ಬುಧವಾರ, ಜನವರಿ 29, 2020
30 °C
ನವೆಂಬರ್‌ನಲ್ಲಿ 40ಕ್ಕೂ ಹೆಚ್ಚು ಪ್ರಕರಣ * ಸೈಬರ್ ವಂಚಕರ ಹೊಸ ತಂತ್ರ

‘ಕ್ಯೂಆರ್‌ ಕೋಡ್‌’ ಕಳುಹಿಸಿ ಬ್ಯಾಂಕ್ ಖಾತೆಗಳಿಗೆ ಕನ್ನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್‌ಬಿಐ, ಬ್ಯಾಂಕ್ ಹಾಗೂ ಆಧಾರ್ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳ ಸೋಗಿನಲ್ಲಿ ಕರೆ ಮಾಡಿ ವಂಚಿಸುತ್ತಿದ್ದ ಸೈಬರ್ ವಂಚಕರು, ಇದೀಗ ‘ಕ್ಯೂಆರ್‌ ಕೋಡ್‌’ ಮೂಲಕ ಸಾರ್ವಜನಿಕರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುವ ಹೊಸ ತಂತ್ರ ಕಂಡುಕೊಂಡಿದ್ದಾರೆ.

ಓಎಲ್‌ಎಕ್ಸ್‌, ಕ್ವಿಕ್ಕರ್, ಫೇಸ್‌ಬುಕ್‌ ಮಾರ್ಕೇಟ್‌ಪ್ಲೇಸ್ ಹಾಗೂ ಇತರೆ ಜಾಲತಾಣಗಳಲ್ಲಿ ಜಾಹೀರಾತು ನೀಡುವ ಸಾರ್ವಜನಿಕರನ್ನು ಸಂಪರ್ಕಿಸುತ್ತಿರುವ ವಂಚಕರು, ವಸ್ತುಗಳ ಖರೀದಿ ನೆಪದಲ್ಲಿ ಖಾತೆಯಲ್ಲಿದ್ದ ಹಣವನ್ನೆಲ್ಲ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸುತ್ತಿದ್ದಾರೆ.

ಇಂಥ ವಂಚನೆಗಳ ಬಗ್ಗೆ ನಗರದ ಹಲವು ಠಾಣೆಗಳಲ್ಲಿ ನವೆಂಬರ್‌ನಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪ್ರತಿಯೊಬ್ಬ ದೂರುದಾರರು, ಸೈಬರ್ ವಂಚಕರು ಕಳುಹಿಸಿದ್ದ ‘ಕ್ಯೂಆರ್‌ ಕೋಡ್’ ಸ್ಕ್ಯಾನ್ ಮಾಡಿ, ಗೌಪ್ಯ ಸಂಖ್ಯೆ ನಮೂದಿಸಿ ಹಣ ಕಳೆದುಕೊಂಡಿದ್ದಾರೆ.

‘ಅಪರಿಚಿತರಿಗೆ ಬ್ಯಾಂಕ್ ಖಾತೆ ಮಾಹಿತಿ ಹಾಗೂ ಒಟಿಪಿ (ಒನ್‌ ಟೈಂ ಪಾಸ್‌ವರ್ಡ್‌) ನೀಡದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಅಂಥ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದೆ. ಯುಪಿಐ, ಪೇಟಿಎಂ, ಗೂಗಲ್ ಪೇ, ಮಿ ಪೇ ಸೇರಿದಂತೆ ವಿವಿಧ ವ್ಯಾಲೆಟ್‌ಗಳ ಕ್ಯೂಆರ್‌ ಕೋಡ್‌ ವಂಚನೆ ಪ್ರಕರಣಗಳು ಇದೀಗ ಹೆಚ್ಚಾಗಿವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ದೂರದಾರರ ಜೊತೆ ಆತ್ಮಿಯವಾಗಿ ಮಾತನಾಡಿದ್ದ ವಂಚಕರು, ವಸ್ತುಗಳ ಖರೀದಿಗೆ ಹಣ ವರ್ಗಾವಣೆ ಮಾಡಿರುವುದಾಗಿ ಹೇಳಿ ಕ್ಯೂಆರ್‌ ಕೋಡ್‌ ಕಳುಹಿಸಿದ್ದರು. ಅದನ್ನು ಸ್ಕ್ಯಾನ್‌ ಮಾಡಿದರೆ ಹಣ ಬರುತ್ತದೆಂದು ಹೇಳಿದ್ದರು. ಅದನ್ನು ನಂಬಿದ್ದ ದೂರುದಾರರು ಕೋಡ್‌ ಸ್ಕ್ಯಾನ್ ಮಾಡಿ, ತನ್ನ ಖಾತೆಯ ಗೌಪ್ಯ ಸಂಖ್ಯೆ ನಮೂದಿಸುತ್ತಿದ್ದಂತೆ ಖಾತೆಯಲ್ಲಿದ್ದ ಹಣವೆಲ್ಲ ವಂಚಕರ ಪಾಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಟೇಬಲ್‌ ಮಾರಾಟಕ್ಕಿಟ್ಟು ₹1.11 ಲಕ್ಷ ಹೋಯ್ತು: ಅಶೋಕನಗರ ಠಾಣೆಗೆ ದೂರು ನೀಡಿರುವ ಯುವತಿಯೊಬ್ಬರು, ‘ಟೇಬಲ್ ಮಾರಾಟದ ಬಗ್ಗೆ ಓಎಲ್‌ಎಕ್ಸ್‌ ಜಾಲ ತಾಣದಲ್ಲಿ ಜಾಹೀರಾತು ನೀಡಿದ್ದೆ. ಸೈನಿಕನೆಂದು ಹೇಳಿಕೊಂಡು ನ. 23ರಂದು ಕರೆ ಮಾಡಿದ್ದ ಅಪರಿಚಿತನೊಬ್ಬ ಟೇಬಲ್‌ ಖರೀದಿಸುವುದಾಗಿ ಹೇಳಿದ್ದ’ ಎಂದು ತಿಳಿಸಿದ್ದಾರೆ.

‘ಮರುದಿನ ಕರೆ ಮಾಡಿದ್ದ ಆರೋಪಿ, ನನ್ನ ಖಾತೆಗೆ ಹಣ ವರ್ಗಾವಣೆ ಮಾಡಿರುವುದಾಗಿ ಹೇಳಿ ಕ್ಯೂಆರ್‌ ಕೋಡ್‌ ಕಳುಹಿಸಿದ್ದ. ಗೂಗಲ್‌ ಪೇ ವ್ಯಾಲೆಟ್‌ನಲ್ಲಿ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ಹಂತ ಹಂತವಾಗಿ ₹41,000 ಕಡಿತವಾಯಿತು. ಗಾಬರಿಗೊಂಡು ಅದೇ ಕೋಡ್‌ನ್ನು ತಂದೆಗೆ ಕಳುಹಿಸಿದ್ದ. ಅವರು ಸಹ ಕೋಡ್ ಸ್ಕ್ಯಾನ್‌ ಮಾಡಿದ್ದರು. ಅವರ ಖಾತೆಯಿಂದಲೂ ₹ 70,000 ಕಡಿತವಾಗಿದೆ’ ಎಂದು ಯುವತಿ ಹೇಳಿದ್ದಾರೆ.

₹ 80 ಸಾವಿರ ಕಳೆದುಕೊಂಡ ಹಾಸಿಗೆ ಮಾಲೀಕ; ಟಿ.ಸಿ.ಪಾಳ್ಯದ ಸಿ.ಎನ್.ಭರತ್‌ ಎಂಬುವರು ಹಾಸಿಗೆ ಮಾರಾಟ ಮಾಡಲು ಫೇಸ್‌ಬುಕ್‌ ಮಾರ್ಕೆಟ್‌ಪ್ಲೇಸ್‌ನಲ್ಲಿ ಜಾಹೀರಾತು ನೀಡಿದ್ದರು. ಅದನ್ನು ಖರೀದಿಸಲು ಕರೆ ಮಾಡಿದ್ದ ವ್ಯಕ್ತಿ, ಕ್ಯೂಆರ್ ಕೋಡ್‌ ಮೂಲಕವೇ ₹80 ಸಾವಿರ ಪಡೆದುಕೊಂಡು ವಂಚಿಸಿದ್ದಾನೆ.

‘ರಾಹುಲ್ ಶರ್ಮಾ ಹೆಸರಿನಿಂದ ಪರಿಚಿತನಾಗಿದ್ದ ಆರೋಪಿ, ಬೆಂಗಳೂರಿನಲ್ಲಿರುವ ಹೊಸ ಮನೆಗೆ ಹಾಸಿಗೆ ಬೇಕೆಂದು ಕೇಳಿದ್ದ. ₹50,000 ಬೆಲೆಯ ಹಾಸಿಗೆಗೆ ₹45,000 ಕೊಡುವುದಾಗಿ ಹೇಳಿದ್ದ. ಅದಕ್ಕೆ ಒಪ್ಪುತ್ತಿದ್ದಂತೆ, ನನ್ನ ಖಾತೆಗೆ ಹಣ ವರ್ಗಾವಣೆ ಮಾಡಿರುವುದಾಗಿ ಹೇಳಿ ಕ್ಯೂಆರ್‌ ಕೋಡ್ ಕಳುಹಿಸಿ ಸ್ಕ್ಯಾನ್ ಮಾಡುವಂತೆ ಸೂಚಿಸಿದ್ದ. ಸ್ಕ್ಯಾನ್ ಮಾಡಿ, ಗೌಪ್ಯ ಸಂಖ್ಯೆಯನ್ನು ನಮೂದಿಸುತ್ತಿದ್ದಂತೆ ಹಣ ಕಡಿತವಾಯಿತು. ಈ ಬಗ್ಗೆ ಹನುಮಂತನಗರ ಠಾಣೆಗೆ ದೂರು ನೀಡಿದ್ದೇನೆ’ ಎಂದು ಭರತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅಶೋಕನಗರದ ವಿಕಾಸ್ ಪಟೇಲ್ ಎಂಬುವರಿಗೂ ಕ್ಯೂಆರ್‌ ಕೋಡ್‌ ಕಳುಹಿಸಿ ₹ 24,899 ವಂಚಿಸಲಾಗಿದೆ.

‘ಉತ್ತರ ಪ್ರದೇಶದ ವಂಚಕರ ಕೃತ್ಯ’ 

‘ದೂರುದಾರರಿಗೆ ಕರೆ ಮಾಡಿದ್ದ ಆರೋಪಿಗಳು ಹಿಂದಿಯಲ್ಲಿ ಮಾತನಾಡಿ ವಂಚಿಸಿದ್ದಾರೆ. ಉತ್ತರ ಭಾರತದ ಕೆಲ ವಂಚಕರೇ ಈ ಕೃತ್ಯ ಎಸಗಿರುವ ಅನುಮಾನವಿದೆ’ ಎಂದು ದೂರುದಾರರೊಬ್ಬರು ಹೇಳಿದರು.

‘ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿ ರಜೆ ಇರುವ ಶನಿವಾರ ಹಾಗೂ ಭಾನುವಾರವೇ ಆರೋಪಿಗಳು ಕೃತ್ಯ ಎಸಗಿದ್ದಾರೆ. ದೂರುದಾರರ ಖಾತೆಯಿಂದ ಪಡೆದ ಹಣವನ್ನು 10ಕ್ಕೂ ಹೆಚ್ಚು ಖಾತೆಗಳಿಗೆ ವರ್ಗಾಯಿಸಿಕೊಂಡು ಡ್ರಾ ಮಾಡಿಕೊಳ್ಳಲಾಗಿದೆ.’

‘ಉತ್ತರ ಪ್ರದೇಶದ ಗೋವರ್ಧನ್‌ ನಗರದ ಬ್ಯಾಂಕೊಂದರ ಖಾತೆಯಿಂದ ಕೊನೆಯದಾಗಿ ಹಣ ಡ್ರಾ ಆಗಿದೆ. ಈ ಖಾತೆಗೆ ನಿತ್ಯವೂ ಲಕ್ಷಾಂತರ ರೂಪಾಯಿ ಜಮೆ ಆಗುತ್ತಿದ್ದು, ಅಷ್ಟೇ ವೇಗವಾಗಿ ಡ್ರಾ ಸಹ ಆಗುತ್ತಿದೆ. ಆ ಖಾತೆ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಬೇಕು’ ಎಂದು ದೂರುದಾರ ಒತ್ತಾಯಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು