ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ: ಹಣ್ಣುಗಳಿಗೆ ಹೆಚ್ಚಿದ ಬೇಡಿಕೆ

Last Updated 24 ಮಾರ್ಚ್ 2021, 2:13 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆ ಆರಂಭಗೊಂಡಿರುವುದರಿಂದ ಒಂದು ವಾರದಿಂದ ಹಣ್ಣಿನ ದರಗಳು ದಿಢೀರ್ ಏರಿಕೆ ಕಂಡಿವೆ. ಇನ್ನೊಂದು ವಾರದಲ್ಲಿ ಹಣ್ಣಿನ ದರಗಳು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

ಬೇಸಿಗೆಯಲ್ಲಿ ಜನರು ಹಣ್ಣುಗಳನ್ನು ಹೆಚ್ಚು ಸೇವಿಸುತ್ತಾರೆ. ಹಣ್ಣಿನ ನೇರ ಸೇವನೆಗಿಂತ ಹಣ್ಣುಗಳಿಂದ ತಯಾರಿಸುವ ಪಾನೀಯ ಸೇವನೆಗೆ ಮಳಿಗೆಗಳ ಎದುರು ಜನರ ದಂಡೇ ಸೇರಿರುತ್ತದೆ.

ಮಧ್ಯಾಹ್ನದ ಸುಡುಬಿಸಿಲಿಗೆ ಆಹಾರದ ಬದಲು ಹಣ್ಣಿನ ಸಲಾಡ್‌ ಸವಿಯುವವರೂ ಹೆಚ್ಚು. ಇದರಿಂದ ಬೇಸಿಗೆ ಬಂತೆಂದರೆ ಹಣ್ಣಿನ ವ್ಯಾಪಾರ ಗರಿಗೆರದರುತ್ತದೆ. ಬೇಸಿಗೆ ಇರುವ ಸುಮಾರು ನಾಲ್ಕು ತಿಂಗಳವರೆಗೆ ಹಣ್ಣುಗಳಿಗೆ ಬೇಡಿಕೆ ಇರುತ್ತದೆ.

‘ಹಬ್ಬಗಳನ್ನು ಹೊರತುಪಡಿಸಿದರೆ, ಹಣ್ಣುಗಳಿಗೆ ಬೇಡಿಕೆ ಬರುವುದು ಬೇಸಿಗೆಯಲ್ಲಿ ಮಾತ್ರ. ಹಬ್ಬದ ನಡುವೆ 2–3 ದಿನ ಮಾತ್ರ ಹಣ್ಣಿನ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆ. ಹಾಗಾಗಿ, ವರ್ಷದಲ್ಲಿ ಹಣ್ಣಿನ ವ್ಯಾಪಾರಕ್ಕೆಬೇಸಿಗೆ ಸೂಕ್ತಕಾಲ’ ಎಂದು ಸಿಂಗೇನ ಅಗ್ರಹಾರದ ಎಪಿಎಂಸಿ ಮಾರುಕಟ್ಟೆಯ ಹಣ್ಣಿನ ಸಗಟು ವರ್ತಕ ಸೈಯದ್ ಖಾಜಿಂ ಅಗಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ವಾರದಿಂದ ಹಣ್ಣುಗಳ ದರ ದಿಢೀರ್ ಏರಿದೆ. ಕಲ್ಲಂಗಡಿ, ದಾಳಿಂಬೆ, ಕಿತ್ತಳೆ, ಮೂಸಂಬಿ, ಸಪೋಟ ಬೇಸಿಗೆಯಲ್ಲಿ ಹೆಚ್ಚು ಖರೀದಿಯಾಗುವ ಹಣ್ಣುಗಳು. ಮಾವು ಈಗ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ವಿವಿಧ ತಳಿಗಳ ಮಾವು ಪ್ರತಿ ಕೆ.ಜಿಗೆ ₹60ರಿಂದ ₹150ರವರೆಗೆ ಮಾರಾಟವಾಗುತ್ತಿದೆ. 10 ದಿನಗಳ ಹಿಂದೆ ಕಲ್ಲಂಗಡಿ ಹಾಗೂ ಪಪ್ಪಾಯ ಸಗಟು ದರ ಪ್ರತಿ ಕೆ.ಜಿಗೆ ₹8 ಇತ್ತು. ಈಗ ಎರಡೂ ಹಣ್ಣುಗಳ ದರ ಹೆಚ್ಚಿದೆ’ ಎಂದು ಮಾಹಿತಿ ನೀಡಿದರು.

‘ಬೇಸಿಗೆ ಆರಂಭದಲ್ಲೇ ದರ ಹೆಚ್ಚಳ ಕಂಡಿದೆ. ಆದರೆ, ಮಾರುಕಟ್ಟೆಯಲ್ಲಿ ಈಗ ಬೇಡಿಕೆ ಇರುವಷ್ಟು ಹಣ್ಣುಗಳು ಪೂರೈಕೆಯಾಗುತ್ತಿಲ್ಲ. ಇದರಿಂದ ಮುಂದಿನ ಎರಡು ವಾರಗಳಲ್ಲಿ ಹಣ್ಣಿನ ದರಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎಂದೂ ಹೇಳಿದರು.

ತರಕಾರಿ ದರಗಳಲ್ಲಿ ಏರಿಳಿತ: ಎರಡು ವಾರದಿಂದ ತರಕಾರಿ ದರಗಳಲ್ಲಿ ಏರಿಳಿತ ಬರುತ್ತಿದ್ದು, ಶುಂಠಿ, ಈರುಳ್ಳಿ, ಟೊಮೆಟೊ, ಆಲೂಗಡ್ಡೆ ಸೇರಿದಂತೆ ಹಲವು ತರಕಾರಿಗಳ ಬೆಲೆ ಕಡಿಮೆಯಾಗಿದೆ. ಬೆಳ್ಳುಳ್ಳಿ, ಬಟಾಣಿ ಹಾಗೂ ಹಸಿ ಮೆಣಸಿನಕಾಯಿ ದುಬಾರಿಯಾಗಿವೆ.

‘ಶಿವರಾತ್ರಿ ವೇಳೆ ತರಕಾರಿ ದರಗಳು ಏರಿದ್ದವು. ಮರುದಿನದಿಂದಲೇ ದರಗಳು ಕುಸಿದಿವೆ. ಯುಗಾದಿವರೆಗೆ ತರಕಾರಿ ದರಗಳು ಏರುಪೇರು ಸಾಮಾನ್ಯ’ ಎಂದು ತರಕಾರಿ ವ್ಯಾಪಾರಿ ಭಾಸ್ಕರ್ ತಿಳಿಸಿದರು.

ಮಾರ್ಚ್‌ ಮೊದಲ ವಾರದಲ್ಲಿ ಕೊತ್ತಂಬರಿ ಸೊಪ್ಪಿನ ದರ ಕೆ.ಜಿ.ಗೆ ₹140ರಷ್ಟಿತ್ತು, ಈಗ ₹36ಕ್ಕೆ ಕುಸಿದಿದೆ. ಸದ್ಯ ಎಲ್ಲ ಸೊಪ್ಪಿನ ದರಗಳು ಕಡಿಮೆಯಾಗಿದ್ದು, ಮೆಂತ್ಯ, ದಂಟು, ಸಬ್ಬಕ್ಕಿ, ಪಾಲಕ್ ಹಾಗೂ ಕೊತ್ತಂಬರಿ ಸೊಪ್ಪು ಪ್ರತಿ ಕಟ್ಟಿಗೆ ₹10 ದಾಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT