ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಫ್ಯೂ; ಬೆಂಗಳೂರಿನಿಂದ ಗುಳೆ ಹೊರಟ ಜನ

ಕೆಎಸ್ಆರ್‌ಟಿಸಿಯಿಂದ ಹೆಚ್ಚುವರಿ ಬಸ್‌ ವ್ಯವಸ್ಥೆ l ಗಂಟುಮೂಟೆ ಹೊತ್ತು ಕುಟುಂಬ ಸಮೇತ ಹೊರಟ ಮಂದಿ
Last Updated 26 ಏಪ್ರಿಲ್ 2021, 21:12 IST
ಅಕ್ಷರ ಗಾತ್ರ

ಬೆಂಗಳೂರು: ಎರಡನೇ ಅಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗಾಗಿ ರಾಜ್ಯದಾದ್ಯಂತ ಕರ್ಫ್ಯೂಜಾರಿ ಮಾಡಲಾಗುತ್ತಿದ್ದು, ಬೆಂಗಳೂರಿ ನಲ್ಲಿ ವಾಸವಿದ್ದ ಸಾವಿರಾರು ಮಂದಿ ಸೋಮವಾರ ತಮ್ಮೂರಿನತ್ತ ಹೊರಟರು.

ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಉದ್ಯೋಗ, ವಿದ್ಯಾಭ್ಯಾಸ, ಕೂಲಿ ಕೆಲಸ ನಂಬಿ ಲಕ್ಷಾಂತರ ಮಂದಿ ಬೆಂಗಳೂರಿಗೆ ಬಂದಿದ್ದಾರೆ. ಇದೀಗ ಕರ್ಫ್ಯೂ ಜಾರಿಯಾಗುತ್ತಿರುವುದರಿಂದ ಬಹುಪಾಲು ಮಂದಿಗೆ ಕೆಲಸವೇ ಇಲ್ಲದಂತಾಗುತ್ತದೆ. ಅಂಥ ಜನರೆಲ್ಲರೂ ಗಂಟುಮೂಟೆ ಕಟ್ಟಿಕೊಂಡು ಕುಟುಂಬ ಸಮೇತವಾಗಿತಮ್ಮೂರಿನ ಬಸ್‌ ಹಾಗೂ ರೈಲು ಹತ್ತಿದರು.

ಮಂಗಳವಾರ ರಾತ್ರಿಯಿಂದಲೇ ಗೂಡ್ಸ್ ಹೊರತುಪಡಿಸಿ ಎಲ್ಲ ವಾಹನಗಳ ಸಂಚಾರ ಬಂದ್ ಆಗಲಿದೆ. ವ್ಯಾಪಾರ–ವಹಿವಾಟು ಸ್ಥಗಿತವಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಹಿತಿ ನೀಡುತ್ತಿದ್ದಂತೆ, ಬಹುತೇಕರು ಬೆಂಗಳೂರು ತೊರೆಯಲು ತೀರ್ಮಾನಿಸಿ ದರು. ಮೆಜೆಸ್ಟಿಕ್‌ ಬಸ್‌ ನಿಲ್ದಾಣಗಳಲ್ಲಿ ಜನರು ಗುಂಪು ಗುಂಪಾಗಿ ನಿಂತು ಕೊಂಡು ಬಸ್‌ ಹತ್ತಿದ್ದು ಕಂಡುಬಂತು. ರೈಲು ಮೂಲಕವೂ ಸಾವಿರಾರು ಮಂದಿ ಪ್ರಯಾಣಿಸಿದರು.

ತುಮಕೂರು ರಸ್ತೆಯ ನೆಲಮಂಗಲ ಟೋಲ್‌ನಲ್ಲೂ ವಾಹನಗಳ ಓಡಾಟ ಹೆಚ್ಚಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳ ಜೊತೆಯಲ್ಲಿ ಖಾಸಗಿ ವಾಹನಗಳಲ್ಲೂ ಜನರು ಕಂಡುಬಂದರು.

ಯಶವಂತಪುರ, ಪೀಣ್ಯ, ಜಾಲಹಳ್ಳಿ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲೂ ವಾಹನಗಳ ದಟ್ಟಣೆ ಕಂಡುಬಂತು. ಬೈಕ್, ಕಾರು ಸೇರಿದಂತೆ ಹಲವು ವಾಹನಗಳು ರಾತ್ರಿ 9 ಗಂಟೆಯೂ ಮುನ್ನವೇ ಬೆಂಗಳೂರಿನಿಂದ ಹೊರ ಟವು.

ಇತ್ತೀಚೆಗೆ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದ ಸಂದರ್ಭದಲ್ಲೇ ಬಹುಪಾಲು ಮಂದಿ ಬೆಂಗಳೂರು ತೊರೆ ದಿದ್ದರು. ಇದೀಗ ಮತ್ತಷ್ಟು ಮಂದಿ ನಗರ ಬಿಟ್ಟು ಹೋದರು.

500 ಹೆಚ್ಚುವರಿ ಬಸ್‌: ಮೆಜೆಸ್ಟಿಕ್ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ 500 ಬಸ್‌ಗಳನ್ನು ಹೆಚ್ಚುವರಿಯಾಗಿ ಸೇವೆಗೆ ಕಳುಹಿಸಲಾಯಿತು. ಉತ್ತರ ಕರ್ನಾಟಕದ ಜಿಲ್ಲೆಗಳತ್ತ ಬಸ್‌ಗಳು ಹೋದವು.

‘ಕೊರೊನಾಗೆ ಹೆದರಲಿಲ್ಲ, ಕರ್ಫ್ಯೂಗೆ ಹೆದರಬೇಕಾಯ್ತು’
‘ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದರೂ ನಗರದಲ್ಲೇ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವು. ಆದರೆ, ಕರ್ಫ್ಯೂನಿಂದಾಗಿ 14 ದಿನ ಕೆಲಸವಿಲ್ಲವೆಂದು ಮಾಲೀಕರು ಹೇಳುತ್ತಿದ್ದಾರೆ. ಹೀಗಾಗಿ, ಊರಿಗೆ ಹೊರಟಿದ್ದೇವೆ’ ಎಂದು ಯಾದಗಿರಿಯ ಲಕ್ಷ್ಮಣ ಹೇಳಿದರು.

‘ಕೊರೊನಾಗೆ ಹೆದರಲಿಲ್ಲ. ಆದರೆ, ಈಗ ಕರ್ಫ್ಯೂ ನಮ್ಮ ಕೆಲಸ ಕಿತ್ತುಕೊಂಡಿದೆ. ಇದರಿಂದ ಹೆದರಿ ಊರು ತೊರೆಯುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘ತಪ್ಪು ಮುಚ್ಚಿಕೊಳ್ಳಲು ಕರ್ಫ್ಯೂ; ಬಡವರ ಶಾಪ ತಟ್ಟಲಿದೆ’
‘ಮೊದಲೇ ಎಚ್ಚೆತ್ತುಕೊಳ್ಳಬೇಕಾದ ಸರ್ಕಾರದ ಮುಖ್ಯ ಮಂತ್ರಿ ಹಾಗೂ ಸಚಿವರು, ಚುನಾವಣೆ ಪ್ರಚಾರದಲ್ಲೇ ಕಾಲಹರಣ ಮಾಡಿದರು. ಇದರಿಂದಲೇ ಸೋಂಕು ಹೆಚ್ಚಾ ಯಿತು. ತಮ್ಮ ತಪ್ಪು ಮುಚ್ಚಿಕೊಳ್ಳಲು ಇದೀಗ ಕರ್ಫ್ಯೂ ಜಾರಿ ಮಾಡಿದ್ದು, ಅವರಿಗೆ ನಮ್ಮಂಥ ಬಡವರ ಶಾಪ ತಟ್ಟುತ್ತದೆ’ ಎಂದು ಬೀದರ್‌ನ ರಾಮಪ್ಪ ಕಣ್ಣೀರಿಟ್ಟರು.

‘ಊರಿನಲ್ಲಿ ಜಮೀನು ಇಲ್ಲದಿದ್ದರಿಂದ ದುಡಿಯಲು ಬೆಂಗಳೂರಿಗೆ ಬಂದಿದ್ದೆ. ಈಗ ಕೆಲಸವೇ ಇಲ್ಲ. ಪತ್ನಿಹಾಗೂ ಇಬ್ಬರು ಮಕ್ಕಳನ್ನು ಸಾಕುವುದು ಹೇಗೆ ಎಂಬ ಚಿಂತೆ ಶುರುವಾಗಿದೆ. ವಾಪಸು ಊರಿಗೆ ಹೋಗಿ ಅಲ್ಲಿಯೇ ಕೂಲಿ ಕೆಲಸ ಮಾಡುವೆ’ ಎಂದೂ ಅವರುಹೇಳಿದರು.

‘ಸಾಮಾನ್ಯ ಜನರ ಜೀವಕ್ಕೆ ಬೆಲೆ ಇಲ್ಲ’
‘ಅನ್ನಕ್ಕಾಗಿ ನಗರಕ್ಕೆ ಬಂದಿದ್ದೆ. ಕೊರೊನಾದಿಂದಾಗಿ ಕೆಲಸ ಹೋಗಿದ್ದು, ಊರಿನತ್ತ ತೆರಳುತ್ತಿದ್ದೇವೆ’ ಎಂದು ಬಳ್ಳಾರಿಯ ದೇವರಾಜ್ ಹೇಳಿದರು.

‘ಆಕ್ಸಿಜನ್ ಹಾಗೂ ಬೆಡ್‌ಗಾಗಿ ಜನ ಪರದಾಡುತ್ತಿದ್ದಾರೆ. ಮುಖ್ಯಮಂತ್ರಿ ಹಾಗೂ ಇತರೆ ದೊಡ್ಡ ವ್ಯಕ್ತಿಗಳು, ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬರುತ್ತಿದ್ದಾರೆ. ಇದನ್ನು ನೋಡಿದರೆ, ಸಾಮಾನ್ಯ ಜನರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT