ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯ ತಡೆಯವ ಉದ್ದೇಶ: ಕಬ್ಬನ್‌ನಲ್ಲಿ ವಿದ್ಯುತ್‌ ಸೈಕಲ್‌ನಲ್ಲಿ ಗಸ್ತು

ಉದ್ಯಾನದಲ್ಲಿ ತೋಟಗಾರಿಕೆ ಸಿಬ್ಬಂದಿಯಿಂದ ಪರಿಸರ ಸ್ನೇಹಿ ಕ್ರಮ
Last Updated 4 ಫೆಬ್ರುವರಿ 2020, 2:22 IST
ಅಕ್ಷರ ಗಾತ್ರ

ಬೆಂಗಳೂರು: ಮಾಲಿನ್ಯ ನಿಯಂತ್ರಣಕ್ಕಾಗಿ ಕಬ್ಬನ್ ಉದ್ಯಾನದಲ್ಲಿ ಎಲ್ಲ ಸರ್ಕಾರಿ ರಜಾ ದಿನಗಳಂದುವಾಹನ ಸಂಚಾರ ನಿಷೇಧಿಸಿರುವ ಬೆನ್ನಲ್ಲೇ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಮತ್ತೊಂದು ಪರಿಸರಸ್ನೇಹಿ ಕ್ರಮ ಕೈಗೊಂಡಿದ್ದಾರೆ. ಉದ್ಯಾನದಲ್ಲಿ ಗಸ್ತು ತಿರುಗಲು ವಿದ್ಯುತ್‌ ಚಾಲಿತ ಸೈಕಲ್‌ ಬಳಸುತ್ತಿದ್ದಾರೆ.

‘ಪ್ರಜಾವಾಣಿ’ ವತಿಯಿಂದ ಲಾಲ್‌ಬಾಗ್‌ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಕೂಡಾ ಉದ್ಯಾನದೊಳಗೆ ಮಾಲಿನ್ಯ ಉಂಟು ಮಾಡುವ ವಾಹನ ಬಳಸಬಾರದು ಎಂಬ ಸಲಹೆ ಸಾರ್ವಜನಿಕರಿಂದ ವ್ಯಕ್ತವಾಗಿತ್ತು. ಅಧಿಕಾರಿಗಳೂ ಲಾಲ್‌ಬಾಗ್‌ನಲ್ಲಿ ವಾಹನ ಬಳಸದಂತೆ ತೋಟಗಾರಿಕಾ ಇಲಾಖೆ ನಿರ್ಬಂಧ ವಿಧಿಸಿತ್ತು. ಅದರ ಬದಲು ವಿದ್ಯುತ್‌ಚಾಲಿತ ವಾಹನ (ಬಗ್ಗಿ) ಹಾಗೂ ಸೈಕಲ್‌ ಬಳಕೆಯನ್ನು ಜಾರಿಗೊಳಿಸಲಾಗಿತ್ತು. ಅಲ್ಲಿನ ಜಂಟಿ ನಿರ್ದೇಶಕರ ಸಹಿತ ಸಿಬ್ಬಂದಿಯೂ ಸೈಕಲ್‌ ಬಳಸುತ್ತಿದ್ದಾರೆ.

ಈ ಪ್ರಯೋಗ ಯಶಸ್ವಿಯಾಗಿದ್ದರಿಂದ ಕಬ್ಬನ್‌ ಉದ್ಯಾನದಲ್ಲೂ ಲಾಲ್‌ಬಾಗ್‌ ಮಾದರಿ ಅನುಸರಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಜ್ಜೆ ಇಟ್ಟಿದ್ದಾರೆ. ತೋಟಗಾರಿಕೆ ಇಲಾಖೆ ಮೂರು ವಿದ್ಯುತ್‌ ಚಾಲಿತ ಹಾಗೂ ಎರಡು ಸಾಮಾನ್ಯ ಮಾದರಿಯ ಸೈಕಲ್‌ಗಳು ಸೇರಿ ಒಟ್ಟು ಐದು ಸೈಕಲ್‌ಗಳನ್ನು ಒದಗಿಸಿದೆ.

ವಿದ್ಯುತ್‌ ಸೈಕಲ್‌ ಅನ್ನು ಕೆಲವು ಗಂಟೆಗಳವರೆಗೆ ಚಾರ್ಜ್‌ ಮಾಡಿದರೆ, ದಿನವಿಡೀ ‌ಸಂಚರಿಸಬಹುದು.ಅಧಿಕಾರಿಗಳು ಇಲಾಖೆ ವಾಹನದ ಬದಲಿಗೆ ಸೈಕಲ್‌ ಏರಿಉದ್ಯಾನದಲ್ಲಿ ಗಸ್ತು ತಿರುಗುತ್ತಿದ್ದಾರೆ.

ಸೈಕಲ್‌ನಲ್ಲಿ ಕನಿಷ್ಠ, ಮಧ್ಯಮ ಹಾಗೂ ಗರಿಷ್ಠ ವೇಗವನ್ನು ಮೊದಲೇ ನಿಗದಿ ಪಡಿಸಿಕೊಳ್ಳಬಹುದು. ಗಂಟೆಗೆ ಕನಿಷ್ಠ 6 ಕಿ.ಮೀ ವೇಗದಲ್ಲಿ ಸೈಕಲ್‌ಗಳು ಸಂಚರಿಸುತ್ತವೆ. ಒಂದು ವೇಳೆ ವಿದ್ಯುತ್‌ ಚಾಲಿತ ಸಂಚಾರ ಬೇಡ ಎಂದಾದಲ್ಲಿ, ಪೆಡಲ್‌ ತುಳಿದು ಸಾಗುವುದಕ್ಕೂ ಅವಕಾಶವಿದೆ.

‘300 ಎಕರೆಗಳಲ್ಲಿ ವ್ಯಾಪಿಸಿರುವ ಕಬ್ಬನ್ ಉದ್ಯಾನವನ್ನು ಸಂಚರಿಸಲು ಕನಿಷ್ಠ ಅರ್ಧ ದಿನ ಬೇಕು. ಇಲಾಖೆ ಸಿಬ್ಬಂದಿ ಉದ್ಯಾನದಲ್ಲಿ ಗಸ್ತು ತಿರುಗಲು ಸಮಸ್ಯೆಯಾಗುತ್ತಿತ್ತು. ಇಲಾಖೆ ವಾಹನದಲ್ಲಿ ಉದ್ಯಾನದ ಎಲ್ಲ ಸ್ಥಳಗಳಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ವಿದ್ಯುತ್‌ ಚಾಲಿತ ಸೈಕಲ್‌ಗಳಿಂದ ಉದ್ಯಾನದ ಮೂಲೆ ಮೂಲೆಯನ್ನೂ ಸುಲಭವಾಗಿ ತಲುಪಬಹುದು’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ (ಕಬ್ಬನ್) ಜಿ.ಕುಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉದ್ಯಾನವನ್ನು ಮಾಲಿನ್ಯಮುಕ್ತಗೊಳಿಸುವುದು ಇಲಾಖೆಯ ಉದ್ದೇಶ. ಸೈಕಲ್‌ ಬಳಕೆಯಿಂದ ಸಿಬ್ಬಂದಿ ವ್ಯಾಯಾಮ ಮಾಡಿದಂತೆಯೂ ಆಗು ತ್ತದೆ. ಇದರಿಂದ ಅವರ ಆರೋಗ್ಯವೂ ಸುಸ್ಥಿತಿಯಲ್ಲಿರಲಿದೆ. ಉದ್ಯಾನದಲ್ಲಿ ಏನಾದರೂ ಅವಘಡ ಸಂಭವಿಸಿದರೂ, ಶೀಘ್ರವೇ ಸ್ಥಳಕ್ಕೆ ಧಾವಿಸಲು ಅನುಕೂಲವಾಗುತ್ತದೆ’ ಎಂದರು.

*
ಅಧಿಕಾರಿಗಳು ಪರಿಸರಸ್ನೇಹಿ ಸೈಕಲ್‌ ಬಳಸಿ ಸಾರ್ವಜನಿಕರಿಗೆ ಮಾದರಿಯಾಗಿದ್ದಾರೆ. ಉದ್ಯಾನದಲ್ಲಿ ಅಸಭ್ಯವಾಗಿ ವರ್ತಿಸುವವರ ಮೇಲೆ ನಿಗಾ ಇಡಲು ಅನುಕೂಲ
-ಹರೀಶ್‌, ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT