ಭಾನುವಾರ, ಸೆಪ್ಟೆಂಬರ್ 15, 2019
30 °C

ದಲಿತ ಹೋರಾಟಗಾರ ಕೋದಂಡರಾಮ್ ನಿಧನ

Published:
Updated:

ಬೆಂಗಳೂರು: ‘ಅಂಬೇಡ್ಕರ್ ಯುವ ಸೇನೆ’ಯ ಸಂಸ್ಥಾಪಕ ಅಧ್ಯಕ್ಷ ಎಚ್. ಕೋದಂಡರಾಮ್ (44) ಭಾನುವಾರ ನಿಧನರಾದರು.

ಕೆಲ ಸಮಯದಿಂದ ಹೊಟ್ಟೆನೋವು ಮತ್ತು ಜ್ವರದಿಂದ ಬಳಲುತ್ತಿದ್ದ ಕೋದಂಡರಾಮ್‌ ಅವರು ಭಾನುವಾರ ನಸುಕಿನಲ್ಲಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ದಲಿತ ಪರ ಹೋರಾಟಗಾರ ರಾಗಿದ್ದ ಅವರು ರಾಜ್ಯ ಕೊಳೆಗೇರಿ ಮಂಡಳಿಯ ಸದಸ್ಯರಾಗಿದ್ದರು.

ಹೋರಾಟಗಾರ ಕೋದಂಡರಾಮ್‌

ದಲಿತ ಹೋರಾಟಗಾರ ಕೋದಂಡರಾಮ್ ಭಾನುವಾರ ಬೆಳಗಿನಜಾವ ಕೊನೆಯುಸಿರೆಳದಿದ್ದಾರೆ. ಕ್ರಿಯಾಶೀಲವ್ಯಕ್ತಿತ್ವದ ಕೋದಂಡರಾಮರವರಿಗೆ ವಯಸ್ಸು 44 ಅಷ್ಟೆ. ದಲಿತರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳು, ಅದನ್ನು ಪಡೆಯಲು ಮಾಡಬೇಕಾದ ಪ್ರಯತ್ನ, ಅರ್ಜಿ ನಮೂನೆಗಳ ಸಹಿತ ವಿವರಗಳಿರುವ ಕಿರು ಹೊತ್ತಿಗೆಯನ್ನು ಅಚ್ಚು ಹಾಕಿಸಿ ಸಾವಿರಾರು ಜನರಿಗೆ ತಲುಪಿಸಿದವರು ಕೋದಂಡರಾಮ.

ಪರಿಶಿಷ್ಟ ಜಾತಿ / ವರ್ಗಗಳಿಗೆಂದೆ ಇರುವ ವಿಶೇಷ ಘಟಕ ಯೋಜನೆ ( special component plan ) ಅಸಮರ್ಪಕ ಜಾರಿಯಿಂದ ಸಾವಿರಾರು ಕೋಟಿ ಹಣ ಪೋಲಾಗುತ್ತಿರುವ ಬಗ್ಗೆ ಅವರಿಗಿದ್ದ ಕಾಳಜಿ, ಅಧ್ಯಯನ ಆಳವಾದದ್ದು. ಇದಕ್ಕಾಗಿ ಅವರು ಎಡತಾಕದ ಯಾವ ಸರ್ಕಾರಿ ಕಚೇರಿಯೂ ಉಳಿದಿರಲಿಕ್ಕಿಲ್ಲ. ನೂರಾರು ಸಲ RTI ಮೊರೆ ಹೋಗಿ ಮಾಹಿತಿ ಕಲೆ ಹಾಕಿದ್ದಾರೆ.  ಬಿಜೆಪಿಯ ಎಸ್ಸಿ ಮೋರ್ಚಾದ ಬೆಂಗಳೂರು ನಗರ ಘಟಕದ ಅಧ್ಯಕ್ಷರೂ ಆಗಿದ್ದರು. ರಾಷ್ಟ್ರೀಯ ನಾಯಕರೊಬ್ಬರ ಬೃಹತ್ ಕಾರ್ಯಕ್ರಮದ ಪೂರ್ವ ತಯಾರಿಯ ಸಭೆಯಲ್ಲಿ ಎಸ್ಸಿ ಮೋರ್ಚಾದ ಕಾರ್ಯಕರ್ತರಿಗೆ ವಾಹನಗಳ ಪಾರ್ಕಿಂಗ್ ನಿಭಾಯಿಸುವ ಜವಾಬ್ದಾರಿ ನೀಡಲಾಯಿತು. ಐಟಿ ಸೆಲ್ ನವರಿಗೆ ಗಣ್ಯರ ಜವಾಬ್ದಾರಿ ಕೊಟ್ಟಾಗ ಪ್ರತಿಭಟಿಸಿದವರು ಕೋದಂಡರಾಮ್. ಇತ್ತೀಚಿಗೆ ಅವರು ಬಿಜೆಪಿಗೆ ರಾಜೀನಾಮೆ ಕೊಟ್ಟಿದ್ದರು. ಯಡಿಯೂರಪ್ಪನವರು ಮತ್ತೆ ಸಿಎಂ ಆದಾಗ ಮನೆಗೆ ಹೋಗಿ ಅಭಿನಂದಿಸಿ ಬಂದಿದ್ದರು.

 ಸಿದ್ದರಾಮಯ್ಯ ಸರ್ಕಾರದ ಟಿಪ್ಪು ಜಯಂತಿಯನ್ನು ಬೆಂಗಳೂರಿನಲ್ಲಿ ಮಹಿಳೆಯರು ಒನಕೆ ಹಿಡಿದು ಪ್ರತಿಭಟಿಸಲು ಕಾರಣರಾದವರು. ಒಬವ್ವ ದಲಿತ ಮಹಿಳೆ, ಈ ಹೆಣ್ಣುಗಲಿಯನ್ನು ಹೈದರಾಲಿ - ಟಿಪ್ಪು ಹಿಂದಿನಿಂದ ಬಂದು ಮೋಸದಿಂದ ಕೊಂದ ಹೇಡಿಗಳು. ಅವರ ಜಯಂತಿ ಸಾಧ್ಯವಿಲ್ಲ ಎಂದಿದ್ದರು. ಗೆಳೆಯರೊಂದಿಗೆ ದೆಹಲಿಗೆ ಹೋಗಿ ಅಲ್ಲಿನ ವಾರ್ತಾ ಕಚೇರಿ ಎದುರು ಪ್ರತಿಭಟಿಸಿದ್ದರು. 

ಬಸವೇಶ್ವರ ನಗರದ ಅಂಬೇಡ್ಕರ್ ಸ್ಟೇಡಿಯಂನಲ್ಲಿನ ಅವರ ಆಂಬೇಡ್ಕರ್ ಸೇನೆಯ ಕಚೇರಿ ಹಲವು ಮುಖಗಳಲ್ಲಿ ಜನೋಪಯೋಗಿ ಕೇಂದ್ರವಾಗಿತ್ತು.  ಹತ್ತುವರ್ಷಗಳ ಹಿಂದೆ ಅವರ ಅಂಬೇಡ್ಕರ್ ಸೇನೆಯ ಕಚೇರಿಗೆ ಅರೆಸ್ಸೆಸ್ ನ ಹಿರಿಯ ಪ್ರಚಾರಕರಾದ ಮೈ. ಚ. ಜಯದೇವ್ ಭೇಟಿಕೊಟ್ಟು ಒಂದು ತಾಸು ದಲಿತರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದು ಜೊತೆಗಿದ್ದ ಪಟಾಫಟ್ ಶ್ರೀನಿವಾಸ್ ಹಾಗೂ ನನಗೆ ಮರೆಯಲಾಗದ ನೆನಪು. ಕಾಳಜಿ , ಕ್ರಿಯಾಶೀಲತೆಯ ವ್ಯಕ್ತಿ ಅರ್ಧವಯಸ್ಸಿನಲ್ಲೆ ಅಗಲುವುದು ಸುತ್ತಲಿನ ಸಮಾಜಕ್ಕೆ ನಷ್ಟ ತರುತ್ತದೆ. ಡಾ ಆಂಬೇಡ್ಕರ್ ರವರ ಪದತಲದಲ್ಲಿ ಕೋದಂಡರಾಮರವರ ಭಾವಚಿತ್ರ ನೋಡುವಾಗ ಮನಸ್ಸು ಭಾರವಾಯಿತು.

– ವಾದಿರಾಜ್ (ಕೋದಂಡರಾಮ್‌ ಅವರ ಒಡನಾಡಿ)

Post Comments (+)