ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ನೀಲಿ ಅಲೆ: ಮೊಳಗಿದ ಕ್ರಾಂತಿ ಕಹಳೆ

ದಲಿತರ ಸಾಂಸ್ಕೃತಿಕ ಪ್ರತಿರೋಧ– ದಲಿತ ಸಂಘಟನೆಗಳ ಬೃಹತ್‌ ಐಕ್ಯತಾ ಸಮಾವೇಶದಲ್ಲಿ ನೀಲಿ ಸಾಗರ
Last Updated 6 ಡಿಸೆಂಬರ್ 2022, 16:24 IST
ಅಕ್ಷರ ಗಾತ್ರ

ಬೆಂಗಳೂರು: ನೀಲಿ ಕಡಲಾಗಿದ್ದ ನ್ಯಾಷನಲ್ ಕಾಲೇಜು ಮೈದಾನ, ಎಲ್ಲೆಲ್ಲೂ ಜೈಭೀಮ್ ಘೋಷಣೆ, ಬೋರ್ಗರೆದ ತಮಟೆ ಸದ್ದು, ಮೊಳ ಗಿದ ಕಹಳೆಗಳು, ಕಿಚ್ಚೆಬ್ಬಿಸಿದ ಕ್ರಾಂತಿ ಗೀತೆಗಳು...

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಆಯೋಜಿಸಿದ್ದ ದಲಿತರ ಸಾಂಸ್ಕೃತಿಕ ಪ್ರತಿರೋಧವು ದಲಿತ ಸಂಘರ್ಷ ಸಮಿತಿಯ ಮರುಹುಟ್ಟಿನಂತೆ ಕಂಡಿತು. ಇಡೀ ಮೈದಾನ ನೀಲಿ ಹೊದಿಕೆ ಹೊದ್ದಂತೆ ಭಾಸವಾಗುತ್ತಿತ್ತು. ‌ಹೆಗಲ ಮೇಲೆ ನೀಲಿ ಶಾಲು, ಕೈಯಲ್ಲಿ ನೀಲಿ ಬಾವುಟ, ಕೆಲವರೆದೆ ಮೇಲಿನ ನೀಲಿ ಅಂಗಿಯೊಳಗೆ ಮಿಂಚಾದ ಅಂಬೇಡ್ಕರ್ ಭಾವಚಿತ್ರ ನೆರೆದಿದ್ದವರಲ್ಲಿ ಹೋರಾಟದ ಕಿಚ್ಚು ಹೆಚ್ಚಿಸಿತ್ತು.

ವೇದಿಕೆಯಲ್ಲಿ ಅಂಬೇಡ್ಕರ್ ಹೆಸರು ಹೇಳಿದ ಕೂಡಲೇ ಇಡೀ ಮೈದಾನದಲ್ಲಿ ಕಿವಿಗಡಚಿಕ್ಕುವಂತೆ ಜೈಭೀಮ್ ಘೋಷಣೆಗಳನ್ನು ಜನ ಮೊಳಗಿಸುತ್ತಿದ್ದರು. ಅಂಬೇಡ್ಕರ್ ಮೊಮ್ಮಗಳು ರಮಾಬಾಯಿ ಅವರು ವೇದಿಕೆಗೆ ಬರುತ್ತಿದ್ದಂತೆ ಕೇಕೆ ಜೋರಾಯಿತು. ಸ್ವಯಂ ಸೇವಕರು ಧರಿಸಿದ್ದ ಕಪ್ಪು ದಿರಿಸಿನಲ್ಲಿ ‘ಜಾತಿಗಳೇ ದೇಶದ್ರೋಹಿಗಳು’ ಎಂಬ ಸಾಲು ಆಕರ್ಷಿಸುತ್ತಿತ್ತು. ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಚಾಲನೆ ನೀಡಿದರು. ಬಾಲು ಅವರು ‘ಜಂಬೆ’ ಬಾರಿಸುವ ಮೂಲಕ ಸಾಂಸ್ಕೃತಿಕ ಆರಂಭವಾಯಿತು. ಎಚ್.ಜನಾರ್ದನ್ (ಜನ್ನಿ), ಪಿಚ್ಚಳ್ಳಿ ಶ್ರೀನಿವಾಸ್‌, ಗೊಲ್ಲಹಳ್ಳಿ ಶಿವಪ್ರಸಾದ್,ಚಿಂತನ್ ವಿಕಾಸ್, ಆನಂದ್, ಡಿ.ರಾಜಪ್ಪ ಸೇರಿ ಹಲವರು ಕ್ರಾಂತಿಗೀತೆಗಳನ್ನು ಹಾಡಿ ಹೋರಾಟದ ಕಿಚ್ಚು ಹೆಚ್ಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿ.ಬಸಲಿಂಗಯ್ಯ, ‘ಇದು ಬುದ್ಧನ ನಾಡು, ಇಲ್ಲಿ ಅವನೇ ಪರಕೀಯ ಆಗಿದ್ದಾನೆ. ಡಿಎನ್‌ಎ ಚೆಕ್ ಮಾಡಿದರೆ ಹಲವರನ್ನು ವಿದೇಶಕ್ಕೆ ಓಡಿಸಬಹುದು. ಆದರೆ, ನಾವೆಲ್ಲರೂ ವಿಶ್ವಮಾನವರು. ಈ ನಾಡನ್ನು ಉತ್ತರ ಪ್ರದೇಶ, ಗುಜರಾತ್ ಅಥವಾ ಬಿಹಾರ ಮಾಡಲು ಬಿಡಬಾರದು’ ಎಂದರು. ಒಗ್ಗೂಡಿದ 10 ಸಂಘಟನೆಗಳ ನಾಯಕರು ಮಾತನಾಡಿ ರಾಜ್ಯದ ಹಲವೆಡೆಯಿಂದ ಬಂದಿದ್ದ ಜನರನ್ನು ಹುರಿದುಂಬಿಸಿದರು.

ಸಿಡಿಮಿಡಿ: ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್ ರಾವ್ ಅವರನ್ನು ಅಲ್ಲೇ ಇದ್ದವರು ವೇದಿಕೆಗೆ ಕರೆದೊಯ್ದರು. ರಾಜಕೀಯ ಮುಖಂಡರಿಂದ ಅಂತರ ಕಾಯ್ದುಕೊಂಡಿದ್ದ ಈ ವೇದಿಕೆಗೆ ಅವ ರನ್ನು ಕರೆತಂದಿದ್ದು ಮುಖಂಡರ ಸಿಡಿಮಿಡಿಗೆ ಕಾರಣವಾಯಿತು. ಬಳಿಕ ಅವರು ಕೆಳಗಿಳಿದು ಬಂದು ವೀಕ್ಷಕರ ಸಾಲಿನಲ್ಲಿ ಕುಳಿತರು.

ಮೀಸಲಾತಿ ಮೋದಿ ಅಪ್ಪನ ಗಂಟೇ: ಮಾವಳ್ಳಿ ಶಂಕರ್ ಪ್ರಶ್ನೆ

‘ಶೇ 4ರಷ್ಟಿರುವ ಜನರಿಗೆ ಶೇ 10ರಷ್ಟು ಮೀಸಲಾತಿ ನೀಡಲು ಅದೇನು ಪ್ರಧಾನಿ ಮೋದಿ ಅವರ ಅಪ್ಪನ ಮನೆಯ ಗಂಟೇ’ ಎಂದು ಡಿಎಸ್‌ಎಸ್ ಐಕ್ಯ ಹೋರಾಟ ಚಾಲನಾ ಸಮಿತಿ ಸದಸ್ಯ ಮಾವಳ್ಳಿ ಶಂಕರ್ ಪ್ರಶ್ನಿಸಿದರು.

‘ಇದು ಮೋದಿಯ ತಪ್ಪಲ್ಲ, ಮೀಸಲು ಕ್ಷೇತ್ರದಲ್ಲಿ ಗೆದ್ದು ಹೋಗಿ ಮೋದಿಯ ಗುಲಾಮರಾಗಿ, ಸಂಘ ಪರಿವಾರದ ಕಾಲಾಳುಗಳಾಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಸದರನ್ನು ನಾವು ಕೇಳಬೇಕಿದೆ. ಅಂಬೇಡ್ಕರ್ ಅವರು ನಿಮ್ಮಂತೆ ಒಂದು ಕ್ಷಣ ಮೈಮರೆತಿದ್ದರೂ
ನಿಮ್ಮ ಸ್ಥಿತಿ ಏನಾಗಿರುತ್ತಿತ್ತು ಗೊತ್ತೆ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಮೋದಿ ಮತ್ತು ಬಸವರಾಜ ಬೊಮ್ಮಾಯಿ ಮನೆಯಲ್ಲಿ ಗೋವು ಗಳನ್ನು ಸಾಕಿದ್ದಾರೆಯೇ, ಈಗ ಗೋವುಗಳಿಗೆ ಮುತ್ತಿಡುವ ನಿಮಗೆ ದಲಿತರ ಮಕ್ಕಳಿಗೊಂದು ಮುತ್ತಿಡುವ ಯೋಗ್ಯತೆ ಇಲ್ಲ. ನಮ್ಮ ರಕ್ತ ಎಷ್ಟೇ ಹರಿದರೂ ನಾವು ದೇಶದ್ರೋಹಿಗಳಾಗಿಲ್ಲ. ಆರ್‌ಎಸ್‌ಎಸ್‌ ಬಂದೂಕು ಹಿಡಿದು ದೇಶವನ್ನು ಬೇಟೆಯಾಡುತ್ತಿದೆ. ಆರ್‌ಎಸ್‌ಎಸ್ ಎಂಬ ಶನಿ ಸಂತಾನವನ್ನು ಮುಗಿಸ ದಿದ್ದರೆ ಈ ದೇಶದ ಬಹುಜನರಿಗೆ ಮುಕ್ತಿ ಇಲ್ಲ’ ಎಂದರು.

‘ಕೇಂದ್ರ ಮಂತ್ರಿ ಪ್ರಲ್ಹಾದ ಜೋಶಿಗೆ ಬಿಲ್ಲು ಹಿಡಿಯುವುದೇ ಗೊತ್ತಿಲ್ಲ. ಏಕಲವ್ಯನ ಹೆಬ್ಬೆರಳು ಕಿತ್ತುಕೊಂಡವರಿಗೆ ಬಿಲ್ಲು ಹಿಡಿಯುವ ಯೋಗ್ಯತೆ ಎಲ್ಲಿದೆ. ನಮ್ಮ ಹೆಬ್ಬೆರಳನ್ನು ಎಷ್ಟೇ ಬಾರಿ ಕಸಿದುಕೊಂಡರೂ ನಾವು ಬಿಲ್ಲು ಹಿಡಿದೇ ಹಿಡಿಯುತ್ತೇವೆ. ರಾಮಾಯಣ ಬರೆದವರು ನಾವು, ಮಹಾಭಾರತ ಬರೆದವರು ನಾವು, ಸಂವಿಧಾನವನ್ನೂ ಬರೆದವರೂ ನಾವೆ. ಅಮಿತ್ ಶಾ ಅವರು ಚರಿತ್ರೆ ಬದಲಿಸುತ್ತೇವೆ ಎನ್ನುತ್ತಿದ್ದಾರೆ. ಸಿಂಹಗಳ ಚರಿತ್ರೆಯನ್ನು ಸಿಂಹಗಳೇ ಬರೆಯಬೇಕೆ ಹೊರತು ನರಿಗಳಲ್ಲ’ ಎಂದು ಕಿಡಿ ಕಾರಿದರು.

‘ನೀಲಿ ದಂಡು ಇಂದು ಬೆಂಗ ಳೂರಿಗೆ ಬಂದಿದೆ. ದಲಿತರ ಪಾದಸ್ಪರ್ಶದಿಂದ ಬಸವನಗುಡಿ ಶಾಪವಿಮೋಚನೆಗೊಂಡಿದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ, ಕೋಮು ವಾದದ ವಿರುದ್ಧ ನಿರಂತರ ಹೋರಾಟ ನಡೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT