ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ತಲುಪದ ಸವಲತ್ತು: ಜಿಲ್ಲಾಧಿಕಾರಿ ತರಾಟೆ

ಕಮ್ಮಸಂದ್ರ ಗ್ರಾಮದಲ್ಲಿ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’
Last Updated 20 ಮಾರ್ಚ್ 2021, 18:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧವಾ ವೇತನ, ವೃದ್ಧಾಪ್ಯ ವೇತನ ಸೌಲಭ್ಯ ಗ್ರಾಮದ ಅರ್ಧದಷ್ಟು ಫಲಾನುಭವಿಗಳಿಗೂ ತಲುಪಿಲ್ಲ ಏಕೆ ಎಂದು ಕಂದಾಯ ಇಲಾಖೆ ಅಧಿಕಾರಿಗಳನ್ನು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಶನಿವಾರ ತರಾಟೆಗೆ ತೆಗೆದುಕೊಂಡರು.

‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ಉತ್ತರ ತಾಲ್ಲೂಕಿನ ಕಮ್ಮಸಂದ್ರ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ, ‘ಗ್ರಾಮದಲ್ಲಿ 150ರಿಂದ 200 ಮನೆಗಳಿವೆ. ಕುಂದುಕೊರತೆಯ 97 ಅರ್ಜಿಗಳು ಬಂದಿವೆ. ಇವುಗಳನ್ನು ನೋಡಿದರೆ ನಿಮ್ಮ ಕಾರ್ಯವೈಖರಿ ಅರ್ಥವಾಗುತ್ತದೆ. ಇವುಗಳ ವಿಲೇವಾರಿಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.

‘ಮನೆ ಮನೆಗೆ ಅಥವಾ ಬೀದಿಗಳಿಗೆ ತೆರಳಿ ಸವಲತ್ತುಗಳ ಬಗ್ಗೆ ತಿಳಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆಯೇ, ಗ್ರಾಮಸ್ಥರಿಗೆ ಸವಲತ್ತು ತಲುಪಿಸಿರುವ ಬಗ್ಗೆ ಅಂಕಿ–ಅಂಶ ತಿಳಿಸಿ’ ಎಂದು ಪ್ರಶ್ನಿಸಿದರು.

ಕದರಹಳ್ಳಿಯಲ್ಲಿ ನರೇಗಾ ಅಡಿಯಲ್ಲಿ ಸ್ಮಶಾನ ನಿರ್ಮಿಸಲು ಜಾಗ ನೀಡಬೇಕು. ಕಮ್ಮಸಂದ್ರದಲ್ಲಿ ನರೇಗಾ ಯೋಜನೆಯಡಿ ಆವರಣ ಗೋಡೆ ನಿರ್ಮಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಬೇಕು ಎಂದು ತಹಶೀಲ್ದಾರ್‌ಗೆ ಸೂಚನೆ ನೀಡಿದರು.

ಪಶು ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಒದಗಿಸುವಂತೆ ಗ್ರಾಮಸ್ಥರು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಸೂಕ್ತ ಜಾಗ ಗುರುತಿಸಿ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

‘ರೈತರು ತಮ್ಮ ತಾಕುಗಳ ಬಗ್ಗೆ ಫ್ರೂಟ್ಸ್ ಪೊರ್ಟಲ್‌ನಲ್ಲಿ ನೋಂದಾಯಿಸಲು ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರ ಜೋಡಣೆ ಮಾಡಿಸಿಕೊಳ್ಳಬೇಕು. ಅದಕ್ಕೆ ಬೇಕಿರುವ ಎಲ್ಲಾ ನೆರವನ್ನೂ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮದ ಕೆಲವರಿಗೆ ಭಾಗ್ಯಲಕ್ಷ್ಮೀ ಬಾಂಡ್‌ಗಳನ್ನು ವಿತರಿಸಲಾಯಿತು.

ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ.ಎ. ಶ್ರೀನಿವಾಸ್, ‌ಭೂದಾಖಲೆಗಳ ಉಪ ನಿರ್ದೇಶಕಿ ಕುಸುಮಾ, ಕೃಷಿ ಜಂಟಿ ನಿರ್ದೇಶಕ ಜಯಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ, ಉತ್ತರ ತಾಲ್ಲೂಕಿನ ತಹಸೀಲ್ದಾರ್ ಬಾಲಕೃಷ್ಣ ಇದ್ದರು.

ಹಸಿರು ವಲಯದಲ್ಲಿ ನಿವೇಶನ: ತಡೆಯಲು ಸೂಚನೆ

‘ಹಸಿರು ವಲಯಕ್ಕೆ ಮೀಸಲಿಟ್ಟ ಜಾಗದಲ್ಲಿ ಅಕ್ರಮ ವಸತಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ಅಮಾಯಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಇದನ್ನು ತಡೆಯಲು ಕೈಗೊಂಡಿರುವ ಕ್ರಮಗಳೇನು’ ಎಂದು ಜಿಲ್ಲಾಧಿಕಾರಿ ಕೇಳಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿಯೊಬ್ಬರು, ‘ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ’ ಎಂದರು. ‘ದೂರು ಕೊಟ್ಟು ಸುಮ್ಮನಾದರೆ ಸಾಕೇ, ಈ ರೀತಿಯ ಉತ್ತರವನ್ನು ನಾನು ಸಹಿಸುವುದಿಲ್ಲ. ಅಮಾಯಕರಿಗೆ ಅನ್ಯಾಯವಾಗದಂತೆ ತಡೆಯಬೇಕು’ ಎಂದು ತಾಕೀತು ಮಾಡಿದರು.

ಲಕ್ಷ್ಮೀಪುರ ಗ್ರಾಮ ಪಂಚಾಯತಿ ಸುತ್ತಮುತ್ತ ಅಕ್ರಮ ಬಡಾವಣೆ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು. ಇಡೀ ಜೀವಮಾನ ದುಡಿದು ಮಾಡಿರುವ ಉಳಿತಾಯವನ್ನು ಹೂಡಿ ಮೋಸ ಹೋಗುವುದನ್ನು ತಪ್ಪಿಸಬೇಕು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

ಸಮಸ್ಯೆಗಳ ಪಟ್ಟಿ ನೀಡಿದ ಗ್ರಾಮಸ್ಥರು

ಯಲಹಂಕ: 60 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಭೂಮಿಗೆ ಪೋಡಿ ಆಗಿಲ್ಲ, ನೆನಗುದಿಗೆ ಬಿದ್ದಿರುವ ರೈಲ್ವೆ ಸುರಂಗ ಮಾರ್ಗ, ಇ–ಖಾತಾ ಬಾಕಿ ಸೇರಿ ಹಲವು ಸಮಸ್ಯೆಗಳ ಪಟ್ಟಿಯನ್ನು ಗ್ರಾಮಸ್ಥರು ಜಾಲಾ ಹೋಬಳಿ ಗಡೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ‘ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ನೀಡಿದರು.

ಸರ್ಕಾರಿ ಜಾಗದಲ್ಲಿ ಜೀವನೋಪಾಯಕ್ಕಾಗಿ ಉಳುಮೆ ಮಾಡಿಕೊಂಡಿದ್ದವರಿಗೆ ಸಾಗುವಳಿ ಚೀಟಿ, ಪಹಣೆ ನೀಡಿದ್ದು, ಪೋಡಿ ಮಾಡಿಕೊಡುವ ಬಗ್ಗೆ ದಾಖಲೆಗಳ ನೈಜತೆ ಪರಿಶೀಲಿಸಲು ಜಿಲ್ಲಾಧಿಕಾರಿಗಳ ಸಮಿತಿಗೆ ಸಲ್ಲಿಸಿ ವಿಲೇವಾರಿ ಮಾಡಲಾಗುವುದು ಎಂದು ಉಪವಿಭಾಗಾಧಿಕಾರಿ ಕೆ.ರಂಗನಾಥ್ ತಿಳಿಸಿದರು.

ಶಾಸಕ ಕೃಷ್ಣಬೈರೇಗೌಡ, ‘20 ವರ್ಷಗಳಿಂದ ಸರ್ಕಾರಿ ಜಾಗಗಳಲ್ಲಿ ಮನೆ ಕಟ್ಟಿಕೊಂಡಿರುವ ಬಡಜನರಿಗೆ ಹಕ್ಕುಪತ್ರ ಕೊಡುವುದನ್ನು ನಿಲ್ಲಿಸಲಾಗಿದೆ. ದುರುಪಯೋಗದ ಕಾರಣ ನೀಡಿ ಶೇ 90ರಷ್ಟು ಜನರಿಗೆ ಅನನುಕೂಲ ಮಾಡಲಾಗುತ್ತಿದೆ. ಹಣ ಕೊಟ್ಟವರಿಗೆ ಅಧಿಕಾರಿಗಳು ಹಕ್ಕುಪತ್ರ ನೀಡುತ್ತಿದ್ದಾರೆ’ ಎಂದು ದೂರಿದರು.

‘ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಸರ್ಕಾರಿ ಜಾಗ ಖಾಸಗಿಯವರ ಪಾಲಾಗುತ್ತಿದೆ. ಕೂಡಲೇ ಅನ್ಯಾಯ ತಡೆಯದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ನಗರ ಜಿಲ್ಲಾಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ, ಸದಸ್ಯ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಂಸವೇಣಿ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ಪ್ರಕಾಶ್, ಉಪಾಧ್ಯಕ್ಷ ಕುದುರೆಗೆರೆ ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT