ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ. 14-15ಕ್ಕೆ ‘ಒಂದು ದೇಶ- ಒಂದು ಚುನಾವಣೆ’ ಚರ್ಚೆ

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ
Last Updated 28 ನವೆಂಬರ್ 2020, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಡಿ. 7ರಿಂದ 15ರವರೆಗೆ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದ ಕೊನೆಯ ಎರಡು ದಿನ ‘ಒಂದು ದೇಶ- ಒಂದು ಚುನಾವಣೆ’ ವಿಷಯದ ಕುರಿತು ಚರ್ಚೆ ನಡೆಯಲಿದೆ’ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಗುಜರಾತಿನ ಕೆವಾಡಿಯಾದಲ್ಲಿ ನವೆಂಬರ್ 25 ಮತ್ತು 26ರಂದು ನಡೆದಅಖಿಲ ಭಾರತ ಪೀಠಾಸೀನ ಅಧಿಕಾರಿಗಳ 80ನೇ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ, ‘ಒಂದು ದೇಶ- ಒಂದು ಚುನಾವಣೆ’ ಕುರಿತು ಪ್ರಸ್ತಾಪಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ, ದೇಶದಲ್ಲೇ ಮೊದಲ ಬಾರಿಗೆ ಈ ವಿಷಯವನ್ನು ಸದನದಲ್ಲಿ ಸಮಗ್ರ ವಾಗಿ ಚರ್ಚಿಸಿ ಚಿಂತನ-ಮಂಥನ ನಡೆಸಲು ಉದ್ದೇಶಿಸಲಾಗಿದೆ’ ಎಂದರು.

‘ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಜೊತೆ ಈಗಾಗಲೇ ಚರ್ಚಿಸಿದ್ದೇನೆ’ ಎಂದರು.

‘ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಒಳಗೊಂಡಂತೆ ಎಲ್ಲಾ ಕಾರ್ಯಕಲಾಪಗಳು ಇರಲಿದೆ. ಹತ್ತು ಮಸೂದೆಗಳು ಮಂಡನೆಗೆ ಸಿದ್ಧವಿದೆ. ಕೊರೊನಾ ಕಾರಣ ಈ ಹಿಂದೆ ಕೈಗೊಂಡ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಆದರೆ, ಕಲಾಪದಲ್ಲಿ ಭಾಗವಹಿಸುವ ಸದಸ್ಯರು, ಕಲಾಪದ ಚಟುವಟಿಕೆಗೆ ನೆರವಾಗುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಾಧ್ಯಮದವರು ಮತ್ತೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ಬರಬೇಕೆ ಎಂಬ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದರು.

‘ಕಳೆದ ಅಧಿವೇಶನದಲ್ಲಿ ಸಂವಿಧಾನ ಕುರಿತಂತೆ ಎರಡು ದಿನಗಳ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಚರ್ಚೆಯಲ್ಲಿ 50ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡು ಭಾರತೀಯ ಸಂವಿಧಾನದ ವಿವಿಧ ಮಜಲುಗಳತ್ತ ಬೆಳಕು ಚೆಲ್ಲಿದ್ದರು. ಸದಸ್ಯರ ಅಭಿಪ್ರಾಯಗಳ ಮುಖ್ಯಾಂಶಗಳನ್ನು ಕ್ರೋಡೀಕರಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದ ಎಲ್ಲ ಗಣ್ಯರಿಗೂ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT