ಮಂಗಳವಾರ, ಜನವರಿ 25, 2022
28 °C
ಆನ್‌ಲೈನ್‌ ಮೂಲಕ ಕಾಯ್ದಿರಿಸುವಿಕೆಗೆ ಅವಕಾಶ

ರವೀಂದ್ರ ಕಲಾಕ್ಷೇತ್ರ ‘ಡೇಟ್‌ ಬ್ಲಾಕಿಂಗ್‌’ಗೆ ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದ ಸಭಾಂಗಣದ ‘ಡೇಟ್‌ ಬ್ಲಾಕಿಂಗ್‌’ ದಂಧೆಗೆ ಕಡಿವಾಣ ಹಾಕಲು ಮುಂದಾಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಭಾಂಗಣ ಕಾಯ್ದಿರಿಸುವಿಕೆಯನ್ನು ಆನ್‌ಲೈನ್‌ ವ್ಯವಸ್ಥೆಗೆ ಒಳಪಡಿಸಲು ನಿರ್ಧರಿಸಿದೆ.

ಸಭಾಂಗಣದ ಕಾಯ್ದಿರಿಸುವಿಕೆಯಲ್ಲಿ ಪ್ರಭಾವಿಗಳು ಮತ್ತು ಮಧ್ಯವರ್ತಿಗಳ ಕೈವಾಡ ಹೆಚ್ಚಾಗಿದ್ದರಿಂದ ನಿಜವಾದ ರಂಗಾಸಕ್ತರು ಹಾಗೂ ಕಲಾತಂಡಗಳಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಗುತ್ತಿರಲಿಲ್ಲ.  ಹತ್ತಾರು ಕಾರ್ಯಕ್ರಮಗಳನ್ನು ಬೇರೆ ಬೇರೆ ಹೆಸರಿನಲ್ಲಿ ಕಾಯ್ದಿರಿಸಿಕೊಂಡು ಅನ್ಯರಿಗೆ ಹೆಚ್ಚಿನ ಮೊತ್ತಕ್ಕೆ ಸಭಾಂಗಣವನ್ನು ಬಿಟ್ಟುಕೊಡುವ ದಂಧೆ ನಡೆಯುತ್ತಿತ್ತು ಎಂಬ ಆರೋಪ ಕೇಳಿ ಬಂದಿತ್ತು. 

ಈ ಹಿಂದೆ ಜಾರಿಗೆ ತಂದ ಆನ್‌ಲೈನ್‌ ವ್ಯವಸ್ಥೆಯಲ್ಲಿ ಹಲವು ದೋಷಗಳಿದ್ದವು. ಈ ಸಂಬಂಧ ರಂಗಕರ್ಮಿಗಳು, ಹವ್ಯಾಸಿ ನಾಟಕಕಾರರು, ಸಾಹಿತಿಗಳು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್‌ ಅವರಿಗೆ ದೂರು ನೀಡಿದ್ದರು. ಆನ್‌ಲೈನ್‌ ವ್ಯವಸ್ಥೆಯಲ್ಲಿನ ದೋಷಗಳನ್ನು ಸರಿಪಡಿಸಿ, ಪರಿಷ್ಕೃತ ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಲು ಸಚಿವರು ಸೂಚನೆ ನೀಡಿದ್ದರು ಎಂದು ಇಲಾಖೆಯ ಮೂಲಗಳು ಹೇಳಿವೆ.

ಅಕ್ರಮಗಳೇನಿದ್ದವು: ಒಂದು ಬ್ಯಾನರ್‌ ಅಡಿ ಕಾರ್ಯಕ್ರಮ ಬುಕ್‌ ಮಾಡಿ ಇನ್ನೊಂದು ಬ್ಯಾನರ್‌ನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. 30 ದಿನಗಳ ಬುಕ್ಕಿಂಗ್‌ನಲ್ಲಿ 15 ದಿನಗಳು ಮಧ್ಯವರ್ತಿಗಳ ಪಾಲಾಗುತ್ತಿತ್ತು. ಕೆಲವು ಪ್ರಭಾವಿಗಳು ನಿಗದಿತ ದರಕ್ಕೆ ಬುಕ್‌ ಮಾಡಿ ಹೆಚ್ಚಿನ ದರಕ್ಕೆ ಕಲಾಕ್ಷೇತ್ರವನ್ನು ಬಾಡಿಗೆ ಬಿಡಲಾಗುತ್ತಿತ್ತು. ನೀರು ಮತ್ತು ವಿದ್ಯುತ್‌ ಬಳಕೆಯ ಬಗ್ಗೆ ನಿಖರತೆ ಇರುತ್ತಿರಲಿಲ್ಲ. ರಂಗ ಪರಿಕರ, ಬೆಳಕಿನ ವ್ಯವಸ್ಥೆಯ ಬಳಕೆಯ ದಾಖಲೆ ಸರ್ಕಾರಕ್ಕೆ ಲಭ್ಯವಾಗುತ್ತಿರಲಿಲ್ಲ.

ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡುವಾಗ ಆಧಾರ್‌ ಮತ್ತು ಇತರ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾಗಿರುವುದರಿಂದ ಮಧ್ಯವರ್ತಿಗಳಿಗೆ ಹೆಚ್ಚುವರಿ ಬುಕ್ಕಿಂಗ್ ಮಾಡಿಕೊಂಡು ಬೇರೆಯವರಿಗೆ ಆ ದಿನಾಂಕದಲ್ಲಿ ವೇದಿಕೆ ಬಿಟ್ಟುಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಎಲ್ಲ ಮಾಹಿತಿ ಅಪ್ಲೋಡ್‌ ಮಾಡಿ ಹಣ ಪಾವತಿಸಿದ ತಕ್ಷಣವೇ ಸಭಾಂಗಣ ಕಾಯ್ದಿರಿಸಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಕಾರ್ಯಕ್ರಮಗಳಿಗೆ ಹೆಚ್ಚುವರಿಯಾಗಿ ರಂಗಪರಿಕರ ಹಾಗೂ ಬೆಳಕಿನ ವ್ಯವಸ್ಥೆ ಬಳಸಿಕೊಂಡರೆ ಆನ್‌ಲೈನ್‌ ಮೂಲಕವೇ ಹಣ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಸರ್ಕಾರದ ನಿಯಮಗಳಿಂದ ನಿಗದಿಯಾದ ಕಾರ್ಯಕ್ರಮ ನಿಂತು ಹೋದರೆ ಹಣ ಹಿಂತಿರುಗಿಸುವ ಬದಲು ಮತ್ತೊಂದು ದಿನಾಂಕಕ್ಕೆ ಕಾರ್ಯಕ್ರಮ ಆಯೋಜಿಸುವುದಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. ಮೂರು ದಿನಗಳಿಗಿಂತಲೂ ಹೆಚ್ಚಿನ ದಿನಕ್ಕೆ ಸತತವಾಗಿ ಸಭಾಂಗಣ ಕಾಯ್ದಿರಿಸುವುದಕ್ಕೆ ಇನ್ನು ಮುಂದೆ ಅವಕಾಶ ಇಲ್ಲ ಎಂದೂ ಮೂಲಗಳು ಹೇಳಿವೆ. ಒಂದು ವೇಳೆ ಸಭಾಂಗಣ ಕಾಯ್ದಿರಿಸಿಕೊಂಡ ಸಂಸ್ಥೆಯ ಬದಲು ಬೇರೆ ಸಂಸ್ಥೆ ಕಾರ್ಯಕ್ರಮ ನಡೆಸಿದರೆ ಅಂಥ ವ್ಯಕ್ತಿ ಹಾಗೂ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲು ಇಲಾಖೆ ನಿರ್ಧರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.