ದಸರಾ ಹಬ್ಬದಂದು ದುಬಾರಿ ಪ್ರಯಾಣ ದರ ವಸೂಲಿ ವಿರುದ್ಧ 10 ತನಿಖಾ ತಂಡ ಕಾರ್ಯಾಚರಣೆ

ಬೆಂಗಳೂರು: ದಸರಾ ಹಬ್ಬದ ಸಂದರ್ಭದಲ್ಲಿ ದುಬಾರಿ ಪ್ರಯಾಣ ದರ ವಸೂಲು ಮಾಡುವ ವಾಹನಗಳ ಮಾಲೀಕರ ವಿರುದ್ಧ ಕಾರ್ಯಾಚರಣೆ ನಡೆಸಲು ಸಾರಿಗೆ ಇಲಾಖೆ 10 ವಿಶೇಷ ತನಿಖಾ ತಂಡಗಳನ್ನು ರಚಿಸಿದೆ.
ಖಾಸಗಿ ಬಸ್ ಮಾಲೀಕರೊಂದಿಗೆ ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ್ ಗುರುವಾರ ಸಭೆ ನಡೆಸಿದರು. ತಪ್ಪಿತಸ್ಥರಿಗೆ ನೋಟಿಸ್ ಜಾರಿ ಮಾಡಿ, ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.
ಆಯುಧಪೂಜೆ, ವಿಜಯ ದಶಮಿ ಸಂದರ್ಭದಲ್ಲಿ ಸಾಲು ರಜೆಗಳಿದ್ದು, ಬಸ್‌ಗಳ ಪ್ರಯಾಣಕ್ಕೆ ಬೇಡಿಕೆ ಹೆಚ್ಚಾಗಿದೆ. ಇದರ ದುರ್ಲಾಭ ಪಡೆಯಲು ದುಬಾರಿ ದರ ನಿಗದಿ ಮಾಡಲಾಗಿದೆ ಎಂಬ ದೂರುಗಳನ್ನು ಆಧರಿಸಿ ಬಸ್ ಮಾಲೀಕರ ಸಭೆ ನಡೆಸಲಾಯಿತು. ಯಾವುದೇ ಕಾರಣಕ್ಕೂ ದುಬಾರಿ ದರ ವಸೂಲಿ ಮಾಡದಂತೆ ಸೂಚನೆ ನೀಡಲಾಯಿತು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದರು.
ವಿಶೇಷ ತಂಡಗಳು ಗುರುವಾರ ಸಂಜೆಯಿಂದಲೇ ಕಾರ್ಯಾಚರಣೆಗೆ ಇಳಿದಿವೆ. ಅಕ್ಟೋಬರ್ 5ರ ತನಕ ಪ್ರತಿದಿನ ಸಂಜೆ 6ರಿಂದ ತಂಡಗಳು ತಪಾಸಣೆ ನಡೆಸಲಿವೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಯಾಣಿಕರಿಗೆ ಸಂಬಂಧಿಸದ ಸರಕು ಸಾಗಿಸುವ ಮೂಲಕ ರಹದಾರಿ ನಿಯಮ ಉಲ್ಲಂಘಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಮೆಜೆಸ್ಟಿಕ್, ಶಾಂತಿನಗರ, ಮೈಸೂರು ರಸ್ತೆ, ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲೂ ಕಾರ್ಯಾಚರಣೆ ಮಾಡಲಾಗುವುದು ಎಂದರು.
ಪ್ರಕರಣ ದಾಖಲು ಮಾಡಿರುವ ಬಗ್ಗೆ ತನಿಖಾ ತಂಡಗಳು ಅ.7ರೊಳಗೆ ಕಚೇರಿಗೆ ಮಾಹಿತಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಹೆಚ್ಚಿನ ದರ ವಸೂಲಿ ಮಾಡುತ್ತಿದ್ದ ಪ್ರಯಾಣಿಕರು ದೂರು ನೀಡಲು ಸಹಾಯವಾಣಿ ತೆರೆಯಲಾಗಿದೆ. ದೂರವಾಣಿ ಸಂಖ್ಯೆ 94498 63429/ 94498 63426 ಸಂಪರ್ಕಿಸಬಹುದು ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.