ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ–CUPA ಸಹಯೋಗ: ಬೆಕ್ಕಿಗೂ ಬೇಕು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ

ನಗರದಲ್ಲಿ ಹೆಚ್ಚುತ್ತಿದೆ ಬೆಕ್ಕುಗಳ ಸಂತತಿ l ಬೀದಿಪಾಲಾಗುತ್ತಿವೆ ಪುಟಾಣಿ ಮರಿಗಳು
Last Updated 17 ಡಿಸೆಂಬರ್ 2021, 21:30 IST
ಅಕ್ಷರ ಗಾತ್ರ

ಬೆಂಗಳೂರು: ಮನೆಯಲ್ಲಿ ಸಾಕಿದ ಬೆಕ್ಕುಗಳು ಹಾಕುವ ಮರಿಗಳನ್ನು ಸಾಕಲಾಗದೇ ಬೀದಿ ಪಾಲು ಮಾಡುವ ಪರಿಪಾಠ ನಗರದಲ್ಲಿ ಹೆಚ್ಚಾಗುತ್ತಿದೆ. ಬೆಕ್ಕುಗಳ ಸಂತಾನ ಮಿತಿ ಮೀರುವುದನ್ನು ತಡೆಯಲು ಅವುಗಳನ್ನೂ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ ಪ್ರಾಣಿ ಪ್ರಿಯರು.

‘ಬೆಕ್ಕುಗಳು 15ರಿಂದ 17 ವರ್ಷಗಳ ಕಾಲ ಬದುಕುತ್ತವೆ. ಹೆಣ್ಣು ಬೆಕ್ಕು ಪ್ರತಿ ಮೂರು ತಿಂಗಳಿಗೊಮ್ಮೆ ಬೆದೆಗೆ ಬರುತ್ತದೆ. ಒಮ್ಮೆಗೆ ಆರರಿಂದ ಒಂಬತ್ತು ಮರಿಗಳನ್ನು ಹಾಕುವ ಹೆಣ್ಣು ಬೆಕ್ಕು ವರ್ಷದಲ್ಲಿ 20ರಿಂದ 25 ಬೆಕ್ಕುಗಳ ಹುಟ್ಟಿಗೆ ಕಾರಣವಾಗಬಲ್ಲುದು. ಜೀವಿತಾವಧಿಯಲ್ಲಿ 10 ವರ್ಷಗಳ ಕಾಲ ಮರಿ ಹಾಕಬಲ್ಲುದು. ಹಾಗಾಗಿ ಕೆಲವು ವಸತಿ ಸಮುಚ್ಚಯಗಳಲ್ಲಿ ಬೆಕ್ಕುಗಳ ಸಂಖ್ಯೆ ವಿಪರೀತ ಹೆಚ್ಚಳವಾಗುತ್ತಿದೆ. ಸಂತಾನ ಅಭಿವೃದ್ಧಿ ತಡೆಯಬೇಕಾದರೆ ಅವುಗಳಿಗೂ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವುದು ಅಗತ್ಯ’ ಎಂದು ಕ್ಯೂಪಾ ಸಂಸ್ಥೆಯ ಯೋಜನಾ ವಿಭಾಗದ ಮುಖ್ಯಸ್ಥ ಅಜಯ್‌ ಅರ್ಜುನ್‌ ಅಭಿಪ್ರಾಯಪಟ್ಟರು.

ಬೆಕ್ಕುಗಳ ಸಂತಾನ ಶಕ್ತಿ ಹರಣಕ್ಕಾಗಿಯೇ ಕ್ಯೂಪಾ 2018ರಿಂದ ವಿಶೇಷ ಕಾರ್ಯಕ್ರಮವನ್ನು ನಡೆಸುತ್ತಿದೆ. ಈ ಕಾರ್ಯಕ್ರಮಕ್ಕೆಂದೇ ವ್ಯವಸ್ಥಾಪಕರು, ಪಶುವೈದ್ಯರು, ಮೇಲ್ವಿಚಾರಕರು, ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ನಿವಾಸಿಗಳನ್ನು ಒಳಗೊಂಡ ತಂಡಗಳಿವೆ.

‘ಬೆಕ್ಕುಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವಂತೆ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಂದ (ಆರ್‌ಡಬ್ಲ್ಯುಎ) ಬೇಡಿಕೆ ಬರುತ್ತಿತ್ತು. ಆದರೆ, ಇದಕ್ಕೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಹಾಗಾಗಿ, ಕ್ಯೂಪಾ ವತಿಯಿಂದಲೇ ಬೆಕ್ಕುಗಳ ಸಂತಾನ ನಿಯಂತ್ರಣ ಕಾರ್ಯಕ್ರಮ ಆರಂಭಿಸಿದೆವು. ನಿಗದಿತ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿರುವ ಬೆಕ್ಕುಗಳನ್ನು ಹಿಡಿದು ಅಲ್ಲೇ ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಈ ಪ್ರಯತ್ನ ದೇಶದಲ್ಲೇ ಮೊದಲು’ ಎಂದು ಅಜಯ್‌ ತಿಳಿಸಿದರು.

‘ಬೆಕ್ಕುಗಳ ಸಂತಾನ ನಿಯಂತ್ರಣಕ್ಕೆ ಸಂಬಂಧಿಸಿದ, ಸಮುದಾಯ ಆಧಾರಿತವಾದ ಮೊದಲ ಕಾರ್ಯಕ್ರಮವಿದು. ಇದು ಬಹಳ ಯಶಸ್ವಿಯಾಗಿದೆ. ಅನೇಕ ಆರ್‌ಡಬ್ಲ್ಯುಎಗಳು ಹಾಗೂ ಸ್ವಯಂಸೇವಕರು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ನಾವೀಗ ತಿಂಗಳಲ್ಲಿ ಸರಾಸರಿ 9 ಬೆಕ್ಕುಗಳಿಗೆ ಇಂತಹ ಶಸ್ತ್ರಚಿಕಿತ್ಸೆ ನಡೆಸುತ್ತೇವೆ. ಇದುವರೆಗೆ 3 ಸಾವಿರಕ್ಕೂ ಅಧಿಕ ಬೆಕ್ಕುಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ಸೂಕ್ಷ್ಮ ವಿಚಾರಗಳನ್ನು ಕ್ಷಿಪ್ರವಾಗಿ ಗ್ರಹಿಸುವ ಬೆಕ್ಕುಗಳನ್ನು ಹಿಡಿಯುವುದು ಬಲು ಕಷ್ಟದ ಕೆಲಸ. ಇದಕ್ಕಾಗಿಯ ವಿಶೇಷ ಬಲೆ ಹಾಗೂ ಬೋನುಗಳನ್ನು ಬಳಸುತ್ತೇವೆ. ಇಂತಹ ಸಾಧನಗಳು ಹಾಗೂ ಬೋನುಗಳು ಕ್ಯೂಪಾ ಬಳಿ ಲಭ್ಯ. ಬೆಕ್ಕುಗಳಿಗೆ ನಂಬಿಕಾರ್ಹವಾದ ಸ್ಥಳೀಯರ ನೆರವೂ ಅಗತ್ಯ. ಹಿಡಿದ ಬೆಕ್ಕುಗಳನ್ನು ಶಸ್ತ್ರಚಿಕಿತ್ಸೆಗೆ ಸಜ್ಜುಗೊಳಿಸಬೇಕಾಗುತ್ತದೆ. ಅವು 12 ತಾಸು ಉಪವಾಸ ಇರಬೇಕು. ಶಸ್ತ್ರಚಿಕಿತ್ಸೆ ಬಳಿಕ ಹೆಣ್ಣು ಬೆಕ್ಕಿಗೆ ಮೂರು ದಿನ ವಿಶೇಷ ಆರೈಕೆಯ ಅಗತ್ಯವಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ಬೆಕ್ಕಿನ ಕಿವಿಯನ್ನು ಇಂಗ್ಲಿಷ್‌ ಅಕ್ಷರ ‘ವಿ’ (V) ಆಕಾರದಲ್ಲಿ ಕತ್ತರಿಸಲಾಗುತ್ತದೆ. ಇದರಿಂದ ಅವುಗಳು ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ತಪ್ಪಿಸಬಹುದು’ ಎಂದು ವಿವರಿಸಿದರು.

ಪ್ರತಿ ಬೆಕ್ಕಿನ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಕ್ಯೂಪಾ ₹ 1500 ದರ ವಿಧಿಸುತ್ತದೆ. ಆದರೆ, ಇದರಲ್ಲಿ ಶಸ್ತ್ರಚಿಕಿತ್ಸೆಯ ವೆಚ್ಚ, ರೇಬಿಸ್‌ ನಿರೋಧಕ ಲಸಿಕೆ, ದೀರ್ಘಕಾಲ ಪರಿಣಾಮಬಿರುವ ಜೀವಪ್ರತಿರೋಧಕ ಔಷಧದ (ಆ್ಯಂಟಿಬಯಾಟಿಕ್‌) ವೆಚ್ಚವೂ ಸೇರಿದೆ.

‘ಶಸ್ತ್ರಚಿಕಿತ್ಸೆಯ ವೆಚ್ಚ ಭರಿಸಲು ಸಾಧ್ಯವಾಗದವರಿಗೆ ಹಾಗೂ ಬೀದಿ ಬದಿಯ ಬೆಕ್ಕುಗಳಿಗೆ ಇಂತಹ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದಾಗುವವರಿಗೆ ನಾವು ರಿಯಾಯಿತಿಗಳನ್ನು ನೀಡುತ್ತೇವೆ’ ಎಂದು ಅಜಯ್‌ ತಿಳಿಸಿದರು.

ಪ್ರಜಾವಾಣಿ– ಕ್ಯೂಪಾ ಅಭಿಯಾನಕ್ಕೆ ಕೈಜೋಡಿಸಿ
ಬೀದಿಪ್ರಾಣಿಗಳನ್ನು ದ್ವೇಷಿಸುವವರ ದೃಷ್ಟಿಕೋನ ಬದಲಾಯಿಸಲು ಹಾಗೂ ಅವುಗಳ ಬಗ್ಗೆ ಕಾಳಜಿ ವಹಿಸುವ ಜನರು ಮತ್ತು ಸಂಸ್ಥೆಗಳ ಜೊತೆ ಕೈಜೋಡಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ‘ಪ್ರಜಾವಾಣಿ’ಯು ಕ್ಯೂಪಾ ಸಂಸ್ಥೆ ಜೊತೆ ಸೇರಿ ಅಭಿಯಾನ ನಡೆಸುತ್ತಿದೆ.

ಈ ಅಭಿಯಾನದಲ್ಲಿ ತಾವೂ ಕೈಜೋಡಿಸಬಹುದು. ಸ್ವಯಂಸೇವಕರಾಗುವ ಮೂಲಕ ಬೀದಿ ಪ್ರಾಣಿಗಳ ರಕ್ಷಿಸಲು, ಆರೈಕೆ ಮಾಡಲು ಹಾಗೂ ಅವುಗಳ ಮೇಲಾಗುವ ದೌರ್ಜನ್ಯ ತಪ್ಪಿಸಲು ನೆರವಾಗಬಹುದು. ಬೀದಿಪಾಲಾದ ಪ್ರಾಣಿಗಳನ್ನು ದತ್ತು ಪಡೆದು ಸಾಕಬಹುದು. ಮೂಕ ಪ್ರಾಣಿಗಳ ಬದುಕಿನಲ್ಲೂ ಭರವಸೆ ಮೂಡಿಸಲು ಹಮ್ಮಿಕೊಂಡ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಿರಾದರೆ, ಇಲ್ಲಿರುವ ಕೊಂಡಿಯನ್ನು (bit.ly/PVCUPA) ಕ್ಲಿಕ್ಕಿಸಿ ಹೆಸರು ನೋಂದಾಯಿಸಿ.

ಬೆಕ್ಕು ಹಿಡಿಯುವ ತಂತ್ರ
* ಅವುಗಳ ಜೊತೆ ನಂಟು ಬೆಳೆಸಿ
*ಅವುಗಳಿಗೆ ಆಗಾಗ ಆಹಾರ ನೀಡುತ್ತಿರಿ
*ಕ್ರಮೇಣ ಬೋನಿನ ಒಳಗೆ ಆಹಾರ ನೀಡುವುದನ್ನು ಅಭ್ಯಾಸ ಮಾಡಿಸಿ

ಬೆಕ್ಕಿನ ಸಂತಾನಶಕ್ತಿ ಹರಣದ ಪ್ರಯೋಜನಗಳು
* ಕ್ರೂರವರ್ತನೆ ಕ್ರಮೇಣ ಕಡಿಮೆಯಾಗುತ್ತದೆ
* ಸೀಮೆಗೆ ಸಂಬಂಧಿಸಿ ಅವುಗಳ ನಡುವೆ ಕಚ್ಚಾಟ ಕಡಿಮೆಯಾಗುತ್ತದೆ
* ಬೆಕ್ಕಿನ ಮರಿಗಳನ್ನು ಬೀದಿಪಾಲು ಮಾಡುವುದು ತಪ್ಪುತ್ತದೆ
* ಗಂಡು ಬೆಕ್ಕುಗಳು ಬೇಕಾಬಿಟ್ಟಿ ಅಲೆದಾಡುವುದು ಕಡಿಮೆಯಾಗಲಿದೆ
* ಗಂಡು ಬೆಕ್ಕು ವೃಷಣ– ಪ್ರಾಸ್ಥೇಟ್‌ ಕ್ಯಾನ್ಸರ್‌ಗೆ ಒಳಗಾಗುವುದು ತಪ್ಪಲಿದೆ
* ಹೆಣ್ಣು ಬೆಕ್ಕುಗಳಲ್ಲಿ ಗೆಡ್ಡೆ ಬೆಳವಣಿಗೆಯ ಅಪಾಯ ಕಡಿಮೆಯಾಗಲಿದೆ
* ಅವುಗಳ ಜೀವಿತಾವಧಿ ಹೆಚ್ಚಾಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT