ಭಾನುವಾರ, ಮೇ 16, 2021
22 °C

‘ಪ್ರತ್ಯೇಕ ರಾಜ್ಯ ಬೇಡಿಕೆಯೇ ಮೂರ್ಖತನದ್ದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಮೂರ್ಖತನದ ಪರಮಾವಧಿ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ಕೆಪಿಸಿಸಿ ಮುಂಚೂಣಿ ಘಟಕಗಳ ಮಾಜಿ ಪದಾಧಿಕಾರಿಗಳ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾದ ಕಾಂಗ್ರೆಸ್‌ ಸಚಿವರು, ಶಾಸಕರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕರ್ನಾಟಕ ಏಕೀಕರಣದ ಹಿನ್ನೆಲೆ, ಮಹನೀಯರ ಹೋರಾಟ, ಪರಿಶ್ರಮದ ಬಗ್ಗೆ ಏನೇನೂ ಗೊತ್ತಿಲ್ಲದವರು ಪ್ರತ್ಯೇಕ ರಾಜ್ಯ ಬೇಕು ಎಂದು ಕೇಳುತ್ತಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡುತ್ತಲೇ ಬಂದಿದೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ನಂಜುಂಡಪ್ಪ ಆಯೋಗ ರಚನೆ ಮಾಡಿದ್ದರು. ಅದರ ಅವಧಿ ಮುಗಿದಿತ್ತು. ನಾನು ಮುಖ್ಯಮಂತ್ರಿ ಆದ ನಂತರ ಅವಧಿ ವಿಸ್ತರಿಸಿದ್ದೆ. ಪ್ರತ್ಯೇಕ ರಾಜ್ಯ ಕೇಳುತ್ತಿರುವ ಶಾಸಕ ಶ್ರೀರಾಮುಲುಗೆ ಕರ್ನಾಟಕದ ಏಕೀಕರಣದ ಇತಿಹಾಸವೇ ಗೊತ್ತಿಲ್ಲ’ ಎಂದು ಕುಟುಕಿದರು.

ಹೈದರಾಬಾದ್ -ಕರ್ನಾಟಕ ಅಭಿವೃದ್ಧಿ ಕುರಿತಂತೆ ಸಂವಿಧಾನದ ಕಲಂ 371(ಜೆ) ತಿದ್ದುಪಡಿಗೆ ಪತ್ರ ಬರೆದಿದ್ದಾಗ ಅಂದು ಉಪಪ್ರಧಾನಿಯಾಗಿದ್ದ ಎಲ್.ಕೆ.ಅಡ್ವಾಣಿ ಒಪ್ಪಿರಲಿಲ್ಲ. ಆಗ ಬಿಜೆಪಿಯವರೂ ಕೂಡಾ ಮೌನ ವಹಿಸಿದ್ದರು. ಶ್ರೀರಾಮುಲು ಎಲ್ಲಿದ್ದರು ಎಂದೇ ಗೊತ್ತಿಲ್ಲ. ಈಗ ಪ್ರತ್ಯೇಕ ರಾಜ್ಯ ಕೇಳುತ್ತಿದ್ದಾರೆ’ ಎಂದು ಛೇಡಿಸಿದರು. 

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ‘ಮುಂದಿನ ಚುನಾವಣೆಯನ್ನು ಎದುರಿಸಿ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರವನ್ನು ಸ್ಥಾಪಿಸುವ ದೊಡ್ಡ ಸವಾಲು ನಮ್ಮ ಮುಂದಿದೆ. ಅದಕ್ಕೆ ಹಿರಿಯ ನಾಯಕರ ಮಾರ್ಗದರ್ಶನ ಬೇಕು. ಹೊಸ ನಾಯಕತ್ವವೂ ಬೆಳೆಯಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುತ್ತೇವೆ. ಹಾಗೆಂದು ಪಕ್ಷಕ್ಕೆ ತೊಂದರೆ ಕೊಡುವವರನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು’ ಎಂದು ಎಚ್ಚರಿಸಿದರು.

‘ಲೋಕಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಎತ್ತಿದ ಯಾವುದೇ ಪ್ರಶ್ನೆಗಳಿಗೂ ಪ್ರಧಾನಿ ಮೋದಿಯವರು ಉತ್ತರಿಸಲಿಲ್ಲ. ಬದಲಾಗಿ ತಮ್ಮದೇ ಆದ ಮಾತುಗಳನ್ನಾಡುತ್ತಾ ಹೋದರು. ತಮ್ಮನ್ನು ಯಾರೂ ಪ್ರಶ್ನಿಸಬಾರದು ಎಂಬ ಸರ್ವಾಧಿಕಾರಿ ಧೋರಣೆ ಅವರಲ್ಲಿದೆ’ ಎಂದು ಟೀಕಿಸಿದರು. 

‘ಬಿಜೆಪಿಯಿಂದ ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸವಾಗುತ್ತಿದೆ. ಬಸನಗೌಡ ಪಾಟೀಲ ಅವರಂತೂ ಬುದ್ಧಿಜೀವಿಗಳಿಗೆ ಗುಂಡಿಟ್ಟು ಸಾಯಿಸುವ ಮಾತನಾಡುತ್ತಿದ್ದಾರೆ. ಇಂಥ ಪ್ರವೃತ್ತಿಗಳನ್ನು ನೋಡಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಖಚಿತ’ ಎಂದರು.

*
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿನ್ನಡೆ ಅನುಭವಿಸಲು ಕೋಮುವಾದಿ ವೈರಸ್‌ಗಳೇ ಕಾರಣ. ಇವುಗಳ ನಿರ್ಮೂಲನೆಗೆ ಕಾರ್ಯಕರ್ತರು ಮುಂದಾಗಬೇಕು.
-ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು