ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಚೆಕ್‌ನಲ್ಲಿ ₹ 4 ಲಕ್ಷ ಲಂಚ: ಕಂದಾಯ ನಿರೀಕ್ಷಕ ಬಲೆಗೆ

ಪೋಡಿ, ಖಾತೆಗೆ ₹28 ಲಕ್ಷಕ್ಕೆ ಬೇಡಿಕೆ-ಚಾಲಕನ ಮನೆಯಲ್ಲಿ ₹9 ಲಕ್ಷ ಜಪ್ತಿ
Published 9 ನವೆಂಬರ್ 2023, 16:15 IST
Last Updated 9 ನವೆಂಬರ್ 2023, 16:15 IST
ಅಕ್ಷರ ಗಾತ್ರ

ಬೆಂಗಳೂರು: ಜಮೀನಿನ ಪೋಡಿ ಮತ್ತು ಖಾತೆ ಮಾಡಿಕೊಡಲು ₹ 4 ಲಕ್ಷ ಚೆಕ್ ಹಾಗೂ ₹ 7.5 ಲಕ್ಷ ನಗದು ಪಡೆದಿದ್ದ ಆರೋಪದಡಿ ಬೆಂಗಳೂರು ನಗರ ಜಿಲ್ಲೆಯ ದಾಸನಪುರ ಹೋಬಳಿ ಮಾದಾವರ ವೃತ್ತದ ಕಂದಾಯ ನಿರೀಕ್ಷಕ ಎಂ. ವಸಂತ್‌ಕುಮಾರ್ ಹಾಗೂ ಅವರ ಕಾರು ಚಾಲಕ ಬಿ. ತ್ಯಾಗರಾಜ್‌ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

‘ಸುಂಕದಕಟ್ಟೆ ನಿವಾಸಿಯೊಬ್ಬರು ತಮ್ಮ ಕೃಷಿ ಜಮೀನು ಖಾತೆ ಪೋಡಿ ಮಾಡಿಸಲು ಕಂದಾಯ ನಿರೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಲೇವಾರಿ ಮಾಡಬೇಕಾದರೆ  ₹ 28 ಲಕ್ಷ ಲಂಚ ನೀಡಬೇಕೆಂದು ವಸಂತಕುಮಾರ್‌ ಬೇಡಿಕೆ ಇರಿಸಿದ್ದರು. ಜೊತೆಗೆ, ಮುಂಗಡವಾಗಿ ಮೊದಲ ಕಂತಿನಲ್ಲಿ ₹ 7.50 ಲಕ್ಷ ಪಡೆದಿದ್ದರು’ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ಹೇಳಿವೆ.

‘ಕಂದಾಯ ನಿರೀಕ್ಷಕನ ಲಂಚದಿಂದ ಬೇಸತ್ತ ನಿವಾಸಿ ಇತ್ತೀಚೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು, ಕಾರ್ಯಾಚರಣೆ ಆರಂಭಿಸಲಾಗಿತ್ತು. ರಾಜಾಜಿನಗರದ ಹೋಟೆಲೊಂದರಲ್ಲಿ ಬುಧವಾರ ಎರಡನೇ ಕಂತಿನಲ್ಲಿ ₹ 4 ಲಕ್ಷ ಮೊತ್ತದ ಚೆಕ್‌ ಪಡೆಯುವಾಗಲೇ ವಸಂತ್‌ಕುಮಾರ್ ಹಾಗೂ ಅವರ ಚಾಲಕನನ್ನು ಸೆರೆ ಹಿಡಿಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘₹ 28 ಲಕ್ಷ ಲಂಚದ ಪೈಕಿ ₹ 4 ಲಕ್ಷವನ್ನು ಕಂದಾಯ ನಿರೀಕ್ಷಕ ವಸಂತ್‌ಕುಮಾರ್ ಚೆಕ್‌ ರೂಪದಲ್ಲಿ ಪಡೆಯಲು ಮುಂದಾಗಿದ್ದರು. ಇತ್ತೀಚಿನ ದಿನಗಳಲ್ಲಿ ಚೆಕ್ ರೂಪದಲ್ಲಿ ಲಂಚ ಪಡೆಯುತ್ತಿದ್ದ ಮೊದಲ ಪ್ರಕರಣ ಇದಾಗಿದೆ’ ಎಂದು ಹೇಳಿವೆ.

ಚಾಲಕನ ಮನೆಯಲ್ಲಿ ₹ 9 ಲಕ್ಷ ಜಪ್ತಿ: ‘ಚಾಲಕ ತ್ಯಾಗರಾಜ್ ಮನೆಯಲ್ಲಿ ಶೋಧ ನಡೆಸಲಾಗಿದೆ. ಈ ವೇಳೆ ₹ 9 ಲಕ್ಷ ನಗದು ಹಾಗೂ ವಿಲೇವಾರಿಯಾಗದ ಕಡತಗಳು ಸಿಕ್ಕಿವೆ’ ಎಂದು ಮೂಲಗಳು ತಿಳಿಸಿವೆ. ‘ಕಂದಾಯ ನಿರೀಕ್ಷಕ ವಸಂತ್‌ಕುಮಾರ್ ಅವರಿಗೆ ಸೇರಿದ್ದ ಹಣ, ಚಾಲಕನ ಮನೆಯಲ್ಲಿತ್ತೆಂಬ ಮಾಹಿತಿ ಇದೆ. ವಿಚಾರಣೆ ಬಳಿಕ ಹಣದ ಮೂಲ ದೃಢಪಡಲಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT