ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಗರ ವರ್ತುಲ ರಸ್ತೆ ಯೋಜನೆ ಕಾಮಗಾರಿ ಚುರುಕು

2023ರ ಮಾರ್ಚ್‌ ವೇಳೆಗೆ ಕಾಮಗಾರಿ ಪೂರ್ಣ
Last Updated 13 ಜನವರಿ 2021, 4:21 IST
ಅಕ್ಷರ ಗಾತ್ರ

ಬೆಂಗಳೂರು: ಬಹುವರ್ಷಗಳಿಂದ ಆಮೆಗತಿಯಲ್ಲಿದ್ದ ದಾಬಸ್‌ಪೇಟೆ–ದೊಡ್ಡಬಳ್ಳಾಪುರ ನಡುವಿನ ‘ಉಪನಗರ ವರ್ತುಲ ರಸ್ತೆ ಯೋಜನೆ‘ (ಎಸ್‌ಟಿಆರ್‌ಆರ್‌) ಕಾಮಗಾರಿಗೆ ಇದೀಗ ವೇಗ ಸಿಕ್ಕಿದೆ.

‘ಭಾರತಮಾಲ ಯೋಜನೆ’ಯಡಿ ನಡೆಯುತ್ತಿರುವ ಈ ಹೆದ್ದಾರಿ ಕಾಮಗಾರಿಯ ಜವಾಬ್ದಾರಿಯನ್ನುರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್‌ಎಐ) ಹೊತ್ತಿದೆ.

2012–13ರಲ್ಲಿ ಅನುಮೋದನೆಗೊಂಡು, 2014ರಲ್ಲಿ ಆರಂಭಗೊಂಡಿದ್ದಹೊಸಕೋಟೆ ಮತ್ತು ದಾಬಸ್‌ಪೇಟೆ ನಡುವೆ ಸಂಪರ್ಕಿಸುವ ‘ರಾಷ್ಟ್ರೀಯ ಹೆದ್ದಾರಿ–207’ (648) ನಿರ್ಮಾಣ ಎರಡು ಹಂತಗಳಲ್ಲಿ ನಡೆಯುತ್ತಿವೆ.

ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ನಡುವಿನ ರಸ್ತೆ ಮೊದಲ ಹಂತದಲ್ಲಿ ಹಾಗೂ ದೊಡ್ಡಬಳ್ಳಾಪುರದಿಂದ ದೇವನಹಳ್ಳಿ ಮಾರ್ಗವಾಗಿ ಹೊಸಕೋಟೆ ತಲುಪುವ ರಸ್ತೆ ಎರಡನೇ ಹಂತದಲ್ಲಿ ಪೂರ್ಣಗೊಳ್ಳಲಿವೆ.

ಮೊದಲ ಹಂತದಲ್ಲಿ ದಾಬಸ್‌ಪೇಟೆಯಿಂದ ಆರಂಭಗೊಂಡ ಹೆದ್ದಾರಿ ಕಾಮಗಾರಿ ಆಗೊಮ್ಮೆ ಈಗೊಮ್ಮೆ ಎಂಬಂತೆ ಮಂದಗತಿಯಲ್ಲಿ ಸಾಗಿತ್ತು. ಕೆಲಕಾಲ ಸ್ಥಬ್ಧವೂ ಆಗಿತ್ತು. ಮರಗಳ ತೆರವು ವಿವಾದದಿಂದ ಕಾಮಗಾರಿ ವಿಳಂಬವಾಗಿತ್ತು. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸ್ಥಳೀಯರು ಒತ್ತಾಯಿಸುತ್ತಲೇ ಇದ್ದರು.

ಈಗ ದೊಡ್ಡಬೆಳವಂಗಲ ಬಳಿ ಹೆದ್ದಾರಿ ಕಾಮಗಾರಿಗಾಗಿ ತಾತ್ಕಾಲಿಕ ಶೆಡ್‌ಗಳು, ನಿರ್ಮಾಣ ವಸ್ತುಗಳ ದಾಸ್ತಾನು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ಮಾರ್ಗದುದ್ದಕ್ಕೂ ಕಾಮಗಾರಿ ಪ್ರಗತಿಯಲ್ಲಿದೆ.

ಈ ಯೋಜನೆ ಪೂರ್ಣಗೊಂಡಲ್ಲಿ ತುಮಕೂರು ರಸ್ತೆ, ಹೈದರಾಬಾದ್‌ ರಸ್ತೆ ಹಾಗೂ ಹಳೆ ಮದ್ರಾಸ್ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ. ಈ ರಸ್ತೆಗಳ ಸಂಪರ್ಕಕ್ಕೆ ಈಗಿನಂತೆ ಬೆಂಗಳೂರು ನಗರಕ್ಕೆ ಪ್ರವೇಶಿಸುವ ಅನಿವಾರ್ಯವೂ ಇರುವುದಿಲ್ಲ. ಕ್ರಮೇಣ ಬೆಂಗಳೂರಿನ ವಾಹನದಟ್ಟಣೆ ಸಮಸ್ಯೆಗೂ ಮುಕ್ತಿ ಸಿಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸಕೋಟೆ, ಕೋಲಾರ, ಚಿಂತಾಮಣಿ, ಮಾಲೂರು ಮಾರ್ಗಗಳಿಂದ ಬರುವವರುದೇವನಹಳ್ಳಿ ಮೂಲಕ ಸುಲಭವಾಗಿ ಈ ಹೆ‌ದ್ದಾರಿಯಲ್ಲಿ ಸಂಚರಿಸಬಹುದು. ಹಿಂದೂಪುರ, ತುಮಕೂರು, ಹೈದರಾಬಾದ್‌ ಮತ್ತು ಕೋಲಾರ ರಸ್ತೆಗಳಿಗೆ ನೇರ ಸಂಪರ್ಕ ಕಲ್ಪಿಸಲಿದೆ.

‘ವರ್ತುಲ ರಸ್ತೆಯ ಕಾಮಗಾರಿಗೆ ಹಲವಾರು ತೊಡಕುಗಳಿದ್ದವು. ಕಾಮಗಾರಿ ನಿಧಾನವಾಗಿ ಸಾಗಲು ಇದೇ ಕಾರಣ. ರಸ್ತೆ ನಿರ್ಮಾಣಕ್ಕೆ ಸ್ವಾಧೀನ ಪ್ರಕ್ರಿಯೆ ಮುಗಿಯುವ ಹಂತದಲ್ಲಿದೆ. ಹೆದ್ದಾರಿ ಕಾಮಗಾರಿಫೆಬ್ರುವರಿಯಿಂದ ಇನ್ನಷ್ಟು ವೇಗ ಹೆಚ್ಚಿಸಿಕೊಳ್ಳಲಿದೆ. 2023ರ ಮಾರ್ಚ್‌ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ’ ಎಂದು ಎನ್‌ಎಚ್‌ಎಐ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT