ ವಿವರ ಪಡೆಯಬೇಕಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT