ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌: ಬಿಜೆಪಿ ನಡುವೆ ನೇರ ಹಣಾಹಣಿ

ಉಪಚುನಾವಣೆಯ ಫಲಿತಾಂಶ ಮರುಕಳಿಸುವುದೇ?
Last Updated 4 ಮೇ 2018, 7:10 IST
ಅಕ್ಷರ ಗಾತ್ರ

ಬಳ್ಳಾರಿ: ಗ್ರಾಮೀಣ ಕ್ಷೇತ್ರದಲ್ಲಿ 2014ರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದ ಎನ್‌.ವೈ.ಗೋಪಾಲಕೃಷ್ಣ ಕೂಡ್ಲಿಗಿಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಬಳಿಕ, ‘ಗ್ರಾಮೀಣ ಕ್ಷೇತ್ರದಲ್ಲಿ ಸರ್ಕಾರ ಅನುದಾನವನ್ನೇ ಬಿಡುಗಡೆ ಮಾಡಲಿಲ್ಲ’ ಎಂದು ದೂರಿದ್ದಾರೆ!

ಕೂಡ್ಲಿಗಿಯಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿ, ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಬಿ.ನಾಗೇಂದ್ರ, ಈಗ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಅವರು, ‘ಸರ್ಕಾರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದೆ’ ಎನ್ನುತ್ತಿದ್ದಾರೆ!

ಇಂಥ ಪರಿಸ್ಥಿತಿಯಲ್ಲಿ, ಬಿಜೆಪಿಯ ಎಸ್‌.ಪಕ್ಕೀರಪ್ಪ ತಮ್ಮ ಗೆಲುವಿನ ದಾರಿ ಎಲ್ಲಿದೆ ಎಂದು ಹುಡುಕುತ್ತಿದ್ದಾರೆ. ಚುನಾವಣೆ ಹಾಗೂ ಟಿಕೆಟ್‌ ಘೋಷಣೆಗೆ ಮುನ್ನವೇ ಸಂಸದ ಬಿ.ಶ್ರೀರಾಮುಲು, ಪಕ್ಕೀರಪ್ಪ ಅವರನ್ನು ‘ಕ್ಷೇತ್ರದ ನಿಯೋಜಿತ ಅಭ್ಯರ್ಥಿ’ ಎಂದು ಘೋಷಿಸಿ ಪ್ರಚಾರವನ್ನೂ ಆರಂಭಿಸಿದ್ದರು.

ಈ ವಿರೋಧಾಭಾಸದ ನಡುವೆಯೇ, ಜೆಡಿಎಸ್‌ನ ಮೀನಳ್ಳಿ ತಾಯಣ್ಣ ತಾವು ಸ್ಪರ್ಧಿಸದೇ ತಮ್ಮ ಮಗ ಡಿ.ರಮೇಶ್‌ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಅವರಲ್ಲಿ ಉತ್ಸಾಹ ಕುಗ್ಗಿದೆ.

ಜೆಡಿಎಸ್‌ ಅಭ್ಯರ್ಥಿಯಂತೆ ಕ್ಷೇತ್ರದ ಮೀನಳ್ಳಿಯವರೇ ಆಗಿರುವ ಪಕ್ಕೀರಪ್ಪ ತಮ್ಮೊಂದಿಗೆ ಮಾಜಿ ಸಂಸದ ಎಂಬ ಹೆಚ್ಚುವರಿ ಹಣೆಪಟ್ಟಿಯನ್ನು ಹೊಂದಿದ್ದಾರೆ. ನಾಗೇಂದ್ರಗೆ ಎರಡು ಬಾರಿ ಶಾಸಕರಾದ ಅನುಭವವಿದೆ.

ಎಲ್ಲರೂ ಹೊಸಬರೇ: ರಮೇಶ್ ಕಣದಲ್ಲಿ ಹೊಸಮುಖ ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ ನಾಗೇಂದ್ರ ಮತ್ತು ಪಕ್ಕೀರಪ್ಪ ಕೂಡ ಮೊದಲ ಬಾರಿಗೆ ಸ್ಪರ್ಧಿಸಿರುವುದರಿಂದ ಕ್ಷೇತ್ರಕ್ಕೆ ಅವರೂ ಹೊಸಬರೇ ಆಗಿದ್ದಾರೆ.

ಹಣಬಲದ ರಾಜಕೀಯ: ಕ್ಷೇತ್ರದಲ್ಲಿ ಎಲ್ಲ ವಿಚಾರಗಳನ್ನೂ ಮೀರಿ, ಹಣಬಲವೇ ಫಲಿತಾಂಶವನ್ನು ನಿರ್ಧರಿಸುತ್ತದೆಯೇ ಎಂಬ ಚರ್ಚೆಯೂ ನಡೆದಿದೆ.

‘ನಾಗೇಂದ್ರ ಅವರು ಕಣಕ್ಕೆ ಬರದೇ ಇದ್ದಿದ್ದರೆ ತಾಯಣ್ಣ ಸ್ಪರ್ಧಿಸುತ್ತಿದ್ದರು. ಆದರೆ ನಾಗೇಂದ್ರರ ಹಣಬಲದ ಮುಂದೆ ಅವರ ಪ್ರಭಾವ ನಡೆಯದು ಎಂಬ ಕಾರಣದಿಂದ ಹಾಗೂ ಪ್ರಬಲ ಸ್ಪರ್ಧಿ ಪಕ್ಷಕ್ಕೆ ಸಿಗದೆ ಇದ್ದುದರಿಂದ ತಾಯಣ್ಣ ಮಗ ರಮೇಶ್‌ ಅವರನ್ನೇ ಕಣಕ್ಕೆ ಇಳಿಸಬೇಕಾಯಿತು. ಪಕ್ಷವು ಈಗ ಪ್ರಬಲ ಪೈಪೋಟಿ ನೀಡುವ ಪರಿಸ್ಥಿತಿಯಲ್ಲಿ ಇಲ್ಲ ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಪ್ಪ ಹೇಳಿಕೆ ನೀಡಿದ್ದರು.

ನೇರ ಹಣಾಹಣಿ: ಈ ಕಾರಣಕ್ಕಾಗಿಯೇ, ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ. ಹಿಂದಿನ ಉಪಚುನಾವಣೆಯಲ್ಲಿ ಬಿಜೆಪಿಯ ಬಿ.ಶ್ರೀರಾಮುಲು ವರ್ಚಸ್ಸು ಪಕ್ಷಕ್ಕೆ ಗೆಲುವನ್ನು ತಂದುಕೊಟ್ಟಿರಲಿಲ್ಲ. ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅವರು ಕ್ಷೇತ್ರದ ಕಡೆಗೆ ಹೆಚ್ಚು ಗಮನವನ್ನೂ ಹರಿಸಲು ಸಾಧ್ಯವಾಗಿಲ್ಲ.

ಈ ಪರಿಸ್ಥಿತಿಯಲ್ಲಿ, ಕಾಂಗ್ರೆಸ್‌ ಪಕ್ಷದ ವರ್ಚಸ್ಸಿನೊಂದಿಗೆ ವೈಯಕ್ತಿಕ ವರ್ಚಸ್ಸು ಗಟ್ಟಿಯಾಗಿರುವ ನಾಗೇಂದ್ರರ ಎದುರು, ಪಕ್ಷದ ವರ್ಚಸ್ಸನ್ನಷ್ಟೇ ನೆಚ್ಚಿಕೊಂಡಿರುವ ಪಕ್ಕೀರಪ್ಪ ಗೆಲ್ಲುತ್ತಾರೆಯೇ ಎಂಬ ಪ್ರಶ್ನೆ ಕ್ಷೇತ್ರದಲ್ಲಿ ಹರಿದಾಡುತ್ತಿದೆ.

ರೆಡ್ಡಿ ಪಾಳೆಯದ ನೆನಪು!

ಬಳ್ಳಾರಿ: ಈಗ ಎದುರಾಳಿಗಳಾಗಿರುವ ಬಿ.ನಾಗೇಂದ್ರ ಮತ್ತು ಪಕ್ಕೀರಪ್ಪ ಹಿಂದೆ ಜಿ.ಜನಾರ್ದನರೆಡ್ಡಿ ಅವರ ಜೊತೆಗೇ ಇದ್ದವರು. 2008ರಲ್ಲಿ ಗ್ರಾಮೀಣ ಕ್ಷೇತ್ರದಲ್ಲೇ ಸ್ಪರ್ಧಿಸುವ ಆಸೆ ಇದ್ದರೂ, ನಾಗೇಂದ್ರ ಕೂಡ್ಲಿಗಿಗೆ ವಲಸೆ ಹೋಗಿದ್ದರು, ಎರಡು ಬಾರಿ ಅಲ್ಲಿಯೇ ಆಯ್ಕೆಯಾಗಿದ್ದರು. ಈಗ ವಾಪಸು ಬಂದು ನೆಚ್ಚಿನ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಅವರ ಪಕ್ಷ ಬದಲಾಗಿದೆ. ಪಕ್ಕೀರಪ್ಪ ರಾಯಚೂರು ಸಂಸದರಾದ ಬಳಿಕ ಈ ಕ್ಷೇತ್ರದ ಕಡೆ ಬಂದಿರಲಿಲ್ಲ.

ಪಕ್ಕೀರಪ್ಪ ಹೆಸರಲ್ಲಿ ಇಬ್ಬರು ಸ್ಪರ್ಧಿಗಳು!

ಬಳ್ಳಾರಿ: ಕಣದಲ್ಲಿ ಬಿಜೆಪಿಯ ಎಸ್‌.ಪಕ್ಕೀರಪ್ಪ ಅವರೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಎಚ್‌.ಪಕ್ಕೀರಪ್ಪ ಎಂಬುವವರೂ ಇದ್ದಾರೆ. ಹೆಸರಿನಲ್ಲಿರುವ ಸಾಮ್ಯತೆಯು ಬಿಜೆಪಿ ಅಭ್ಯರ್ಥಿಯ ಮತಗಳನ್ನು ಪಕ್ಷೇತರ ಅಭ್ಯರ್ಥಿ ಸೆಳೆಯುವ ಸಾಧ್ಯತೆಗೆ ದಾರಿ ಮಾಡಿದೆ.

ಅಭಿವೃದ್ಧಿ ಎಲ್ಲಿ ಸ್ವಾಮಿ?

ಬಳ್ಳಾರಿ: ‘ನಮ್ಮೂರಿನ ಕೆರೆಯೊಂದನ್ನು ಅಭಿವೃದ್ಧಿ ಮಾಡಿದ್ದರೆ ನಮಗೆ ನೀರಿನ ಕೊರತೆ ಇರುತ್ತಿರಲಿಲ್ಲ.’ ಎಂದು ಕ್ಷೇತ್ರದ ಕೊಳಗಲ್ಲು ಗ್ರಾಮದ ಯರ್ರಿಸ್ವಾಮಿ ಹೇಳಿದರು.

ಬಳ್ಳಾರಿ ನಗರದಿಂದ 9 ಕಿ.ಮೀ ದೂರದಲ್ಲಿರುವ ಗ್ರಾಮಕ್ಕೆ ’ಪ್ರಜಾವಾಣಿ’ ಭೇಟಿ ನೀಡಿದ ಸಂದರ್ಭದಲ್ಲಿ, ಹಲವರು ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕದ ಕಡೆಗೆ ನಡೆದುಹೋಗುತ್ತಿದ್ದರು. ‘ಏಕೆಂದರೆ ನಮ್ಮ ಹಳ್ಳಿಯಲ್ಲಿರುವ ಪಂಚಾಯಿತಿ ಘಟಕದಲ್ಲಿ ನೀರು ರುಚಿ ಇಲ್ಲ’ ಎಂದು ಅವರು ಗೊಣಗಿದರು.

‘ನಾವು ಶಾಸಕರ ಮುಖವನ್ನೇ ನೋಡಲಿಲ್ಲ. ಅವರ ಹೆಸರನ್ನು ಹೇಳಿ, ನಮ್ಮೂರಿನಲ್ಲಿ ಹಲವರಿಗೆ ಗೊತ್ತೇ ಇಲ್ಲ’ ಎಂದು ನಕ್ಕರು. ‘ನಗರದಲ್ಲಿದ್ದರೂ ನಮ್ಮನ್ನು ಗ್ರಾಮೀಣ ಕ್ಷೇತ್ರಕ್ಕೆ ಸೇರಿಸಿದ್ದಾರೆ. ಶಾಸಕರು ನಮ್ಮ ಏರಿಯಾಗೆ ಬಂದಿದ್ದು ಬಹಳ ಕಡಿಮೆ. ಚುನಾವಣೆ ವೇಳೆ ಮಾತ್ರ ಪ್ರಚಾರ ಮೆರವಣಿಗೆಗೆ ಕೌಲ್‌ಬಜಾರೇ ಬೇಕು’ ಎಂದು ನಗರದ ಕೌಲ್‌ಬಜಾರ್‌ ನಿವಾಸಿ ರಿಯಾಜ್‌ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT