ಸೋಮವಾರ, ಜನವರಿ 25, 2021
16 °C

ರೈತರಿಗೆ ಸಂಕಷ್ಟ ತಂದ ಚಂಡಮಾರುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಬಸ್‌ಪೇಟೆ: ನಿ‌ವಾರ್‌ ಚಂಡಮಾರುತದಿಂದಾಗಿ ನೆಲಮಂಗಲ ತಾಲ್ಲೂಕಿನುದ್ದಕ್ಕೂ ಬುಧವಾರದಿಂದ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆ ಸುರಿಯುತ್ತಿದೆ. ಇದರಿಂದಾಗಿ ರೈತರು ಆತಂಕಕ್ಕೀಡಾಗಿದ್ದಾರೆ.

ಮೋಡ ಕವಿದ ವಾತಾವರಣದಿಂದ ಶೀತ ಗಾಳಿ ಬೀಸುತ್ತಿದ್ದು, ಜನರು ಚಳಿಯಿಂದ ನಡುಗುವಂತೆ ಆಗಿದೆ. ಕೊರೊನಾ ಮಧ್ಯೆ ಶೀತದ ಗಾಳಿಯಿಂದ ಆರೋಗ್ಯ ಏರುಪೇರಾದೀತು ಎಂದು ಜನರು ಮನೆಯೊಳಗೆ ಕೂರುವಂತಾಗಿದೆ.

ಬುಧವಾರ ಹಾಗೂ ಗುರುವಾರ ತೀರಾ ಹಗುರವಾಗಿದ್ದ ಮಳೆ ಶುಕ್ರವಾರ ಸಂಜೆ ತುಸು ವೇಗ ಪಡೆದುಕೊಂಡಿತು. ಬೆಳಿಗ್ಗೆ ಬಿಸಿಲು ಬಂದಿತ್ತಾದರೂ ಸಂಜೆ ಮಳೆ ಆರಂಭವಾಯಿತು.

‘ತಾಲ್ಲೂಕಿನುದ್ದಕ್ಕೂ ರೈತರು ಹಲವು ಎಕರೆ ಜಮೀನಿನಲ್ಲಿ ರಾಗಿ ಕೊಯಿಲು ಮಾಡಿದ್ದಾರೆ. ಅದನ್ನು ಮೆದೆಗೆ ಹಾಕಿಕೊಳ್ಳುವ ಮೊದಲೇ ಮಳೆ ಬಂದು ಸಮಸ್ಯೆ ಉಂಟಾಗಿದೆ. ಕಟಾವು ಆಗದ ನೂರಾರು ಎಕರೆ ರಾಗಿ ಬೆಳೆಯೂ ಮಳೆಯಿಂದ ನೆಲಕ್ಕೆ ಬಿದ್ದಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಹೋಗಿದೆ’ ಎಂದು ರೈತರು ಹೇಳಿದರು.

‘ಈ ಬಾರಿ ರಾಗಿ ಕೊಯಿಲಿಗೆ ಯಂತ್ರಗಳ ಬಳಕೆ ಹೆಚ್ಚಾಗಿರುವ ಕಾರಣ ಶೇ 20ರಷ್ಟು ರಾಗಿ ಕೊಯಿಲು ಆಗಿ ಮನೆ ಸೇರಿದೆ. ಆದರೆ, ರಾಗಿ ಹುಲ್ಲು ಇನ್ನು ಹಸಿಯಾಗಿದ್ದ ಕಾರಣದಿಂದ ಒಣಗಲು ಹೊಲದಲ್ಲೇ ಬಿಡಲಾಗಿತ್ತು.ಈಗ ಮಳೆ ಬಂದಿದ್ದರಿಂದಾಗಿ ಹುಲ್ಲು ಕೊಳೆಯುತ್ತಿದೆ. ಮಳೆಯಲ್ಲಿ ಒಮ್ಮೆ ನೆನೆದರೆ ಹಸುಗಳು ಈ ಹುಲ್ಲು ತಿನ್ನುವುದಿಲ್ಲ. ಹೀಗಾಗಿ ಹೊಲದಲ್ಲೇ ಕೊಳೆತು ಗೊಬ್ಬರ ಆಗಲು ಬಿಡುವಂತಾಗಿದೆ’ ಎಂದು ಶಿವಗಂಗೆಯ ರಾಗಿ ಬೆಳೆಗಾರ ಸಿದ್ದರಾಜು ಅಳಲು ತೋಡಿಕೊಂಡರು.

‘ಇಷ್ಟಕ್ಕೆ ಮಳೆ ನಿಂತರೆ ರಾಗಿ ಗುಣಮಟ್ಟ ಸರಿಯಾಗಿಲ್ಲದಿದ್ದರೂ ರಾಗಿ, ಹುಲ್ಲು ಮನೆ ಸೇರುವ ನಂಬಿಕೆ ಇದೆ. ಆದರೆ, ಮಳೆ ಇನ್ನೆರಡು ಮೂರು ದಿನಗಳ ಕಾಲ ಮುಂದುವರಿದರೆ ರಾಗಿ, ಹುಲ್ಲು ಯಾವುದೇ ಪ್ರಾಣಿಗಳು ತಿನ್ನಲು ಸಾಧ್ಯವಿಲ್ಲದಂತಾಗಿ ಕೊಯಿಲು ಮಾಡದೆ ಹೊಲದಲ್ಲೇ ಬಿಡುವ ಸ್ಥಿತಿ ಬರಲಿದೆ‘ ಎನ್ನುತ್ತಾರೆ ಸಾಲಹಟ್ಟಿಯ ಮಲ್ಲಯ್ಯ.

ರಾಗಿ ಅಷ್ಟೇ ಅಲ್ಲ, ತೊಗರಿ, ಅವರೆ ಬೆಳೆಗಳಲ್ಲೂ ಮಳೆಯಿಂದ ಇಳುವರಿ ಕಡಿಮೆಯಾಗುತ್ತದೆ ಅನ್ನುತ್ತಾರೆ ಹಲವು ರೈತರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು