ಶುಕ್ರವಾರ, ಅಕ್ಟೋಬರ್ 7, 2022
24 °C
ಮಲ್ಲೇಶ್ವರ: ಬಿಬಿಎಂಪಿ, ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ ಸಹಯೋಗ

ಸಿಯುಪಿಎಚ್‌ಸಿ: ಇಂದಿನಿಂದ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿ ಮತ್ತು ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ ಸಹಯೋಗದಲ್ಲಿ ಮಲ್ಲೇಶ್ವರದ ಪ್ಯಾಲೆಸ್ ಗುಟ್ಟಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಸಿಯುಪಿಎಚ್‌ಸಿ) ಶನಿವಾರದಿಂದ ವೈದ್ಯಕೀಯ ಸೇವೆಗಳು  ಪ್ರಾರಂಭವಾಗಲಿವೆ. 

ಪ್ರಧಾನಿ ನರೇಂದ್ರ ಮೋದಿಯವರ 72ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕೇಂದ್ರ
ವನ್ನು ಉದ್ಘಾಟಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಹಾಗೂ ಕ್ಷೇತ್ರದ ಶಾಸಕರೂ ಆಗಿರುವ ಡಾ.ಸಿ.ಎನ್.
ಅಶ್ವತ್ಥನಾರಾಯಣ ಅವರು ಶುಕ್ರವಾರ ಈ ಕೇಂದ್ರವನ್ನು ಪರಿಶೀಲಿಸಿ, ವೈಶಿಷ್ಟ್ಯಗಳ ಬಗ್ಗೆ ವಿವರಿಸಿದರು.

‘ಈ ಕೇಂದ್ರ ನಿರ್ಮಾಣಕ್ಕೆ ಸಾರ್ವಜನಿಕರು ಕೂಡ ದೇಣಿಗೆ ನೀಡಿದ್ದಾರೆ. ಇಲ್ಲಿ ಪ್ರಯೋಗಾಲಯ, ಡಿಜಿಟಲ್ ಎಕ್ಸ್‌ರೇ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಪಿಎಫ್‌ಟಿ ಮತ್ತು ಇಸಿಜಿ ಸೌಲಭ್ಯಗಳು ದೊರೆಯುತ್ತವೆ. ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತಹ ಕಣ್ಣಿನ ಪರೀಕ್ಷೆ, ದಂತ ಪರೀಕ್ಷೆ, ತುರ್ತು ಚಿಕಿತ್ಸಾ ಘಟಕ, ಫಿಸಿಯೋಥೆರಪಿ, ಪ್ರಧಾನಮಂತ್ರಿಗಳ ಜನೌಷಧ ಕೇಂದ್ರ ಎಲ್ಲವೂ ಇಲ್ಲಿ ಲಭ್ಯವಿರಲಿದೆ. ಕೇಂದ್ರದಲ್ಲಿ ಒಳರೋಗಿಗಳ ವಿಭಾಗ ಹಾಗೂ ಇಎಂಆರ್ (ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್) ವ್ಯವಸ್ಥೆಯೂ ಇದೆ’ ಎಂದು ಹೇಳಿದರು. 

‘ಈ ಕೇಂದ್ರದಲ್ಲಿ ಒಂದು ದಿನಕ್ಕೆ ಗರಿಷ್ಠ 150 ಜನರಿಗೆ ಚಿಕಿತ್ಸೆ ಕೊಡಬಹುದು. ಇಲ್ಲಿ ಲಭ್ಯವಿಲ್ಲದ ಚಿಕಿತ್ಸೆಗಳನ್ನು ಮಣಿಪಾಲ್ ಸಮೂಹದ ಆಸ್ಪತ್ರೆಗಳ ಮೂಲಕ ಸರ್ಕಾರಿ ದರದಲ್ಲಿ ಕೊಡಲಾಗುವುದು. ಈ ಸಂಬಂಧ ಒಡಂಬಡಿಕೆ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು. 

‘ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಲ್ಲೇಶ್ವರ ಕ್ಷೇತ್ರದ ನಾಗಪ್ಪ ಬ್ಲಾಕ್, ಗಾಂಧಿ ಗ್ರಾಮ, ಯಶವಂತಪುರ ಮತ್ತು ಮತ್ತೀಕೆರೆಯಲ್ಲಿಯೂ ನವೀಕರಿಸಲಾಗಿದೆ. ಇವು ಒಂದು ತಿಂಗಳಲ್ಲಿ ಕಾರ್ಯಾರಂಭ ಮಾಡಲಿವೆ. ಈ ಕೇಂದ್ರಗಳಿಗೆ ನಗರೋತ್ಥಾನ ಯೋಜನೆಯಡಿ ತಲಾ ₹ 1.50 ಕೋಟಿ ಕೊಡಲಾಗುತ್ತಿದೆ. ಉಳಿದ ಎರಡು ವಾರ್ಡುಗಳಲ್ಲೂ ಇಂತಹ ಸಿಯುಪಿಎಚ್‌ಸಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ವಿವರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು