ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: 26 ದಿನಗಳಲ್ಲಿ 2.4 ಸಾವಿರ ಡೆಂಗಿ ಪ್ರಕರಣ

Last Updated 27 ಜುಲೈ 2019, 3:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಡೆಂಗಿ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಜುಲೈ ತಿಂಗಳಲ್ಲಿ ಇದುವರೆಗೆ ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ 2,442 ಮಂದಿ ಡೆಂಗಿ ಜ್ವರಕ್ಕೆ ಚಿಕಿತ್ಸೆ ಪಡೆದಿದ್ದಾರೆ.

ವರ್ಷದ ಆರಂಭದಲ್ಲಿ ನಿಯಂತ್ರಣದಲ್ಲಿದ್ದ ಡೆಂಗಿ ಮುಂಗಾರು ಮಳೆ ಆರಂಭವಾದ ಬಳಿಕ ಎಲ್ಲೆಡೆ ವ್ಯಾಪಿಸಿದೆ. ‘ಈ ವರ್ಷ ಜೂನ್‌ ಅಂತ್ಯದವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 951 ಪ್ರಕರಣಗಳು ವರದಿಯಾಗಿದ್ದವು. ಇದೀಗ ಡೆಂಗಿ ಜ್ವರಕ್ಕೆ ಬಳಲಿದವರ ಸಂಖ್ಯೆ 3,393ಕ್ಕೆ ತಲುಪಿದೆ. ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮವನ್ನು (ಎನ್‌ವಿಬಿಡಿಸಿಪಿ) ಪಾಲಿಕೆ ಪರಿಣಾಮಕಾರಿಯಾಗಿ ಜಾರಿ ಮಾಡಿರುವುದೂ ಇದಕ್ಕೆ ಕಾರಣ’ ಎಂದು ಆರೋಗ್ಯ ಇಲಾಖೆ ಹೇಳಿಕೊಂಡಿದೆ.

ಈ ವರ್ಷ ಇದುವರೆಗೆ ಪಾಲಿಕೆ ವ್ಯಾ‍ಪ್ತಿಯಲ್ಲಿ 64,613 ಮಂದಿಗೆ ಡೆಂಗಿ ಇರುವ ಶಂಕೆ ವ್ಯಕ್ತವಾಗಿತ್ತು. ಇದರಲ್ಲಿ 15,683 ಮಂದಿಯನ್ನು ರಕ್ತ ಪರೀಕ್ಷೆಗೆ ಒಳಪಡಿಸಲಾಗಿದೆ. ಕಳೆದ ವಾರದಲ್ಲಿ 8,165 ಮಂದಿಗೆ ಡೆಂಗಿ ಇರುವ ಶಂಕೆ ವ್ಯಕ್ತವಾಗಿತ್ತು. ಈ ಪೈಕಿ 2,184 ಮಂದಿಯ ರಕ್ತವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 442 ಮಂದಿಗೆ ಈ ಜ್ವರ ಇರುವುದು ದೃಢಪಟ್ಟಿದೆ.

ಪಾಲಿಕೆ ವ್ಯಾಪ್ತಿಯಲ್ಲಿ 69 ಚಿಕೂನ್‌ ಗುನ್ಯಾ ಪ್ರಕರಣಗಳು ವರದಿಯಾಗಿವೆ. ಇನ್ನು ಎಚ್‌1ಎನ್‌1 ಪ್ರಕರಣಗಳ ಪಟ್ಟಿಯಲ್ಲಿ ಪಾಲಿಕೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದು, 244 ಮಂದಿಗೆ ಈ ಸೋಂಕು ಇರುವುದು ದೃಢಪಟ್ಟಿದೆ.

23 ಸೂಕ್ಷ್ಮ ವಾರ್ಡ್‌: ’ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ 23 ವಾರ್ಡ್‌ಗಳನ್ನು ಸೂಕ್ಷ್ಮಪ್ರದೇಶಗಳು ಎಂದು ಗುರುತಿಸಲಾಗಿದೆ. ಹೊಯ್ಸಳನಗರ, ಬೆಳ್ಳಂದೂರು, ರಾಜಾಜಿನಗರ, ಶಿವಾಜಿನಗರ, ಜೀವನ್‌ಬಿಮಾನಗರ ವಾರ್ಡ್‌ಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಅಂತಹ ಪ್ರದೇಶಗಳಲ್ಲಿ ರೋಗದ ನಿಯಂತ್ರಣಕ್ಕೆ ಈಡಿಸ್ ಸೊಳ್ಳೆಯ ಲಾರ್ವಾ ಪತ್ತೆ ಸೇರಿದಂತೆ ವಿವಿಧ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯಾ ನಿಯಂತ್ರಣ ಮತ್ತು ನಿವಾರಣೆಗೆ ಕೈಗೊಳ್ಳುವ ಬಗ್ಗೆ ಚರ್ಚಿಸಲು ವಲಯ ಮಟ್ಟದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಸಹಕಾರ ಕೋರಿದ್ದೇವೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರ ಸಹಾಯದಿಂದ ಪ್ರತಿ ತಿಂಗಳು ಎರಡು ಬಾರಿ ಜ್ವರ ಸಮೀಕ್ಷೆ ಹಾಗೂ ಲಾರ್ವಾ ಸಮೀಕ್ಷೆ ಮಾಡಲಾಗುತ್ತಿದೆ’ ಎಂದರು.

‘ನಗರದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ರೆಫರಲ್ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಅಗತ್ಯವಿರುವ ಔಷಧ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗಿದೆ. ಶಾಲಾ–ಕಾಲೇಜುಗಳಲ್ಲೂ ಅರಿವು ಕಾರ್ಯಕ್ರಮ ನಡೆಸುತ್ತಿದ್ದೇವೆ. ಸಾರ್ವಜನಿಕರಲ್ಲಿ ಆರೋಗ್ಯ ರಕ್ಷಣೆಯ ಅರಿವು ಮೂಡಿಸಲು ವಿದ್ಯಾರ್ಥಿಗಳ ನೆರವನ್ನೂ ಪಡೆಯುತ್ತಿದ್ದೇವೆ. ನೀರು ನಿಲ್ಲುವ ಪ್ರದೇಶದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಧೂಮೀಕರಣ (ಫಾಗಿಂಗ್) ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಬಿಬಿಎಂಪಿ ಅಂಕಿ ಅಂಶದ ಪ್ರಕಾರ 2017ರಲ್ಲಿ ನಗರದಲ್ಲಿ 7,285 ಹಾಗೂ 2018ರಲ್ಲಿ 4,134 ಡೆಂಗಿ ಪ್ರಕರಣ ವರದಿಯಾಗಿದ್ದವು. ಅದೇ ರೀತಿ, 2017ರಲ್ಲಿ 124 ಹಾಗೂ 134ಚಿಕೂನ್‌ಗುನ್ಯಾ ಪ್ರಕರಣ ಬೆಳಕಿಗೆ ಬಂದಿದ್ದವು.

ಹೆಚ್ಚು ಡೆಂಗಿ ಪ್ರಕರಣ ವರದಿಯಾದ ಪ್ರದೇಶ

ಹೊಯ್ಸಳನಗರ,ಬೆಳ್ಳಂದೂರು,ತಿಪ್ಪಸಂದ್ರ,ಜೀವನ್‌ಬಿಮಾನಗರ, ಕೋರಮಂಗಲ, ರಾಜಾಜಿನಗರ,ಬೆನ್ನಿಗಾನಹಳ್ಳಿ,ಸಿ.ವಿ.ರಾಮನ್ ನಗರ, ಶಿವಾಜಿನಗರ,ಬೊಮ್ಮನಹಳ್ಳಿ,ಆರ್‌.ಆರ್. ನಗರ , ದೊಮ್ಮಲೂರು,ಮಡಿವಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT