ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ದುಡಿಮೆಯ ಅವಧಿ 8 ಗಂಟೆಗೆ ಇಳಿಸಲು ಆಗ್ರಹ

ಲೋಡಿಂಗ್‌ ಕಾರ್ಮಿಕರ ದಶಮಾನೋತ್ಸವ, ಶ್ರಮಿಕರ ಹಕ್ಕೊತ್ತಾಯ ಸಮಾವೇಶ
Published 10 ಜುಲೈ 2023, 16:18 IST
Last Updated 10 ಜುಲೈ 2023, 16:18 IST
ಅಕ್ಷರ ಗಾತ್ರ

ಬೆಂಗಳೂರು: ಅನ್ನಭಾಗ್ಯದ ಯಶಸ್ವಿಗಾಗಿ ದುಡಿಯುತ್ತಿರುವ ‌ಹಮಾಲಿ ಕಾರ್ಮಿಕರಿಗೆ ವೇತನ ಹೆಚ್ಚಿಸಲು ನಿಯಮ ರೂಪಿಸಬೇಕು, ದುಡಿಮೆಯ ಅವಧಿಯನ್ನು 12 ಗಂಟೆಯಿಂದ 8 ಗಂಟೆಗೆ ಇಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಲೋಡಿಂಗ್‌, ಅನ್‌ಲೋಡಿಂಗ್‌ ಕಾರ್ಮಿಕರ ಒಕ್ಕೂಟವು ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಶ್ರಮಿಕರ ಹಕ್ಕೊತ್ತಾಯ ಸಮಾವೇಶ ನಡೆಸಿತು.

ಸರ್ಕಾರ ನಿಗದಿ ಮಾಡಿದ ವೇತನ, ಇಎಸ್‌ಐ, ಪಿಎಫ್‌ಗಳನ್ನು ಗುತ್ತಿಗೆದಾರ ಸಂಸ್ಥೆಗಳು ನೀಡುತ್ತಿಲ್ಲ. ಹಾಗಾಗಿ ಗುತ್ತಿಗೆ ಪದ್ಧತಿ ರದ್ದು ಮಾಡಬೇಕು. ನೇರ ವೇತನ ಪಾವತಿ ಮಾಡಬೇಕು. ಕನಿಷ್ಠ 30,000 ವೇತನ ನೀಡಬೇಕು. ನಿವೃತ್ತಿಯ ವಯಸ್ಸಿನವರೆಗೆ ಕೆಲಸದಿಂದ ತೆಗೆಯಬಾರದು. ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಯಿತು.

ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಿಗೆ ನಗದು ಹಣ ನೀಡುವುದನ್ನು ನಿಲ್ಲಿಸಬೇಕು. ರಾಜ್ಯದಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ನೀಡಬೇಕು ಎಂದು ಒತ್ತಾಯಿಸಲಾಯಿತು.

ಸಮಾವೇಶ ಉದ್ಘಾಟಿಸಿದ ಹೈಕೋರ್ಟ್‌ ವಕೀಲ ಬಾಲನ್‌ ಮಾತನಾಡಿ, ‘2000ನೇ ಇಸವಿಯಲ್ಲಿ ಗುತ್ತಿಗೆ ಪದ್ಧತಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿ ಕಾರ್ಮಿಕರ ಬಾಯಿಗೆ ಮಣ್ಣು ಹಾಕಿತು. ಈಗಿನ ಕೇಂದ್ರ ಸರ್ಕಾರ ನಾಲ್ಕು ಕೋಡ್‌ಗಳನ್ನು ತಂದು ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಂಡಿದೆ’ ಎಂದು ಆಕ್ರೋಶ ವಕ್ತಪಡಿಸಿದರು.

ಸಾಮಾಜಿಕ ಹೋರಾಟಗಾರ ಡಾ.ವಾಸು ಎಚ್‌.ವಿ. ಮಾತನಾಡಿ, ‘ಬಡವರ ಮತಗಳನ್ನೇ ಅಧಿಕ ಪಡೆದು ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಬಡವರ ಪರವಾಗಿ ಕೆಲಸ ಮಾಡಿದರೆ ಇದನ್ನು ಜನಪರ ಇರುವ ಜನಪ್ರತಿನಿಧಿಗಳು ಎಂದು ಕರೆಯಬಹುದು. ಈ ಸರ್ಕಾರವೂ ಬಡವರ ಪರ ನಿಲ್ಲದೇ 12 ಗಂಟೆಯ ಕೆಲಸದ ಅವಧಿಯನ್ನು ಮುಂದುವರಿಸಿದರೆ, ಗುತ್ತಿಗೆ ಪದ್ಧತಿಯನ್ನು ಮುಂದುವರಿಸಿದರೆ ಇವರು ಜನಪ್ರತಿನಿಧಿಗಳಲ್ಲ ಗುತ್ತಿಗೆದಾರರು ಎಂಬುದು ಸಾಬೀತಾಗಲಿದೆ’ ಎಂದು ಎಚ್ಚರಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್‌. ಮುನಿಯಪ್ಪ ಬಂದು ಕಾರ್ಮಿಕರ ಅಹವಾಲುಗಳನ್ನು ಆಲಿಸಿದರು. ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಎಂಎಎಸ್‌ಎ ಸಂಯೋಜಕಿ ಸುಷ್ಮಾ ವರ್ಮಾ, ಜೆಸಿಟಿಯು ರಾಜ್ಯ ಸಂಚಾಲಕ ಕೆ.ವಿ. ಭಟ್‌, ರಾಜ್ಯ ರೈತ ಸಂಘದ ಉಪಾಧ್ಯಕ್ಷ ವೀರಸಂಗಯ್ಯ, ಕರ್ನಾಟಕ ಜನಶಕ್ತಿ ಗೌರವಾಧ್ಯಕ್ಷೆ ಗೌರಿ, ಕರ್ನಾಟಕ ಶ್ರಮಿಕ ಶಕ್ತಿ ಅಧ್ಯಕ್ಷ ವರದರಾಜೇಂದ್ರ, ಮಹಿಳಾ ಮುನ್ನಡೆ ರಾಜ್ಯ ಸಂಚಾಲಕಿ ಪೂರ್ಣಿಮಾ ಮಾತನಾಡಿದರು.

ಲೋಡಿಂಗ್ ಕಾರ್ಮಿಕರ ದಶಮಾನೋತ್ಸವ ಹಾಗೂ ಶ್ರಮಿಕರ ಹಕ್ಕೊತ್ತಾಯ ಸಮಾವೇಶ ನಡೆಯುತ್ತಿರುವಾಗ ಮಳೆಯಿಂದ ರಕ್ಷಿಸಿಕೊಳ್ಳಲು ಕುರ್ಚಿಗಳನ್ನೇ ಛತ್ರಿಯಂತೆ ತಲೆಮೇಲೆ ಹಿಡಿದಿರುವ ಕಾರ್ಮಿಕರು ಪ್ರಜಾವಾಣಿ ಚಿತ್ರ/
ಲೋಡಿಂಗ್ ಕಾರ್ಮಿಕರ ದಶಮಾನೋತ್ಸವ ಹಾಗೂ ಶ್ರಮಿಕರ ಹಕ್ಕೊತ್ತಾಯ ಸಮಾವೇಶ ನಡೆಯುತ್ತಿರುವಾಗ ಮಳೆಯಿಂದ ರಕ್ಷಿಸಿಕೊಳ್ಳಲು ಕುರ್ಚಿಗಳನ್ನೇ ಛತ್ರಿಯಂತೆ ತಲೆಮೇಲೆ ಹಿಡಿದಿರುವ ಕಾರ್ಮಿಕರು ಪ್ರಜಾವಾಣಿ ಚಿತ್ರ/

ಬಾರದ ಸಿಎಂ; ಬಂದ ಮಳೆ

ಅನ್ನಭಾಗ್ಯಕ್ಕೆ 10 ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಈ ಲೋಡಿಂಗ್‌ ಕಾರ್ಮಿಕರ ದಶಮಾನೋತ್ಸವ ಮತ್ತು ಶ್ರಮಿಕರ ಹಕ್ಕೊತ್ತಾಯ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಬೇಕಿತ್ತು. ಮುಖ್ಯಮಂತ್ರಿ ಬರಲಿದ್ದಾರೆ ಎಂದು ಸಂಘಟಕರು ಆಗಾಗ ತಿಳಿಸಿ ಸಮಾವೇಶ ಮುಂದುವರಿಸಿದರು. ಆದರೆ ಮುಖ್ಯಮಂತ್ರಿ ಅವರು ಬರಲಿಲ್ಲ. ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಮಳೆ ಜೋರಾಗಿ ಸುರಿಯತೊಡಗಿತು. ಸಮಾವೇಶದಲ್ಲಿ ಪಾಲ್ಗೊಂಡವರು ಕುಳಿತಿದ್ದ ಕುರ್ಚಿಗಳನ್ನೇ ಛತ್ರಿಯಂತೆ ತಲೆ ಮೇಲೆ ಹಿಡಿದು ಮಳೆಯಿಂದ ರಕ್ಷಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT