ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣಬೆಳಗೊಳಕ್ಕೆ ವಾಹನ ಪ್ರವೇಶ ನಿಷೇಧ

Last Updated 6 ಫೆಬ್ರುವರಿ 2018, 10:08 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಲು ಫೆ. 6ರಿಂದ 26ರ ವರೆಗೆ ಶ್ರವಣಬೆಳಗೊಳಕ್ಕೆ ವಾಹನ ಪ್ರವೇಶ ನಿಷೇಧಿಸಲಾಗಿದೆ.

ಪಟ್ಟಣ ಪ್ರವೇಶಿಸುವ ಹೊರವಲಯದಲ್ಲಿಯೇ ಖಾಸಗಿ ವಾಹನಗಳಿಗೆ ಒಟ್ಟು 10 ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ. ಪ್ರಾಕೃತ ಆಸ್ಪತ್ರೆ ಹತ್ತಿರ, ನಾಗಮಂಗಲ ರಸ್ತೆ, ಮೇಲುಕೋಟೆ ರಸ್ತೆ, ಕೊತ್ತನಘಟ್ಟ ರಸ್ತೆ, ಕಂಠಿರಾಯಪುರ ರಸ್ತೆ, ಕಿಕ್ಕೇರಿ ರಸ್ತೆ, ಕಾಂತರಾಜಪುರ ರಸ್ತೆ, ಚನ್ನರಾಯಪಟ್ಟಣ ರಸ್ತೆ, ವಿಂಧ್ಯಗಿರಿ ಬೆಟ್ಟದ ಪಶ್ಚಿಮ ಭಾಗ ಹಾಗೂ ಮಟ್ಟನವಿಲೆ ರಸ್ತೆ ಮಾರ್ಗಗಳಲ್ಲಿ ಖಾಸಗಿ ವಾಹನ ನಿಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಪಾರ್ಕಿಂಗ್‌ಗಾಗಿಯೇ ಅಂದಾಜು 106 ಎಕೆರೆ ಪ್ರದೇಶ ಹಾಗೂ ಕೆಎಸ್ಆರ್‌ಟಿಸಿ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಸುಮಾರು 19 ಎಕೆರೆ ಪ್ರದೇಶ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರಿ ಮತ್ತು ಗಣ್ಯರ ವಾಹನಗಳಿಗೆ ಮಾತ್ರ ಕ್ಷೇತ್ರಕ್ಕೆ ಪ್ರವೇಶ ಇದೆ. ಜತೆಗೆ ಮೂರು ಹೆಲಿಪ್ಯಾಡ್‌ ಸಹ ನಿರ್ಮಿಸಲಾಗಿದೆ.

ಸ್ಥಳೀಯರ ವಾಹನಗಳ ಸಮೀಕ್ಷೆ ಮಾಡಲಾಗಿದ್ದು, ಅವರಿಗೆ ಪಾಸ್‌ ನೀಡಲಾಗುತ್ತದೆ. ಪಾರ್ಕಿಂಗ್‌ ಸ್ಥಳದಿಂದಲೇ ಸಾರ್ವಜನಿಕರನ್ನು ಕ್ಷೇತ್ರಕ್ಕೆ ಕರೆತರಲು ಕೆಎಸ್‌ಆರ್‌ಟಿಸಿ 75 ಮಿನಿ ಬಸ್‌ ಸಂಚಾರ ವ್ಯವಸ್ಥೆ ಮಾಡಿದೆ. ಭದ್ರತೆಗೆ ಐದು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕೆಎಸ್ಆರ್‌ಪಿ ತುಕಡಿ, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ದಳ, ಭಯೋತ್ಪಾದನಾ ನಿಗ್ರಹ ದಳ, ಗರುಡಾ ವಾಹನ, ಗೃಹ ರಕ್ಷಕ ದಳ ಸಿಬ್ಬಂದಿ ಕಾರ್ಯ ನಿರ್ವಹಿಸುವರು.

‘ ಕಾನೂನು, ಸುವ್ಯವಸ್ಥೆ ಕಾಪಾಡಲು ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು. 16,500 ಕಾರುಗಳನ್ನು ಏಕಕಾಲಕ್ಕೆ ಪಾರ್ಕಿಂಗ್‌ ಮಾಡಬಹುದು. ಸಾರ್ವಜನಿಕರು ಹೆಚ್ಚು ಲಗ್ಗೇಜ್‌ ತರಬಾರದು. ಬೆಟ್ಟದ ಮೇಲೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ವಾರಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಕಾರಣ ಇತರೆ ದಿನಗಳಲ್ಲಿ ಬರುವುದು ಒಳ್ಳೆಯದು’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ತಿಳಿಸಿದರು.

‘ಅಪರಾಧ ತಡೆಗೆ ನಿಗಾವಹಿಸಲು 100 ಮಂದಿ ಹ್ಯಾಂಡಿಕ್ಯಾಮ್ ವಿಡಿಯೊಗ್ರಾಫರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹಾಗೆಯೇ 150 ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಟ್ಟಣಿಗೆ, ಬೆಳಗೊಳ ಪ್ರವೇಶಿಸುವ ಎಲ್ಲಾ ರಸ್ತೆ ಮಾರ್ಗಗಳು, ಅಯಾಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಕುರಿತ ಮಾಹಿತಿಯನ್ನು ಫೇಸ್ ಬುಕ್ ಮತ್ತು ಟ್ವಿಟರ್ ಮೂಲಕ ಸಾರ್ವಜನಿಕರಿಗೆ ಒದಗಿಸಲಾಗುವುದು. ಪ್ರವಾಸಿಗರು, ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾಹಿತಿ ರವಾನೆ ಮಾಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ವಿವರಿಸಿದರು.

ಮದ್ಯ, ಮಾಂಸ ಮಾರಾಟ ಬಂದ್‌
ಮಸ್ತಕಾಭಿಷೇಕದ ಪ್ರಯುಕ್ತ ಫೆ. 28ರ ವರೆಗೆ ಶ್ರವಣಬೆಳಗೊಳ ಮತ್ತು ಕಾಂತರಾಜಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿದೆ.

ದೇಶ, ವಿದೇಶಗಳಿಂದ ಯಾತ್ರಾರ್ಥಿಗಳು, ಭಕ್ತರು ಹಾಗೂ ಪ್ರವಾಸಿಗರು ಬರುವ ಕಾರಣ ಅಹಿತಕರ ಘಟನೆ ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ವಿಶೇಷ ರೈಲು ಸಂಚಾರ
ಮಹಾಮಸ್ತಕಾಭಿಷೇಕಕ್ಕೆ ಹೋಗುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲು ನೈರುತ್ಯ ವಿಭಾಗೀಯ ರೈಲ್ವೆ ಫೆ. 7ರಿಂದ 26ರ ವರೆಗೆ ವಿಶೇಷ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಿದೆ. ಯಶವಂತಪುರದಿಂದ ಹಾಸನ ಹಾಗೂ ಹಾಸನದಿಂದ ಯಶವಂತಪುರ, ಮೀರಜ್‌ನಿಂದ ಹಾಸನ ಹಾಗೂ ಹಾಸನದಿಂದ ಮೀರಜ್‌ಗೆ ಈ ರೈಲುಗಳು ಸಂಚರಿಸಲಿವೆ.‌‌

ಯಶವಂತಪುರದಿಂದ ಶ್ರವಣಬೆಳಗೊಳಕ್ಕೆ ಪ್ರತಿನಿತ್ಯ ಡೆಮು ವಿಶೇಷ ರೈಲು, ಎಕ್ಸ್‌ಪ್ರೆಸ್‌ ರೈಲು (ಶನಿವಾರ ಇರುವುದಿಲ್ಲ), ಪ್ರಯಾಣಿಕರ ರೈಲು, ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲುಗಳು ಸಂಚರಿಸಲಿವೆ. ಇವು ಮುಂಜಾನೆ 5.15 ರಿಂದ ಪ್ರಯಾಣ ಆರಂಭಿಸಿ, ರಾತ್ರಿ 7.30ರ ವರೆಗೆ ಸಂಚರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT