ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದಲ್ಲಿ ಡೆಂಗಿ ಪ್ರಕರಣ ಇಳಿಕೆಯತ್ತ

ಆರೋಗ್ಯ ಇಲಾಖೆ ಪ್ರಕಾರ ಈ ತಿಂಗಳ 15 ದಿನಗಳಲ್ಲಿ 1,101 ಪ್ರಕರಣ ದೃಢ
Published : 15 ಸೆಪ್ಟೆಂಬರ್ 2024, 14:26 IST
Last Updated : 15 ಸೆಪ್ಟೆಂಬರ್ 2024, 14:26 IST
ಫಾಲೋ ಮಾಡಿ
Comments

ಬೆಂಗಳೂರು: ನಗರದಲ್ಲಿ ಕಳೆದ ಎರಡು ತಿಂಗಳು ಕಾಡಿದ್ದ ಡೆಂಗಿ ಪ್ರಕರಣಗಳು ಈಗ ಇಳಿಕೆಯತ್ತ ಸಾಗಿವೆ. ಈ ತಿಂಗಳು 15 ದಿನಗಳಲ್ಲಿ 1,101 ಪ್ರಕರಣಗಳು ದೃಢಪಟ್ಟಿವೆ. 

ಈ ವರ್ಷ ಡೆಂಗಿ ಜ್ವರಕ್ಕೆ ನಗರದ ಹಲವರು ಬಳಲಿದ್ದು, ಆರೋಗ್ಯ ಇಲಾಖೆ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ 12,558 ಮಂದಿ ಡೆಂಗಿ ಪೀಡಿತರಾಗಿದ್ದಾರೆ. ಅವರಲ್ಲಿ ಬಹುತೇಕರು ಚೇತರಿಸಿಕೊಂಡಿದ್ದು, ಮೂವರು ಜ್ವರದ ತೀವ್ರತೆಗೆ ಮೃತಪಟ್ಟಿದ್ದಾರೆ. ಮರಣ ಹೊಂದಿದ ಕೆಲವರಲ್ಲಿ ಡೆಂಗಿ ಶಂಕೆ ವ್ಯಕ್ತವಾಗಿದ್ದರೂ, ಆ ಪ್ರಕರಣಗಳ ‘ಸಾವಿನ ಲೆಕ್ಕಗಳ ವರದಿ’ಯಲ್ಲಿ (ಡೆತ್ ಆಡಿಟ್) ಅನ್ಯ ಕಾಯಿಲೆಗಳು ಕಾರಣವೆಂದು ಉಲ್ಲೇಖಿಸಿದ್ದರಿಂದ ಡೆಂಗಿ ಮರಣವೆಂದು ಪರಿಗಣಿಸಿಲ್ಲ. 

ಜೂನ್ ಅಂತ್ಯದವರೆಗೂ ನಿಯಂತ್ರಣದಲ್ಲಿದ್ದ ಪ್ರಕರಣ (1,563), ಜುಲೈನಲ್ಲಿ ಬಿಸಿಲು–ಮಳೆಯ ವಾತಾವರಣದಿಂದ ದಿಢೀರ್ ಏರಿಕೆಯಾಗಿತ್ತು. ಒಂದೇ ತಿಂಗಳಲ್ಲಿ 6,781 ಪ್ರಕರಣಗಳು ವರದಿಯಾಗಿದ್ದವು. ಹಾಟ್‌ ಸ್ಪಾಟ್‌ ಗುರುತಿಸುವಿಕೆ, ಫಾಗಿಂಗ್, ಜ್ವರ ಪರೀಕ್ಷೆ, ಲಾರ್ವಾ ಸಮೀಕ್ಷೆ ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಆಗಸ್ಟ್‌ನಲ್ಲಿ ಪ್ರಕರಣಗಳ ಸಂಖ್ಯೆ ತಕ್ಕ ಮಟ್ಟಿಗೆ ಹತೋಟಿಗೆ ಬಂದಿದ್ದವು. ಅಷ್ಟಾಗಿಯೂ ಮೂರು ಸಾವಿರಕ್ಕೂ ಅಧಿಕ ಮಂದಿ ಡೆಂಗಿ ಪೀಡಿತರಾಗಿದ್ದರು. ಕಳೆದ ತಿಂಗಳು 200ರ ಗಡಿಯ ಆಸುಪಾಸಿನಲ್ಲಿದ್ದ ದೈನಂದಿನ ಡೆಂಗಿ ಪ್ರಕರಣ, ಈಗ 50ರ ಆಸುಪಾಸಿನಲ್ಲಿದೆ. ಡೆಂಗಿ ಪೀಡಿತರಲ್ಲಿ ಸದ್ಯ 21 ಮಂದಿ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗಿದ್ದಾರೆ.

ಡೆಂಗಿ ಪ್ರಕರಣಗಳು ಏರಿಕೆಯಾದಾಗ ಇಲ್ಲಿನ ಕೆ.ಸಿ.ಜನರಲ್ ಆಸ್ಪತ್ರೆ, ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆ ಹಾಗೂ ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಲಾ 25 ಹಾಸಿಗೆಗಳನ್ನು, ಯಲಹಂಕ ತಾಲ್ಲೂಕು ಆಸ್ಪತ್ರೆ ಮತ್ತು ಕೆ.ಆರ್.ಪುರ ತಾಲ್ಲೂಕು ಆಸ್ಪತ್ರೆಯಲ್ಲಿ ತಲಾ 10 ಹಾಸಿಗೆಗಳನ್ನು ಡೆಂಗಿ ಪೀಡಿತರ ಚಿಕಿತ್ಸೆಗೆ ಮೀಸಲಿರಿಸಲಾಗಿತ್ತು. ಈಗ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗುತ್ತಿರುವ ಡೆಂಗಿ ಪೀಡಿತರ ಸಂಖ್ಯೆ ಇಳಿಕೆಯಾಗಿರುವುದರಿಂದ ಅನ್ಯ ಕಾಯಿಲೆಗೆ ಒಳಗಾದವರಿಗೆ ಮೊದಲಿನಂತೆ ಬಳಸಿಕೊಳ್ಳಲಾಗುತ್ತಿದೆ. 

‘ಪ್ರಕರಣಗಳು ಕಡಿಮೆಯಾದರೂ ಡೆಂಗಿ ಜ್ವರ ನಿಯಂತ್ರಣಕ್ಕೆ ಬಂದಿದೆ ಎನ್ನಲು ಸಾಧ್ಯವಿಲ್ಲ. ಬಿಸಿಲು–ಮಳೆಯ ವಾತಾವರಣದಿಂದ ಪ್ರಕರಣಗಳ ಏರಿಳಿತವಾಗುತ್ತದೆ. ಅಕ್ಟೋಬರ್ ಅಂತ್ಯದವರೆಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಡೆಂಗಿಯನ್ನು ಕಡೆಗಣಿಸಬಾರದು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT