ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದಿ ಬದಲು ಕನ್ನಡದಲ್ಲಿ ವ್ಯವಹರಿಸಿ: ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಸಂಘಟನೆ

Published : 13 ಸೆಪ್ಟೆಂಬರ್ 2024, 21:20 IST
Last Updated : 13 ಸೆಪ್ಟೆಂಬರ್ 2024, 21:20 IST
ಫಾಲೋ ಮಾಡಿ
Comments

ಬೆಂಗಳೂರು: ‘ಪತ್ರ ವ್ಯವಹಾರ, ನಾಮಫಲಕ ಸೇರಿ ವಿವಿಧೆಡೆ ಹಿಂದಿ ಬದಲು ಕನ್ನಡ ಅಳವಡಿಸಿಕೊಳ್ಳಬೇಕು. ಕನ್ನಡ ಭಾಷೆ ತಿಳಿದವರು ಇಲ್ಲಿ ಕೆಲಸ ಮಾಡಬೇಕು’ ಎಂದು ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಧಾನ ವ್ಯವಸ್ಥಾಪಕರಿಗೆ ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಸಂಘಟನೆ ಆಗ್ರಹಿಸಿದೆ. 

ಸಂಘಟನೆಯ ಸದಸ್ಯರು ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಬ್ಯಾಂಕ್‌ ಕಚೇರಿ ಮುಂದೆ ಶುಕ್ರವಾರ ಪ್ರತಿಭಟಿಸಿ, ಬ್ಯಾಂಕ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. 

‘ಇಲ್ಲಿ ವ್ಯವಹಾರ ನಡೆಸುವಾಗ ಕನ್ನಡ ಭಾಷೆ ಬಳಕೆಗೆ ಮೊದಲ ಆದ್ಯತೆ ನೀಡಬೇಕು. ಆದರೆ, ಹಿಂದಿ ಭಾಷೆಯನ್ನು ಒತ್ತಾಯಪೂರ್ವಕವಾಗಿ ಕನ್ನಡಿಗರ ಮೇಲೆ ಹೇರಲಾಗುತ್ತಿದೆ. ಈ ಮೂಲಕ ಕನ್ನಡಿಗರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರಲಾಗುತ್ತಿದೆ. ಹಿಂದಿ ಹೇರಿಕೆಯನ್ನು ಕೂಡಲೇ ನಿಲ್ಲಿಸಿ, ಬ್ಯಾಂಕಿನ ಡಿಜಿಟಲ್ ನಾಮಫಲಕಗಳು, ಎಟಿಎಂ ಯಂತ್ರಗಳು, ಅರ್ಜಿ ಪ್ರತಿಗಳು ಎಲ್ಲೆಡೆ ಕನ್ನಡಕ್ಕೆ ಆದ್ಯತೆ ನೀಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

‘ಕನ್ನಡ ಭಾಷೆ ತಿಳಿದ ಅಧಿಕಾರಿಗಳು, ಸಿಬ್ಬಂದಿಯನ್ನು ಇಲ್ಲಿನ ಶಾಖೆಗಳಲ್ಲಿ ನಿಯೋಜಿಸಬೇಕು. ಹಿಂದಿ ದಿವಸ್ ಆಚರಣೆ ಸೇರಿ ಹಿಂದಿ ಕಲಿಕೆಗೆ ಪ್ರೋತ್ಸಾಹ ನೀಡುವ ಚಟುವಟಿಕೆಗಳನ್ನು ನಡೆಸಬಾರದು’ ಎಂದು ಸಂಘಟನೆ ಸಂಚಾಲಕ ಪಾರ್ವತೀಶ ಬಿಳಿದಾಳೆ, ಕನ್ನಡ ಪರ ಹೋರಾಟಗಾರರಾದ ಸಾ.ರಾ. ಗೋವಿಂದು, ವ.ಚ. ಚನ್ನೇಗೌಡ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

ಇಂದು ಕರವೇ ಪ್ರತಿಭಟನೆ

ಹಿಂದಿ ದಿವಸ ಆಚರಣೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯು (ಕರವೇ) ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.  ‘ಭಾರತ ಒಕ್ಕೂಟ ಸರ್ಕಾರವು ಪ್ರತಿ ವರ್ಷ ಸೆ. 14ರಂದು ಹಿಂದಿ ದಿವಸ ಆಚರಣೆಯ ಹೆಸರಲ್ಲಿ ಅನ್ಯಭಾಷಿಕರ ಮೇಲೆ ಹಿಂದಿ ಭಾಷೆ ಹೇರುವ ಹುನ್ನಾರ ನಡೆಸುತ್ತ ಬಂದಿದೆ. ಇದು ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ’ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT