ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಹಕಸ್ನೇಹಿ ಡಿಜಿಟಲ್ ಮೀಟರ್’

ಬೆಸ್ಕಾಂ: 2024ಕ್ಕೆ ಎಲೆಕ್ಟ್ರೊ ಮೀಟರ್‌ಗಳನ್ನು ಡಿಜಿಟಲ್ ಮೀಟರ್‌ಗೆ ಬದಲಿಸುವ ಕಾರ್ಯ ಪೂರ್ಣ
Last Updated 26 ಜುಲೈ 2022, 21:43 IST
ಅಕ್ಷರ ಗಾತ್ರ

ಬೆಂಗಳೂರು: ಬೆಸ್ಕಾಂನಿಂದ ಗ್ರಾಹಕರು ವಿದ್ಯುತ್ ಪ್ರಮಾಣದ ನಿಖರ ಮಾಹಿತಿ ತಿಳಿದುಕೊಳ್ಳಲು ಡಿಎಲ್ಎಂಎಸ್ ಸ್ಟ್ಯಾಟಿಕ್ (ಡಿವೈಸ್ ಲ್ಯಾಂಗ್ವೇಜ್ ಮೆಸೇಜ್ ಸ್ಪೆಸಿಫಿಕೇಷನ್) ಡಿಜಿಟಲ್ ಮೀಟರ್‌ ಅಳವಡಿಸಲಾಗುತ್ತಿದೆ.

ಬೆಂಗಳೂರು ಮೆಟ್ರೊಪಾಲಿಟನ್ ಪ್ರದೇಶದ ವ್ಯಾಪ್ತಿಯಲ್ಲಿ 17,68,000 ಎಲೆಕ್ಟ್ರೊ ಮೆಕ್ಯಾನಿಕಲ್ ಮೀಟರ್‌ಗಳನ್ನು ಡಿಎಲ್ಎಂಎಸ್ ಸ್ಟ್ಯಾಟಿಕ್ ಡಿಜಿಟಲ್ ಮೀಟರ್‌ಗೆ ಉಚಿತವಾಗಿ ಬದಲಾವಣೆ ಮಾಡುವ ಕಾರ್ಯ ಆರಂಭಗೊಂಡಿದೆ.

ರಾಜಾಜಿನಗರ, ರಾಜರಾಜೇಶ್ವರಿನಗರ, ಇಂದಿರಾನಗರ ಮತ್ತು ವೈಟ್‌ಫೀಲ್ಡ್‌ ವಿಭಾಗಗಳಲ್ಲಿ ಈಗಾಗಲೇ 16 ಸಾವಿರ ಸಿಂಗಲ್ ಫೇಸ್ ಮತ್ತು 3 ಫೇಸ್ ಡಿಜಿಟಲ್ ಮೀಟರ್‌ಗಳನ್ನು ಅಳವಡಿಸಲಾಗಿದೆ. ನಿತ್ಯ 700ರಿಂದ 900 ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ. ಬೆಸ್ಕಾಂನ ಒಂದು ವಿಭಾಗದಲ್ಲಿ ಮೀಟರ್ ಅಳವಡಿಕೆ ಕಾರ್ಯ ಪೂರ್ಣಗೊಂಡ ನಂತರವೇ ಇನ್ನೊಂದು ವಿಭಾಗದಲ್ಲಿ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. 2024ರ ವೇಳೆಗೆ ಎಲ್ಲ ಎಲೆಕ್ಟ್ರೊ ಮೀಟರ್‌ಗಳನ್ನು ಡಿಜಿಟಲ್ ಮೀಟರ್‌ಗೆ ಬದಲಿಸುವ ಕಾರ್ಯಪೂರ್ಣಗೊಳ್ಳಲಿದೆ ಎಂದು ಬೆಸ್ಕಾಂನ ಮಾಪಕ ಮತ್ತು ವಾಣಿಜ್ಯ ವಿಭಾಗದ ಪ್ರಧಾನ ವ್ಯವಸ್ಥಾಪಕ ಪಿ.ರಂಗಸ್ವಾಮಿ ತಿಳಿಸಿದ್ದಾರೆ.

ಡಿಎಲ್ಎಂಎಸ್ ಸ್ಟ್ಯಾಟಿಕ್ ಮೀಟರ್ ಗ್ರಾಹಕಸ್ನೇಹಿಯಾಗಿದ್ದು, ಸಿಂಗಲ್ ಫೇಸ್ ಅಥವಾ 3 ಫೇಸ್ ಮೀಟರ್ ಅಳವಡಿಸಿಕೊಂಡಿರುವ ಗ್ರಾಹಕರು ವಿದ್ಯುತ್ ವೊಲ್ಟೇಜ್ ಮತ್ತು ಬಳಕೆ ಕುರಿತು ಮಾಹಿತಿ ಪಡೆಯಬಹುದಾಗಿದೆ. 10 ವರ್ಷಗಳ ಹಿಂದೆ ಅಳವಡಿಸಿರುವ ಎಲೆಕ್ಟ್ರೊ ಮೆಕ್ಯಾನಿಕಲ್ ಮೀಟರ್‌ಗಳನ್ನು ಬದಲಿಸಲಾಗುತ್ತಿದೆ
ಎಂದಿದ್ದಾರೆ.

ಗ್ರಾಹಕರು ತಾವು ಎರಡು ವರ್ಷ ಬಳಸಿದ ವಿದ್ಯುತ್ ಪ್ರಮಾಣದ ವಿವರಗಳನ್ನು ಬೆಸ್ಕಾಂ ಕಚೇರಿಯಿಂದ ಪಡೆದು, ಅದನ್ನು ವಿದ್ಯುತ್ ಬಿಲ್ ಜೊತೆ ತುಲನೆ ಮಾಡಬಹುದಾದ ಅನುಕೂಲ ಡಿಜಿಟಲ್ ಮೀಟರ್‌ನಿಂದ ದೊರೆಯಲಿದೆ. ಬೆಂಗಳೂರು ನಗರದ ನಂತರ ಬೆಂಗಳೂರು ಗ್ರಾಮಾಂತರ ಪ್ರದೇಶ ಮತ್ತು ಚಿತ್ರದುರ್ಗ-ದಾವಣಗೆರೆ ಪ್ರದೇಶ ವಲಯದಲ್ಲಿ ಡಿಜಿಟಲ್ ಮೀಟರ್ ಅಳವಡಿಸಲಾಗುವುದು ಎಂದರು.

ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯದ ಗುತ್ತಿಗೆಯನ್ನು ಎರಡು ಖಾಸಗಿ ಕಂಪನಿಗಳಿಗೆ ನೀಡಲಾಗಿದ್ದು, ಎಲ್ಲಾ ವಿಭಾಗಳಲ್ಲಿ ಹಂತ ಹಂತವಾಗಿ ಅಳವಡಿಸಲಾಗುವುದು. ಈ ಯೋಜನೆಯ ಒಟ್ಟು ಮೊತ್ತ ₹285.16 ಕೋಟಿ. ಸಿಂಗಲ್ ಫೇಸ್ ಡಿಜಿಟಲ್ ಮೀಟರ್‌ಗೆ ₹933 ಮತ್ತು 3 ಫೇಸ್ ಮೀಟರ್‌ಗೆ ₹2,300 ವೆಚ್ಚವಾಗಲಿದ್ದು, ಅದನ್ನು ಬೆಸ್ಕಾಂ
ಭರಿಸಲಿದೆ.

ಮಾರಾಟ ಮಳಿಗೆ: ಹೊಸ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರಿಗೆ ಅನುಕುಲವಾಗಲು ಬೆಸ್ಕಾಂನ ಎಲ್ಲಾ ವಿಭಾಗಗಳಲ್ಲಿ ಸಿಂಗಲ್ ಫೇಸ್ ಮತ್ತು 3 ಫೇಸ್ ಡಿಜಿಟಲ್ ಮೀಟರ್‌ಗಳ ಮಾರಾಟ ಮಳಿಗೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT