ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗ ನಿಯಂತ್ರಿಸುವಲ್ಲಿ ಬಿಬಿಎಂಪಿ ವಿಫಲ

ಪಾಲಿಕೆ ವೈಫಲ್ಯದಿಂದ ರಾಜ್ಯದಲ್ಲಿ ಯಶಸ್ಸು ಸಾಧಿಸಲಾಗುತ್ತಿಲ್ಲ l ಕ್ರಮ ಕೈಗೊಳ್ಳುವಂತೆ ಸೂಚಿಸಿದ ಆರೋಗ್ಯ ಇಲಾಖೆ
Last Updated 22 ಜುಲೈ 2019, 19:48 IST
ಅಕ್ಷರ ಗಾತ್ರ

ಬೆಂಗಳೂರು: ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯಾ, ಆನೆಕಾಲು ಸೇರಿದಂತೆ ವಿವಿಧ ರೋಗಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಫಲವಾಗಿದ್ದು, ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ.

ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ (ಎನ್‌ವಿಬಿಡಿಸಿಪಿ) ಅಡಿಯಲ್ಲಿ ಮಲೇರಿಯಾ, ಆನೆಕಾಲು, ಡೆಂಗಿ, ಚಿಕೂನ್‌ಗುನ್ಯಾ, ಮೆದುಳು ಜ್ವರ ರೋಗದ ನಿಯಂತ್ರಣ ಚಟುವಟಿಕೆಗಳನ್ನು ರಾಜ್ಯದಾದ್ಯಂತ ಅನುಷ್ಠಾನ ಮಾಡಲಾಗಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿಎನ್‌ವಿಬಿಡಿಸಿಪಿ ಸಮರ್ಪಕವಾಗಿ ಅನುಷ್ಠಾನವಾಗಿರುವುದಿಲ್ಲ. ಕಾಲಕಾಲಕ್ಕೆ ರೋಗದ ನಿಯಂತ್ರಣದ ಬಗ್ಗೆ ವರದಿಯನ್ನೂ ಪಾಲಿಕೆ ಸಲ್ಲಿಸುತ್ತಿಲ್ಲ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೂಡ ಅಧಿಕಾರಿಗಳು ಭಾಗವಹಿಸುತ್ತಿಲ್ಲ. ಇದರಿಂದ ರೋಗ ನಿವಾರಣೆಗೆ ಹಿನ್ನಡೆಯಾಗುತ್ತಿದೆ ಎಂದು ಇಲಾಖೆ ಸುತ್ತೋಲೆಯಲ್ಲಿ ಪ್ರಧಾನ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ ತಿಳಿಸಿದ್ದಾರೆ.

‘2025ರ ವೇಳೆಗೆ ಇಡೀ ರಾಜ್ಯವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ಮಲೇರಿಯಾ ವಾರ್ಷಿಕ ಪರಾವಲಂಬಿ ಸೂಚ್ಯಂಕದಆಧಾರದ ಮೇಲೆ ರಾಜ್ಯದ ಎಲ್ಲಾ ಗ್ರಾಮಗಳನ್ನೂ ಶ್ರೇಣೀಕರಣಗೊಳಿಸಿ, ಸೂಕ್ತ ಉಪಕ್ರಮವನ್ನು ನಿಗದಿಪಡಿಸಲಾಗಿದೆ.

ಇದೇ ರೀತಿ, ಪಾಲಿಕೆ ವ್ಯಾಪ್ತಿಯಲ್ಲಿಯೂ ವಾರ್ಡ್‌ಗಳನ್ನು ವರ್ಗೀಕರಿಸಿ, ಮಾರ್ಗದರ್ಶಿ ಚೌಕಟ್ಟನ್ನು ರೂಪಿಸಬೇಕಾಗುತ್ತದೆ. ಆದರೆ, ಪಾಲಿಕೆ ಅನುಪಾಲನಾ ವರದಿಯನ್ನೂಸಲ್ಲಿಸುತ್ತಿಲ್ಲ. ಇದರಿಂದ ಉಳಿದ ಜಿಲ್ಲೆಯಲ್ಲಿ ರೋಗಗಳು ನಿಯಂತ್ರಣಕ್ಕೆ ಬಂದರೂ ಪಾಲಿಕೆಯ ವೈಫಲ್ಯದಿಂದ ರಾಜ್ಯದಲ್ಲಿ ನಿಗದಿತ ಯಶಸ್ಸು ಸಾಧಿಸಲಾಗುತ್ತಿಲ್ಲ’ ಎಂದು ಉಲ್ಲೇಖಿಸಿದ್ದಾರೆ.

‘ಸೊಳ್ಳೆ ಕಡಿತದಿಂದ ಹರಡುವ ಡೆಂಗಿ ನಗರದಲ್ಲಿ ವರ್ಷದ ಎಲ್ಲಾ ದಿನ ಕಾಣಿಸಿಕೊಳ್ಳುತ್ತಿದೆ. ಅವೈಜ್ಞಾನಿಕ ನಗರೀಕರಣ, ನೀರಿನ ಪೂರೈಕೆಯಲ್ಲಿನ ವ್ಯತ್ಯಯ ಸಹ ಡೆಂಗಿ ಹಾವಳಿಗೆ ಕಾರಣ. ಹೀಗಾಗಿ ವಾರ್ಡ್‌ವಾರು ಕ್ರಿಯಾಯೋಜನೆ ರೂಪಿಸಿ, ಆರೋಗ್ಯ, ಶಿಕ್ಷಣ, ಜ್ವರ ಸಮೀಕ್ಷೆ, ಶಂಕಿತಪ್ರಕರಣದ ರಕ್ತದ ಮಾದರಿ ಸಂಗ್ರಹ, ಉತ್ಪತ್ತಿ ತಾಣ ನಾಶ, ಧೂಮೀಕರಣ ಕೈಗೊಳ್ಳಬೇಕಾಗುತ್ತದೆ. ಖಚಿತ ಪ್ರಕರಣಗಳು ವರದಿಯಾದ ಪ್ರದೇಶಗಳಿಗೆ ಭೇಟಿ ನೀಡಿ, ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ದೈನಂದಿನ ವರದಿಯನ್ನು ಇಲಾಖೆಗೆ ನೀಡಬೇಕು. ಆದರೆ, ಪಾಲಿಕೆ ಈ ಕೆಲಸವನ್ನು ಮಾಡುತ್ತಿಲ್ಲ’ ಎಂದು ತಿಳಿಸಿದ್ದಾರೆ.

2020ರ ವೇಳೆಗೆ ದೇಶದಲ್ಲಿ ಆನೆಕಾಲು ರೋಗ ನಿವಾರಣಾ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಚಟುವಟಿಕೆ ನಡೆಸಲಾಗುತ್ತಿದೆ.‌ ಪಾಲಿಕೆ ಮಾತ್ರ ಈವರೆಗೂ ಕ್ರಿಯಾ ಯೋಜನೆಯನ್ನೇ ರೂಪಿಸಿಲ್ಲ. ಅದೇ ರೀತಿ, ಮೆದುಳು ಜ್ವರದ ಬಗ್ಗೆ ಕೂಡ ಯಾವುದೇ ವರದಿ ಸಲ್ಲಿಸಿರುವುದಿಲ್ಲ.ಇನ್ನಾದರೂ ಎಚ್ಚೆತ್ತು ರೋಗಗಳ ನಿಯಂತ್ರಣಕ್ಕೆ ಸಹಕರಿಸಬೇಕು. ಬೆಳೆಯುತ್ತಿರುವ ನಗರದಲ್ಲಿ ಆರೋಗ್ಯಯುತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಆರೋಗ್ಯ ಇಲಾಖೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಡೆಂಗಿ ಪ್ರಕರಣ ನಗರದಲ್ಲೇ ಹೆಚ್ಚು

ರಾಜ್ಯದಲ್ಲಿ ಒಟ್ಟು 4,772 ಡೆಂಗಿ ಪ್ರಕರಣ ವರದಿಯಾಗಿವೆ. ಇದರಲ್ಲಿ 2,951 ಪ್ರಕರಣ ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಬೆಳಕಿಗೆ ಬಂದಿವೆ. ಅದೇ ರೀತಿ, 940 ಚಿಕೂನ್‌ಗುನ್ಯಾ ಪ್ರಕರಣದಲ್ಲಿ 57 ಪ್ರಕರಣ ಪಾಲಿಕೆ ವ್ಯಾಪ್ತಿಯಲ್ಲಿಯೇ ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT