ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುವಾಹಟಿಯಲ್ಲಿ ಅಂಬುವಾಸೀ ಮೇಳಾ

Last Updated 16 ಜೂನ್ 2018, 11:35 IST
ಅಕ್ಷರ ಗಾತ್ರ

ಮಾ ನವರಲ್ಲಿ ಸ್ತ್ರೀಯರ ಹೊರತಾಗಿ ನಾವು ಪೂಜಿಸುವ ದೇವಿಯೂ ಋತುಮತಿ ಆಗುತ್ತಾಳೆಂದರೆ ಆಶ್ಚರ್ಯಪಡುವಿರಾ? ಆದರೂ, ಇದು ನಿಜ. ದೇವಿಯ ಈ ಮಾಸಿಕ ಧರ್ಮದ ಕಾಲಾವಧಿಯ ಭಕ್ತರ ವೈಭವವನ್ನು ಕಾಣಬೇಕಾದರೆ ಜೂನ್ ತಿಂಗಳಲ್ಲಿ ಅಸ್ಸಾಂನ ಗುವಾಹಟಿ ನಗರಕ್ಕೆ ಪ್ರವಾಸ ಹೋಗಿ ಬನ್ನಿ. ಈ ನಗರದಿಂದ ಎಂಟು ಕಿ.ಮೀ. ದೂರದ ನೀಲಾಂಚಲ ಬೆಟ್ಟದಲ್ಲಿರುವ ಕಾಮಾಖ್ಯಾ ಶಕ್ತಿಮಾತೆಯೇ ವರ್ಷದಲ್ಲಿ ಮೂರು ದಿನ ರಜಸ್ವಲೆಯಾಗುವವಳು. ಈ ಉತ್ಸವವು ಅಂಬುವಾಸೀ ಮೇಳಾ (ಅಂಬುಬಾಚೀ ಮೇಳಾ, ಅಂಬುಬಾಸೀ ಉತ್ಸವ) ಎಂದು ಹೆಸರಾಗಿದ್ದ ಐವತ್ತೊಂದು ಶಕ್ತಿಪೀಠಗಳಲ್ಲಿ ಒಂದೆನಿಸಿಕೊಂಡ ದೇವಿ ಮಂದಿರದಲ್ಲಿ ನಡೆಯುತ್ತದೆ.

ಪೂರ್ವೋತ್ತರ ಭಾರತದ ಪ್ರವೇಶದ್ವಾರ ಎನ್ನುವ ಗುವಾಹಟಿಯು ಅಸ್ಸಾಂನ ಬಹುದೊಡ್ಡ ನಗರ. ಬ್ರಹ್ಮಪುತ್ರ ನದಿ ತೀರದಲ್ಲಿರುವ ಈ ನಗರ ಪ್ರಕೃತಿ ಸೌಂದರ್ಯಕ್ಕೂ ಪ್ರಖ್ಯಾತಿಗಳಿಸಿದೆ. ಅಂಬುಬಾಚೀ, ಅಂಬುಬಾಸೀ, ಅಂಬುವಾಸೀ ಮೇಳಾ... ಹೀಗೆ ವಿವಿಧ ಹೆಸರುಗಳು ಈ ಉತ್ಸವಕ್ಕೆ. ಈಗಾಗಲೇ ಸಾಧು–ಸಂತರು, ಅಘೋರಿಗಳೆಲ್ಲ ಗುವಾಹಟಿಯ ಕಾಮಾಖ್ಯಾ ಮಂದಿರದತ್ತ ದಾಪುಗಾಲು ಇರಿಸಲು ಶುರು ಮಾಡಿದ್ದಾರೆ.

ತಂತ್ರ ಮಂತ್ರ ಸಿದ್ಧಿ ಸಾಧಕರ ಇಷ್ಟದ ಕಾಮಾಖ್ಯಾ ಮಂದಿರದಲ್ಲಿ ಈ ವರ್ಷ ಜೂನ್ 22ರಿಂದ ಜೂನ್ 25ರ ತನಕ ವಿಶ್ವ ಪ್ರಸಿದ್ಧ ಅಂಬುವಾಸೀ ಮೇಳಾ ಜರುಗಲಿದೆ. ತಾಂತ್ರಿಕರು ಸಿದ್ಧಿಶಕ್ತಿ ಸಾಧನೆ ಪ್ರಾಪ್ತಿಗಾಗಿ ಬರುವರು ಎಂದು ಬಹು ಖ್ಯಾತಿ ಗಳಿಸಿದ ಗುವಾಹಟಿ ನಗರದತ್ತ ಜನ ಧಾವಿಸುತ್ತಿದ್ದಾರೆ. ಕಾಮಾಖ್ಯಾ ಮಂದಿರದ ಆಡಳಿತ ಈಗಾಗಲೇ ವಾರ್ಷಿಕ ಉತ್ಸವಕ್ಕೆ ಎಲ್ಲಾ ತಯಾರಿ ನಡೆಸುತ್ತಿದೆ.

ಇಲ್ಲಿ ಮೂರು ದಿನಗಳಲ್ಲಿ ಕಾಮಾಖ್ಯಾ ದೇವಿ ರಜಸ್ವಲೆಯಾಗಲಿದ್ದು, ಮಂದಿರದ ಬಾಗಿಲು ಮುಚ್ಚಿರುತ್ತದೆ. ಆದರೆ, ಕಾಮಾಖ್ಯಾ ಮಂದಿರದ ಹೊರಗಡೆ ಲಕ್ಷಗಟ್ಟಲೆ ಭಕ್ತರು ಸಂಭ್ರಮ ಪಡಲಿದ್ದಾರೆ. ಯೋನಿ ಪೀಠದ ಮೇಲೆ ಹಾಸಿದ ಕೆಂಪುವಸ್ತ್ರದ ಚೂರನ್ನು ಮಹಾಪ್ರಸಾದ ರೂಪದಲ್ಲಿ ಸ್ವೀಕರಿಸಲು ನಾಲ್ಕನೇ ದಿನ ತುದಿಗಾಲಲ್ಲಿ ನಿಂತಿರುತ್ತಾರೆ. ಮೊದಲ ಮೂರು ದಿನಗಳು ಮಂದಿರಕ್ಕೆ ಬಾಗಿಲು ಹಾಕುತ್ತಾರೆ. ನಾಲ್ಕನೇ ದಿನವೇ ಭಕ್ತರಿಗೆ ಪ್ರವೇಶ.

ಅಸ್ಸಾಂ ರಾಜ್ಯದ ಕಾಮರೂಪ ಮೆಟ್ರೋ ಜಿಲ್ಲೆಯಲ್ಲಿರುವ ನೀಲಾಂಚಲ ಬೆಟ್ಟದ ಮೇಲಿನ ಕಾಮಾಖ್ಯಾ ಶಕ್ತಿಪೀಠ ಮಂದಿರವು ತಾಂತ್ರಿಕ ಸಿದ್ಧಿ ಸಾಧಕರ ಶಕ್ತಿಪೀಠಗಳಲ್ಲಿ ಪ್ರಮುಖವಾದುದು. ಸಾಧು– ಸಂತರು, ಅಘೋರಿಗಳಿಂದ ಹಿಡಿದು ವಿಶ್ವದಾದ್ಯಂತದ ಭಕ್ತರು ಜೂನ್ ತಿಂಗಳಲ್ಲಿ ಜರುಗುವ ಅಂಬುವಾಸೀ ಮೇಳಾ (ಉತ್ಸವ) ವೀಕ್ಷಿಸಲೆಂದೇ ಗುವಾಹಟಿಗೆ ಬರುತ್ತಾರೆ. ಕಾಮಾಖ್ಯಾ ಮಂದಿರದಲ್ಲಿ ವರ್ಷವಿಡೀ ಭಕ್ತರ ದೊಡ್ಡ ದಂಡೇ ಇರುತ್ತದೆ. ನಾವು ಹೋದಾಗಲೂ ಬಹುದೊಡ್ಡ ಸಾಲುಗಳು ಕಂಡು ಬಂದುದರಿಂದ ಕೊನೆಗೆ ₹ 501 ವಿಶೇಷ ಟಿಕೆಟ್ ಪಡೆದು ಯೋನಿಪೀಠದ ದರ್ಶನ ಪಡೆದೆವು.

ಸುಮಾರು 8ರಿಂದ 17ನೇ ಶತಮಾನದ ಅವಧಿಯಲ್ಲಿ ಹಲವು ಬಾರಿ ಈ ಮಂದಿರದ ಜೀರ್ಣೋದ್ಧಾರ ನಡೆದು ಈಗಿರುವ ಮಂದಿರ ಕಟ್ಟಲಾಗಿದೆ. ಕ್ರಿ.ಶ. 1665ರಲ್ಲಿ ಕೂಚ್‌ಬಿಹಾರ ಅರಸ ನರನಾರಾಯಣ ಅವರು ಇದರ ಜೀರ್ಣೋದ್ಧಾರ ಮಾಡಿದರು. ಅಂಬುವಾಸೀ ಮೇಳಾ ತಂತ್ರ ಮಂತ್ರ ಸಾಧಕರ ಉತ್ಸವವೆಂದೂ ಕರೆಯಿಸಿಕೊಂಡಿದೆ.

ಈ ಮೇಳಾದ ಮೂರು ದಿನಗಳಲ್ಲಿ ಮಾತೆಯು ರಜಸ್ವಲೆ ಆಗುವುದರಿಂದ ಮಂದಿರದ ಬಾಗಿಲು ಮುಚ್ಚಿರುತ್ತದೆ. ಆದರೆ, ಈ ದಿನಗಳಲ್ಲಿ ಮಂದಿರದ ಹೊರಗಡೆ ಬಾಬಾಗಳು ಸಾಧನೆ, ಧ್ಯಾನಗಳಲ್ಲಿ ತೊಡಗಿರುತ್ತಾರೆ. ಕುಂಭ ಮೇಳಾದ ಸಂದರ್ಭ ಹೊರತುಪಡಿಸಿದರೆ ಈ ಸಾಧು ಬಾಬಾಗಳನ್ನು ಜೂನ್ ತಿಂಗಳ ಅಂಬುವಾಸೀ ಮೇಳಾದಲ್ಲಿ ಭಾರೀ ಸಂಖ್ಯೆಯಲ್ಲಿ ವೀಕ್ಷಿಸಬಹುದು. ಒಂಟಿ ಕಾಲಲ್ಲಿ ತಪಸ್ಸು ಮಾಡುವ ಸಾಧಕರನ್ನೂ ಇಲ್ಲಿ ಕಾಣಬಹುದು. ಇದು ಮಾತೆಯ ಬಹುದೊಡ್ಡ ಸಿದ್ಧಿದಾಯಕ ಶಕ್ತಿಪೀಠವೆಂದು ಸಾಧುಗಳ ನಂಬಿಕೆ. ಹಾಗಾಗಿ, ಇದು ತಂತ್ರಮಂತ್ರ ಸಾಧಕರ ಪೀಠಸ್ಥಾನವಾಗಿದೆ.

ಪ್ರತಿವರ್ಷ ಜೂನ್ ತಿಂಗಳಲ್ಲಿ ಅಂಬುವಾಸೀ ಉತ್ಸವ ನೆರವೇರುತ್ತದೆ. (ಮಿಥುನ ಸಂಕ್ರಮಣದ ಮುಂದಿನ ವಾರ, ಆರ್ದ್ರಾ ಮಹಾನಕ್ಷತ್ರ ಆರಂಭವಾದಾಗ) ಈ ಸಮಯದಲ್ಲಿ ಪೃಥ್ವಿ ರಜಸ್ವಲೆ ಆಗುವ ನಂಬಿಕೆ. ಕಾಮಾಖ್ಯಾ ದೇವಿ ರಜಸ್ವಲೆ ಆಗುತ್ತಾಳೆ. ಆವಾಗ ದೇವಳದ ಅರ್ಚಕರು ಯೋನಿಪೀಠದ ಮೇಲೆ ಕೆಂಪು ವಸ್ತ್ರ ಹಾಸುತ್ತಾರೆ. ನಾಲ್ಕನೆಯ ದಿನ ಬೆಳಿಗ್ಗೆ ಬಾಗಿಲು ತೆರೆದು ಅಭಿಷೇಕ, ಪೂಜೆಯ ಬಳಿಕವೇ ಭಕ್ತರಿಗೆ ಪ್ರವೇಶ. ಯೋನಿ ಪೀಠಕ್ಕೆ ಹಾಸಿದ ಕೆಂಪುಬಟ್ಟೆಯ ಚೂರು ಭಕ್ತರಿಗೆ ಮಹಾಪ್ರಸಾದ.

ದೇವಿಯ ಈ ವಾರ್ಷಿಕ ಪಿರಿಯಡ್ ಅಂಬುವಾಸೀ ಮೇಳಾ ಹೆಸರಿನಲ್ಲಿ ಪ್ರಖ್ಯಾತಿ ಪಡೆದಿದೆ. ಅಸ್ಸಾಂ ಸರ್ಕಾರ ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತದೆ.

ಬ್ರಹ್ಮಪುತ್ರ ನದಿಯ ದಕ್ಷಿಣ ತೀರದಲ್ಲಿ ಕಾಮಾಖ್ಯಾ ಮಂದಿರ ಇದ್ದರೆ, ನದಿಯ ಇನ್ನೊಂದು ತೀರದಲ್ಲಿ ಉಮಾನಂದ ಮಂದಿರವಿದೆ. ಅಂಬುವಾಸೀ ಮೇಳಾ ಜರುಗುವ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಅಷ್ಟೇ ಪ್ರಸಿದ್ಧಿ ಪಡೆದಿವೆ. ಈ ಉತ್ಸವ ನಡೆಯುವ ತಿಂಗಳ ಮೊದಲೇ ಗುವಾಹಟಿ ಪೊಲೀಸ್ ಕಮಿಷನರ್, ಜಿಲ್ಲಾ ಉಪಾಯುಕ್ತರು, ಪರ್ಯಟನ ಇಲಾಖೆಯ ನಿರ್ದೇಶಕರು ಹೀಗೆ ಎಲ್ಲರೂ ಸಭೆಗಳನ್ನು ಏರ್ಪಡಿಸಿ ಕಾಮಾಖ್ಯಾ ಭಕ್ತರಿಗೆ ದೊರೆಯಬೇಕಾದ ಎಲ್ಲಾ ಸೌಕರ್ಯ ಕುರಿತಂತೆ ನಿರ್ಧಾರ ತಳೆಯುತ್ತಾರೆ. ಸ್ವಚ್ಛತೆ ಬಗ್ಗೆ ಈಗಾಗಲೇ ಜನಜಾಗೃತಿಯ ವಿಶೇಷ ಅಭಿಯಾನವನ್ನೂ ನಡೆಸಿದ್ದಾರೆ. ನೀಲಾಂಚಲ ಬೆಟ್ಟದ ಕೆಳಗಿನಿಂದ ಮೇಲಿನ ತನಕ ವಿಶೇಷ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ.

ಗುವಾಹಟಿ ನಗರದಿಂದ 8 ಕಿ.ಮೀ; ರೈಲ್ವೆ ಸ್ಟೇಷನ್‌ನಿಂದ 6 ಕಿ.ಮೀ ಹಾಗೂ ಗುವಾಹಟಿ ವಿಮಾನ ನಿಲ್ದಾಣದಿಂದ 20 ಕಿ.ಮೀ. ದೂರದಲ್ಲಿ ನೀಲಾಂಚಲ ಬೆಟ್ಟದಲ್ಲಿ ಕಾಮಾಖ್ಯಾ ಶಕ್ತಿಪೀಠ ಮಂದಿರವಿದೆ.

ಹೆಚ್ಚಾಗಿ ಪ್ರವಾಸಿಗರು ಜೂನ್ ತಿಂಗಳಲ್ಲಿ ಗುವಾಹಟಿ ಸುತ್ತಾಡಿ ಬರಲು ಇಚ್ಛಿಸುತ್ತಾರೆ. ಅದರಲ್ಲೂ ಜೂನ್‌ನಲ್ಲಿ ಬರುವ ಅಂಬುವಾಸೀ ಮೇಳಾವನ್ನು ವೀಕ್ಷಿಸುವುದಂತೂ ಕುಂಭಮೇಳಕ್ಕಿಂತ ವಿಭಿನ್ನವಾದ ಆನಂದವನ್ನು ನೀಡುವುದು. ಜೂನ್ ತಿಂಗಳ ಅಂಬುವಾಸೀ ಮೇಳಾದ ಆ ಮೂರು ದಿನ ದೇವಿ ಋತುಮತಿ ಆಗುವುದಷ್ಟೆ ಅಲ್ಲ, ಬ್ರಹ್ಮಪುತ್ರ ನದಿ ನೀರೂ ಕೆಂಪಾಗಿರುವುದು ವಿಶೇಷ ಆಕರ್ಷಣೆ (ಮಂದಿರದ ಅರ್ಚಕರೇ ನದಿಗೆ ಸಿಂಧೂರ ಹಾಕುತ್ತಾರೆ.)

ಪುರಾಣ ಕಥೆ

ಅಂಬು ಬಾಚೀ ಮೇಳಾದ ಹೊರತು ನವರಾತ್ರಿ ಇಲ್ಲಿ ವಿಶೇಷವಾಗಿದೆ. ಚೈತ್ರ ಮಾಸದಲ್ಲಿ ವಸಂತಿ ಪೂಜೆ ಕೂಡಾ ಇಲ್ಲಿ ವಿಶೇಷ. ಕಾಮಾಖ್ಯಾ ಮಂದಿರ ತಂತ್ರಮಂತ್ರ ಸಾಧನೆಯ ದೇವಿಗೆ ಸಮರ್ಪಿತ. ಪ್ರಧಾನ ದೇವಿ ಕಾಮಾಖ್ಯಾ ಆಗಿದ್ದರೂ ಅನ್ಯ ಹತ್ತು ಅವತಾರಗಳಾದ ಧೂಮಾವತಿ, ಮತಂಗಿ, ತಾರಾ, ಕಮಲಾ, ಬಗೋಲಾ, ಭೈರವಿ, ಚಿನಮಾಸಾ, ಭುವನೇಶ್ವರಿ, ತ್ರಿಪುರ ಸುಂದರಿ... ಇವುಗಳನ್ನೂ ವೀಕ್ಷಿಸಬಹುದು.

ಕಾಮಾಖ್ಯಾ ಮಂದಿರವನ್ನು ರಹಸ್ಯಮಯ ಮತ್ತು ಅದ್ಭುತ ಎಂದೂ ಕರೆಯುತ್ತಾರೆ. ಈ ಮಂದಿರದಲ್ಲಿ ಯಾವುದೇ ಮೂರ್ತಿ ಇಲ್ಲ. ಗರ್ಭಗುಡಿಯಲ್ಲಿ ಯೋನಿಪೀಠ ಮಾತ್ರ ಗೋಚರ ಆಗುವುದು. ಇದನ್ನೇ ಪೂಜಿಸಲಾಗುತ್ತಿದೆ. ಶಿವನ ಪತ್ನಿ ದೇವಿ ಸತಿಯು ತನ್ನ ತಂದೆ ದಕ್ಷನು ತನ್ನ ಪತಿಯ ಕುರಿತು ಮಾಡಿದ ನಿಂದನೆ, ಅವಮಾನವನ್ನು ಸಹಿಸದೆ ಯಜ್ಞಕುಂಡಕ್ಕೆ ಹಾರಿದ ಘಟನೆಯ ನಂತರ ಶಿವನು ಸತಿಯ ಮೃತ ಶರೀರವನ್ನು ಹೊತ್ತು ತಾಂಡವ ನೃತ್ಯಗೈದಾಗ ಬೆದರಿದ ದೇವತೆಗಳು ವಿಷ್ಣುವಿನ ಮೊರೆ ಹೋದರು. ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ಶರೀರವನ್ನು 51 ತುಂಡುಗಳನ್ನಾಗಿಸಿ ವಿವಿಧೆಡೆ ಭೂಮಿಗೆ ಬೀಳಿಸಿದ. ಆವಾಗ ಸತಿಯ ಗರ್ಭ ಮತ್ತು ಯೋನಿ ಭಾಗ ಕಾಮಾಖ್ಯಾ ಧಾಮ್‌ನಲ್ಲಿ ಬಿದ್ದಿತು ಎಂದು ಪುರಾಣ ಕಥೆ ಇದೆ.

ಗುವಾಹಟಿಗೆ ಬಂದ ಪರ್ಯಟಕರು ಅಸ್ಸಾಂ ಸ್ಟೇಟ್ ಮ್ಯೂಸಿಯಂ, ಉಮಾನಂದ ಮಂದಿರ (ಭಗವಾನ್ ಶಿವನಿಗೆ ಅರ್ಪಿತ) ನೀಲಾಂಚಲ ಬೆಟ್ಟದಲ್ಲಿ ಭುವನೇಶ್ವರಿ ಮಂದಿರ, ಚಿತ್ರಸಲ ಬೆಟ್ಟದಲ್ಲಿ ನವಗ್ರಹ ಮಂದಿರ, ಗುವಾಹಟಿ ತಾರಾಮಂಡಲ, ಸುಕರೇಶ್ವರ ಮಂದಿರವನ್ನೂ ವೀಕ್ಷಿಸಬಹುದು.

ಒಟ್ಟಾರೆ ಆಸ್ತಿಕ ನಾಸ್ತಿಕ ಎಲ್ಲ ರೀತಿಯ ಪ್ರವಾಸಿಗರಿಗೂ ಗುವಾಹಟಿಯ ಈ ಕಾಮಾಖ್ಯಾ ದೇವಿಯ ಉತ್ಸವ ಆಕರ್ಷಣೀಯ ಎನಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT