ಮಂಗಳವಾರ, ಜುಲೈ 5, 2022
22 °C

ಆರ್‌ಎಸ್‌ಎಸ್‌ ಕಚೇರಿಯಲ್ಲಿ ಚರ್ಚಿಸಿ ನಿರ್ಧಾರ: ರಾಮಲಿಂಗಾ ರೆಡ್ಡಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ವಿಚಾರ ಚಾಮರಾಜಪೇಟೆಯಲ್ಲಿರುವ ಆರ್‌ಎಸ್‌ಎಸ್‌ ಕಚೇರಿಯಲ್ಲಿ ನಿರ್ಧಾರವಾದ ಬಳಿಕ ವಿಧಾನಸೌಧಕ್ಕೆ ಬರುತ್ತದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಬಿಬಿಎಂಪಿ ಚುನಾವಣೆ ಏಪ್ರಿಲ್‌ನಲ್ಲಿ ನಡೆಯುವುದು ಖಚಿತ. ನ್ಯಾಯಾಲಯಕ್ಕೆ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆಯೊ ಇಲ್ಲವೋ ಗೊತ್ತಿಲ್ಲ. ಆದರೆ, ಚಾಮರಾಜಪೇಟೆಯ ಬಿಜೆಪಿ ಶಕ್ತಿ ಕೇಂದ್ರದಲ್ಲಿ ನಾಯಕರನ್ನು ಕರೆದು ಚರ್ಚಿಸಿ, ಹಸಿರು ನಿಶಾನೆ ಕೊಟ್ಟಿದ್ದಾರೆ’ ಎಂದರು.

‘ಕ್ಷೇತ್ರಗಳ ಮರು ವಿಂಗಡಣೆಯನ್ನು ಬಿಬಿಎಂಪಿ ಮುಖ್ಯ ಆಯುಕ್ತರು ಮಾಡಬೇಕಿತ್ತು. ಆದರೆ, ಬೇರೆಯವರ ಕಚೇರಿಯಲ್ಲಿ ಮಾಡಿ ಅದನ್ನು ತಂದಿಡಲು ಪ್ರಯತ್ನಿಸುತ್ತಿದ್ದಾರೆ. ಕ್ಷೇತ್ರ ವಿಂಗಡಣೆ ಮನಸ್ಸಿಗೆ ಬಂದಂತೆ ಮಾಡಿದ್ದಾರೆ. 243 ವಾರ್ಡ್ ಮಾಡಲು ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆ ನೀಡಲಾಗಿದೆ. ಇದನ್ನು ಅವರಿಗೆ ಅನುಕೂಲವಾಗುವಂತೆ ಅವೈಜ್ಞಾನಿಕವಾಗಿ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಉಚಿತ ಆಹಾರ ಕೊಡಿ: ‘ಸೋಂಕಿತರ ಪೈಕಿ ಹೆಚ್ಚಿನವರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದಾರೆ. ಆದರೆ, ಅವರಿಗೆ ವೈದ್ಯಕೀಯ ಕಿಟ್ ಸರಿಯಾಗಿ ತಲುಪುತ್ತಿಲ್ಲ. ಹೀಗಾಗಿ ಅವರಿಗೆ ಎರಡು ತಿಂಗಳ ಆಹಾರ ಪದಾರ್ಥ ಉಚಿವಾಗಿ ನೀಡಬೇಕು. ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಚಾಲಕರಿಗೆ ಈ ಬಾರಿಯಾದರೂ ಸರಿಯಾಗಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘ಕೋವಿಡ್‌ ಮೊದಲ ಅಲೆಯಲ್ಲಿ ಜನರಿಗೆ ಸರ್ಕಾರ ಸರಿಯಾಗಿ ಸ್ಪಂದಿಸಲಿಲ್ಲ. ಎರಡನೇ ಅಲೆಯಲ್ಲಿ ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಹೆಚ್ಚಿನ ಸಾವು ಸಂಭವಿಸಿತ್ತು. ಐಸಿಎಂಆರ್ ಪ್ರಕಾರ ವಿವಿಧ ರೀತಿಯ 40 ಕಾಯಿಲೆ ಇರುವವರು ಕೋವಿಡ್ ಸೋಂಕಿನಿಂದ ಸತ್ತರೂ, ಅದನ್ನು ಕೋವಿಡ್ ಸಾವು ಎಂದು ಪರಿಗಣಿಸುವುದಿಲ್ಲ. ಹೀಗಾಗಿ ಕೇವಲ 37 ಸಾವಿರ ಜನ ಮಾತ್ರ ಕೋವಿಡ್‌ನಿಂದ ಸತ್ತಿದ್ದಾರೆ ಎಂದು ಅಂಕಿ ಅಂಶ ತೋರಿಸುತ್ತಿದ್ದಾರೆ. ಆ ಜನರಲ್ಲಿ ಶೇ 5ರಷ್ಟು ಜನರಿಗೆ ಮಾತ್ರ ಪರಿಹಾರ ಕೊಡುತ್ತಾರೆ. ವಾಸ್ತವದಲ್ಲಿ ಕೋವಿಡ್‌ನಿಂದ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ’ ಎಂದರು.

ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಸಹ ಸಂಚಾಲಕರಾದ ರಾಮಚಂದ್ರಪ್ಪ, ಪ್ರಚಾರ ಸಮಿತಿ ಮುಖ್ಯಸ್ಥ ಮನೋಹರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು