ಮಂಗಳವಾರ, ಮಾರ್ಚ್ 28, 2023
33 °C

ಪಶು ಆಹಾರ ದರ ಇಳಿಸಿ: ರಾಜ್ಯ ರೈತ ಸಂಘ, ಹಸಿರುಸೇನೆ ಕಾರ್ಯಕರ್ತರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ಹಾಲಿನ ದರ ಏರಿಸಿ, ಪಶು ಆಹಾರ ದರ ಇಳಿಸಬೇಕೆಂದು ಒತ್ತಾಯಿಸಿ, ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರು ಹಾಗೂ ರೈತರು, ರಾಜಾನುಕುಂಟೆಯ ಪಶು ಆಹಾರ ಉತ್ಪಾದನಾ ಘಟಕದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ ತುಮಕೂರು, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಕೆಎಂಎಫ್ ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರಾಜ್ಯ ರೈತಸಂಘದ ರಾಜ್ಯಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಪಶು ಆಹಾರದ ದರವನ್ನು ಏಕಾಏಕಿ ಒಂದು ಟನ್‌ಗೆ ₹3500ಕ್ಕೆ ಏರಿಸಲಾಗಿದೆ. ಜತೆಗೆ, ಹಾಲಿನ ದರ ಏರಿಕೆ ಮಾಡದೆ ರೈತರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ದೂರಿದರು.

ಹಾಲು ಒಕ್ಕೂಟವು ಆಡಳಿತ ನಿರ್ವಹಣೆಗಾಗಿಯೇ ಅನಗತ್ಯವಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ, ರೈತರಿಗೆ ಮಾತ್ರ ನ್ಯಾಯಯುತ ದರ ನೀಡದೆ, ಗ್ರಾಹಕರಿಂದಲೂ ದುಬಾರಿ ಹಣ ವಸೂಲಿ ಮಾಡುತ್ತಿದೆ. ಗೋ ಶಾಲೆ ಗಳನ್ನು ಆರಂಭಿಸಿದರೆ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಆದರೆ ರೈತರು ಸರ್ಕಾರದಿಂದ ಯಾವುದೇ ಸಬ್ಸಿಡಿ ಪಡೆಯದೆ ಹೈನುಗಾರಿಕೆ ಮಾಡಿದರೂ ಹಾಲಿಗೆ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಸನ್ನ ಮಾತನಾಡಿ, ‘ಕಚ್ಚಾ ವಸ್ತುಗಳ ಬೆಲೆ ಹೆಚ್ಚಾದರೆ ಉತ್ಪಾದನಾ ವಸ್ತುಗಳ ಬೆಲೆಯೂ ಹೆಚ್ಚಾಗುತ್ತದೆ. ಅದರಂತೆ ಹಾಲಿನ ಬೆಲೆಯೂ ಹೆಚ್ಚಾಗಬೇಕು. ಪಶು ಆಹಾರದ ಮಾರುಕಟ್ಟೆಗಳ ಮೇಲೆ ಸರ್ಕಾರದ ನಿಯಂತ್ರಣವಿರಬೇಕು’ ಎಂದು ಒತ್ತಾಯಿಸಿದರು.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಪ್ರತಿಕ್ರಿಯಿಸಿ, ‘ಕಚ್ಚಾ ವಸ್ತುಗಳ ಬೆಲೆ ಶೇ 20ರಿಂದ 25ರಷ್ಟು ಹೆಚ್ಚಾಗಿರುವುದರಿಂದ ಪಶು ಆಹಾರದ ಬೆಲೆಯನ್ನು ಅನಿವಾರ್ಯವಾಗಿ ಏರಿಸಲಾಗಿದೆ. ಗ್ರಾಹಕರ ಹಾಲಿನ ದರ ಹೆಚ್ಚಿಸುವುದರ ಜೊತೆಗೆ ಪಶು ಆಹಾರದ ದರವನ್ನು ಇಳಿಸುವ ಬಗ್ಗೆ ನವೆಂಬರ್ 15ರೊಳಗಾಗಿ ಅಧ್ಯಕ್ಷರು ಹಾಗೂ ಸರ್ಕಾರದ ಕಾರ್ಯದರ್ಶಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು