ಕೆಐಎಎಲ್ ಕೋಟೆ ದಾಟದ ಸ್ಮಗ್ಲರ್‌ಗಳು!

7
ಅಕ್ರಮವಾಗಿ ಚಿನ್ನ ಸಾಗಾಟ: ಪ‍್ರತ್ಯೇಕ ಪ್ರಕರಣಗಳಲ್ಲಿ ಐದು ಮಂದಿ ಬಂಧನ

ಕೆಐಎಎಲ್ ಕೋಟೆ ದಾಟದ ಸ್ಮಗ್ಲರ್‌ಗಳು!

Published:
Updated:

ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಐದು ಮಂದಿಯನ್ನು ಬಂಧಿಸಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಕಸ್ಟಮ್ಸ್ ಅಧಿಕಾರಿಗಳು 1.1 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

‘ಹಸ್ಮಿ ಮುಬಾರಕ್ ‌ನಿಸಾರ್ ಎಂಬಾತ ಜೂನ್ 25ರಂದು ಕೊಲಂಬೋದಿಂದ ‘ಯುಎಲ್–173’ ವಿಮಾನದಲ್ಲಿ ನಗರಕ್ಕೆ ಬಂದಿದ್ದ. ಆತನ ವರ್ತನೆಯಿಂದ ಅನುಮಾನಗೊಂಡ ಸಿಬ್ಬಂದಿ, ಕೊಠಡಿಗೆ ಕರೆದೊಯ್ದು ತಪಾಸಣೆ ನಡೆಸಿದಾಗ ₹ 8.23 ಲಕ್ಷ ಮೌಲ್ಯದ 260 ಗ್ರಾಂ ಚಿನ್ನ ಪತ್ತೆಯಾಯಿತು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಚಿನ್ನದ ಗಟ್ಟಿಗಳನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿದ್ದ ಆತ, ಅದನ್ನು ಗುದದ್ವಾರದಲ್ಲಿ ಇಟ್ಟುಕೊಂಡು ಬಂದಿದ್ದ. ಆರೋಪಿ ವಿರುದ್ಧ ಕೆಐಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.’

‘ಜೂನ್ 26ರಂದು ದುಬೈನಿಂದ ‘ಇಕೆ–568’ ವಿಮಾನದಲ್ಲಿ ಬಂದಿದ್ದ ಆಂಧ್ರಪ್ರದೇಶದ ಶೇಖ್ ಅಬ್ದುಲ್ ಮುನಾಫ್‌ ಎಂಬಾತನ ಬ್ಯಾಗ್‌ನಲ್ಲೂ 290 ಗ್ರಾಂನ ಚಿನ್ನದ ಗಟ್ಟಿಗಳು ಸಿಕ್ಕವು. ಅದೇ ವಿಮಾನದಲ್ಲಿದ್ದ ಇಸ್ಮಾಯಿಲ್ ಜಬೀವುಲ್ಲಾ ಶೇಖ್, ತನ್ನ ಪ್ಯಾಂಟನ್ನು ಮಂಡಿವರೆಗೆ ಮಡಚಿಕೊಂಡು, ಅದರಲ್ಲಿ 175 ಗ್ರಾಂನ ಆಭರಣ ಅಡಗಿಸಿಟ್ಟುಕೊಂಡಿದ್ದ. ಶೇಖ್ ಹಸನ್ ಬಾಷಾ ಎಂಬ ಇನ್ನೊಬ್ಬ ಪ್ರಯಾಣಿಕ ಪ್ಯಾಂಟಿನ ಒಳಭಾಗದ ಜೇಬಿನಲ್ಲಿ 233 ಗ್ರಾಂ ಗಟ್ಟಿಗಳನ್ನು ಇಟ್ಟುಕೊಂಡಿದ್ದ.’

‘ಅದೇ ದಿನ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ, ಗುದದ್ವಾರದಲ್ಲಿ ₹ 5.71 ಲಕ್ಷ ಮೌಲ್ಯದ ಚಿನ್ನ ಇಟ್ಟುಕೊಂಡು ಬಂದಿದ್ದ ಬಂದೂಲ ವಿಜೇವೀರ ಎಂಬಾತನನ್ನು ವಶಕ್ಕೆ ಪಡೆದೆವು’ ಎಂದು ಮಾಹಿತಿ ನೀಡಿದರು.
*

ಪ್ರತಿಯೊಬ್ಬರ ಮೇಲೂ ನಿಗಾ

‘ಸ್ಮಗ್ಲರ್‌ಗಳು ಹೊಸ ಹೊಸ ತಂತ್ರಗಳ ಮೂಲಕ ಚಿನ್ನ ಹಾಗೂ ಮಾದಕವಸ್ತುಗಳನ್ನು ಸಾಗಣೆ ಮಾಡುತ್ತಿದ್ದಾರೆ. ವಿಶೇಷ ಕಾರ್ಯಾಚರಣೆಗಳ ಮೂಲಕ ನಾವು ಅವರನ್ನು ಪತ್ತೆ ಮಾಡುತ್ತಲೇ ಇದ್ದೇವೆ. ಪ್ರತಿ ಪ್ರಯಾಣಿಕರ ಮೇಲೂ ನಿಗಾ ಇಟ್ಟಿರುತ್ತೇವೆ’ ಎಂದು ಕಸ್ಟಮ್ಸ್ ವಿಭಾಗದ ಹೆಚ್ಚುವರಿ ಕಮಿಷನರ್ ಹರ್ಷವರ್ಧನ್ ಉಮ್ರೆ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !