ಸೋಮವಾರ, ಮಾರ್ಚ್ 27, 2023
30 °C
ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಣಾಳಿಕೆ–2023 ಬಿಡುಗಡೆ

‘ಆಡಳಿತ ಪಕ್ಷದ ಸ್ವಾರ್ಥಕ್ಕೆ ಪ್ರಜಾಪ್ರಭುತ್ವ ಸಂಸ್ಥೆಗಳು ಬಲಹೀನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ತಮ್ಮ ಸ್ವಾರ್ಥಕ್ಕಾಗಿ ಆಡಳಿತ ಪಕ್ಷಗಳು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಹೀನಗೊಳಿಸುತ್ತಿವೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ವಿಷಾದಿಸಿದರು.

ನಗರದಲ್ಲಿ ಶನಿವಾರ ಪ್ರಜಾಪ್ರಭುತ್ವ ಮತ್ತು ಕೋಮು ಸೌಹಾರ್ದತೆಗಾಗಿ ವೇದಿಕೆ ಆಯೋಜಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಣಾಳಿಕೆ–2023 ಬಿಡುಗಡೆ ಹಾಗೂ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜಕೀಯ ಪ್ರಭುತ್ವದೊಂದಿಗೆ ಆರ್ಥಿಕ, ಸಾಮಾಜಿಕ ಪ್ರಭುತ್ವವು ಒಗ್ಗೂಡಬೇಕು ಎಂಬುದು ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿತ್ತು. ಆದರೆ, ರಾಜಕೀಯದ ಜತೆಗೆ ಆರ್ಥಿಕ, ಸಾಮಾಜಿಕ ವ್ಯವಸ್ಥೆ ಇಂದಿಗೂ ಸಮೀಕರಿಸಿಲ್ಲ. ನ್ಯಾಯಾಂಗ ವ್ಯವಸ್ಥೆಯನ್ನೂ ವ್ಯವಸ್ಥಿತವಾಗಿ ದುರ್ಬಲ ಮಾಡಲಾಗುತ್ತಿದೆ’ ಎಂದು ವಿಷಾದಿಸಿದರು.

ಹಿರಿಯ ವಕೀಲ ರವಿವರ್ಮ ಕುಮಾರ್, ‘ಆರೋಪಿ ಸ್ಥಾನದ ವ್ಯಕ್ತಿಗಳೇ ಕಾನೂನು ರಚಿಸುವ ಸ್ಥಾನದಲ್ಲಿದ್ದಾರೆ. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವ್ಯಕ್ತಿ ವಿರುದ್ಧ ಇನ್ನೂ ಎಫ್‌ಐಆರ್ ಆಗಿಲ್ಲ. ಇಂತಹ ವ್ಯವಸ್ಥೆಯ ಮೇಲೆ ಎಷ್ಟು ದಿನ ನಂಬಿಕೆ ಇಟ್ಟುಕೊಳ್ಳುವುದು’ ಎಂದು ಪ್ರಶ್ನಿಸಿದರು.

‘ಚುನಾವಣೆ ಆಯೋಗವು ಪಾರದರ್ಶಕವಾಗಿ ಚುನಾವಣೆ ನಡೆಸುವುದರಲ್ಲಿ ಎಡವಿದೆ. ಆಳುವ ವರ್ಗಕ್ಕೆ ಅನುಕೂಲಕರ ದಿನಾಂಕ ಘೋಷಿಸುತ್ತಿದೆ. ಸಿಬಿಐ, ಇ.ಡಿ ಹಾಗೂ ಪೊಲೀಸರು ಆಳುವ ವರ್ಗಕ್ಕೆ ಶಾಮೀಲಾಗಿದ್ದಾರೆ’ ಎಂದು ಹೇಳಿದರು.

ನಿವೃತ್ತ ಐಎಎಸ್‌ ಅಧಿಕಾರಿ ಎಂ.ಜಿ. ದೇವಸಹಾಯಂ ಮಾತನಾಡಿ, ‘ಪಾರದರ್ಶಕವಾಗಿ ಚುನಾವಣೆ ನಡೆಯದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರು ಸಡಿಲಗೊಳ್ಳಲಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಿಂದ ಹಿಡಿದು ಹಣ ಹಂಚಿಕೆ, ಜಾತಿ ವ್ಯವಸ್ಥೆ ಚುನಾವಣೆ ವೇಳೆ ಮುನ್ನೆಲೆಗೆ ಬರುತ್ತವೆ’ ಎಂದರು.

ಜಮಾತೆ ಇಸ್ಲಾಮಿ ಹಿಂದ್‌ನ ರಾಜ್ಯ ಅಧ್ಯಕ್ಷ ಡಾ.ಬೆಳಗಾಮಿ ಮಹಮ್ಮದ್‌ ಸಾದ್‌, ‘ಹಿಜಾಬ್‌, ಟಿಪ್ಪು, ಹಲಾಲ್‌, ವ್ಯಾಪಾರ ಹಾಗೂ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಿ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲಾಗುತ್ತಿದೆ’ ಎಂದು ವಿಷಾದಿಸಿದರು.

ಪಿಯುಸಿಎಲ್‌ನ ಅರವಿಂದ್‌ ನರೈನ್‌, ಎ.ಆರ್‌.ವಾಸವಿ ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು