ಶನಿವಾರ, ಸೆಪ್ಟೆಂಬರ್ 18, 2021
30 °C

ಮುಖ್ಯ ರಸ್ತೆ ಗುಂಡಿ ಮುಚ್ಚಲು ಸೆ.20ರ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಮುಖ್ಯ ರಸ್ತೆಗಳ ಗುಂಡಿ ಮುಚ್ಚಲು ಇದೇ 20ರ ಹಾಗೂ ವಾರ್ಡ್‌ ರಸ್ತೆಗಳ ಗುಂಡಿ ಮುಚ್ಚಲು ಇದೇ 30ರ ಗಡುವನ್ನು ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ ನಿಗದಿಪಡಿಸಿದ್ದಾರೆ.

ನಗರದ ರಸ್ತೆಗಳು ಅಧ್ವಾನ ಸ್ಥಿತಿ ತಲುಪಿವೆ. ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಚಲಾಯಿಸಲು ಚಾಲಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದಿದ್ದರಿಂದ ಸಚಿವರು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಅಧಿಕಾರಿಗಳ ಸಭೆಯನ್ನು  ಸೋಮವಾರ ನಡೆಸಿದರು.

ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ‘3-4 ತಿಂಗಳುಗಳಿಂದ ನಗರದಲ್ಲಿ ಮಳೆ ಸುರಿಯುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮುಖ್ಯ ರಸ್ತೆಗಳಲ್ಲಿ ಹಾಗೂ ವಾರ್ಡ್‌ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಒಟ್ಟು 2,653 ರಸ್ತೆಗಳು ಹಾಳಾಗಿವೆ. ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಸೂಚನೆ ನೀಡಿದ್ದೇನೆ’ ಎಂದರು.

‘ಬಿಬಿಎಂಪಿಯು ಕಣ್ಣೂರಿನಲ್ಲಿ ಸ್ಥಾಪಿಸಿರುವ ಘಟಕದಲ್ಲಿ ನಿತ್ಯ 20 ಲೋಡ್‌ಗಳಷ್ಟು ಜಲ್ಲಿ– ಬಿಸಿ ಡಾಂಬರು ಮಿಶ್ರಣ ಸಿದ್ಧವಾಗುತ್ತದೆ. ಇದನ್ನು ಎಲ್ಲ ವಲಯಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಜಲ್ಲಿ– ಡಾಂಬರು ಮಿಶ್ರಣ ಪೂರೈಕೆಯಾಗುವ ಕಡೆ ಸ್ಥಳೀಯ ಎಂಜಿನಿಯರ್‌ಗಳು ಕಡ್ಡಾಯವಾಗಿ ಹಾಜರಿರಬೇಕು. ರಸ್ತೆ ಗುಂಡಿಯನ್ನು ಶುಚಿಗೊಳಿಸಿ, ಅದರಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸೂಚನೆ ನೀಡಿದರು.

‘ಗುಂಡಿ ಮುಚ್ಚುವ ಕಾರ್ಯ ಯಾವುದೇ ಕಾರಣಕ್ಕೂ ತಡವಾಗಬಾರದು. ಇದೇ 20ರ ನಂತರ ಮಳೆ ಬಂದು ಗುಂಡಿ ಬಿದ್ದರೆ ಅದನ್ನೂ ತಕ್ಷಣವೇ ಮುಚ್ಚಬೇಕು. ದುರಸ್ತಿ ಮಾಡಿದ ರಸ್ತೆಯ ಡಾಂಬರು ಮರುದಿನವೇ ಕಿತ್ತುಹೋಗಬಾರದು. ಗಡುವಿನೊಳಗೆ ಗುಂಡಿಗಳನ್ನು, ಮುಚ್ಚದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ’ ಎಂದು ಎಚ್ಚರಿಸಿದರು.

ನಗರದ ರಸ್ತೆಗಳು ಮತ್ತೆ ಬಾಯ್ದೆರೆದಿರುವ ಕುರಿತು ‘ಪ್ರಜಾವಾಣಿ’ ಸೋಮವಾರದ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು.

ಕಾಮಗಾರಿ ವಿವರಕ್ಕೆ ಜಿಯೊ ಸ್ಟ್ಯಾಂಪ್‌ ಆ್ಯಪ್‌

‘ರಸ್ತೆ ಗುಂಡಿ ಮುಚ್ಚಿದ ಕುರಿತು ಅಕ್ರಮವಾಗಿ ಬಿಲ್‌ ಮಾಡುವುದಕ್ಕೆ ಅವಕಾಶ ಇಲ್ಲದಂತೆ ಮಾಡಲು ಜಿಯೊ ಸ್ಟ್ಯಾಂಪ್‌ ಆ್ಯಪ್‌ ರೂಪಿಸಿದ್ದೇವೆ. ಗುಂಡಿ ಮುಚ್ಚುತ್ತಿದ್ದಂತೆಯೇ ಅದರ ವಿವರಗಳು ಚಿತ್ರ ಸಮೇತ ಈ ಆ್ಯಪ್‌ನಲ್ಲಿ ಅಪ್‌ಲೋಡ್‌ ಆಗಲಿದೆ. ಜಲ್ಲಿ– ಬಿಸಿ ಡಾಂಬರು ಮಿಶ್ರಣ ಘಟಕ ಹೊತ್ತ ಲಾರಿ ಎಲ್ಲೆಲ್ಲ ಸಂಚರಿಸಿದೆ, ಎಲ್ಲಿ ಕೆಲಸ ಪ್ರಗತಿಯಲ್ಲಿದೆ ಎಂಬ ವಿವರಗಳೂ ಈ ಆ್ಯಪ್‌ನಲ್ಲಿ ಲಭ್ಯ’ ಎಂದು ಅಶೋಕ ಮಾಹಿತಿ ನೀಡಿದರು.

‘ಈ ಆ್ಯಪ್ ಮೂಲಕ ಕಾಮಗಾರಿ ನಡೆಯುವ ಸ್ಥಳದ ಮಾಹಿತಿ ಮೇಲಧಿಕಾರಿಗಳಿಗೆ ನಿಖರವಾಗಿ ತಿಳಿಯುತ್ತದೆ. ಸಾರ್ವಜನಿಕರೂ ಈ ವಿವರಗಳನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು. ಜಿಯೊ ಸ್ಟ್ಯಾಂಪಿಂಗ್‌ ಆ್ಯಪ್‌ ಬಳಕೆಯಿಂದಾಗಿ ವಂಚನೆಗೆ ಅವಕಾಶವೇ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಸಮನ್ವಯ ಸಭೆ ಶೀಘ್ರ

‘ಜಲಮಂಡಳಿಯವರು ನೀರಿನ ಕೊಳವೆ ದುರಸ್ತಿ ಮಾಡಿದ ಕಡೆ ರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟು ಹೋಗಿದ್ದಾರೆ. ಬೆಸ್ಕಾಂನವರು ನೆಲದಡಿ ಕೇಬಲ್ ಅಳವಡಿಸಲು ರಸ್ತೆ ಅಗೆಯುತ್ತಿದ್ದಾರೆ. ಇವುಗಳನ್ನು ಸರಿಯಾಗಿ ಮುಚ್ಚದೇ ಸಮಸ್ಯೆ ಎದುರಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಬೆಸ್ಕಾಂ, ಜಲಮಂಡಳಿ ಹಾಗೂ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸುತ್ತೇನೆ’ ಎಂದು ಅಶೋಕ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು